ADVERTISEMENT

ಚಾಮರಾಜನಗರ | ಬೀದಿ ನಾಯಿ ಹಾವಳಿ: ಸುಪ್ರೀಂ ಆದೇಶ ಪಾಲಿಸಿ

ಜಿಲ್ಲಾಮಟ್ಟದ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೂಚನೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 4:22 IST
Last Updated 22 ನವೆಂಬರ್ 2025, 4:22 IST
ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಬೀದಿ ನಾಯಿಗಳ ತೊಂದರೆ ತಡೆಯುವ ನಿಟ್ಟಿನಲ್ಲಿ ನ್ಯಾಯಾಲಯದ ನಿರ್ದೇಶನಗಳನ್ನು ಅನುಷ್ಠಾನಗೊಳಿಸುವ ಸಂಬಂಧ ರಚಿಸಲಾಗಿರುವ ಜಿಲ್ಲಾಮಟ್ಟದ ಸಮಿತಿ ಸಭೆ ನಡೆಯಿತು
ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಬೀದಿ ನಾಯಿಗಳ ತೊಂದರೆ ತಡೆಯುವ ನಿಟ್ಟಿನಲ್ಲಿ ನ್ಯಾಯಾಲಯದ ನಿರ್ದೇಶನಗಳನ್ನು ಅನುಷ್ಠಾನಗೊಳಿಸುವ ಸಂಬಂಧ ರಚಿಸಲಾಗಿರುವ ಜಿಲ್ಲಾಮಟ್ಟದ ಸಮಿತಿ ಸಭೆ ನಡೆಯಿತು   

ಚಾಮರಾಜನಗರ: ಬೀದಿ ನಾಯಿಗಳ ಹಾವಳಿ ನಿಯಂತ್ರಣ ಕುರಿತು ಸುಪ್ರೀಂಕೋರ್ಟ್‌ ಆದೇಶದ ಅನುಸಾರ ಸ್ಥಳೀಯ ಸಂಸ್ಥೆಗಳು ಸಹಿತ ಸಂಬಂಧಪಟ್ಟ ಇಲಾಖೆಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸುಪ್ರೀಂಕೋರ್ಟ್‌ ಆದೇಶದಂತೆ ಬೀದಿ ನಾಯಿಗಳ ತೊಂದರೆ ತಡೆಯುವ ನಿಟ್ಟಿನಲ್ಲಿ ನ್ಯಾಯಾಲಯದ ನಿರ್ದೇಶನ ಅನುಷ್ಠಾನಗೊಳಿಸುವ ಸಂಬಂಧ ರಚಿಸಲಾಗಿರುವ ಜಿಲ್ಲಾಮಟ್ಟದ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸುಪ್ರೀಂಕೋರ್ಟ್‌ ನೀಡಿರುವ ನಿರ್ದೇಶನಗಳನ್ನು ಪಾಲಿಸಬೇಕು. ನಗರ ಹಾಗೂ ಸ್ಥಳೀಯ ಸಂಸ್ಥೆಗಳು ಪ್ರಾಣಿ ಜನನ ನಿಯಂತ್ರಣ ನಿಯಮಾವಳಿಗಳನ್ನು ಪಾಲಿಸಬೇಕು. ಬೀದಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಪ್ರಾಣಿ ಕಲ್ಯಾಣ ಮಂಡಳಿಯಿಂದ ಮಾನ್ಯತೆ ಪಡೆದ ಸಂಸ್ಥೆಗಳಿಂದ ಪ್ರಸ್ತಾವ ಪಡೆದು ನಿಯಮಾನುಸಾರ ಕ್ರಮವಹಿಸಬೇಕು’ ಎಂದು ಸೂಚನೆ ನೀಡಿದರು.

‘ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ‌ಸಂಸ್ಥೆಗಳು, ಜಿಲ್ಲಾ ಹಾಗೂ ಇತರೆ ಎಲ್ಲ ಸರ್ಕಾರಿ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ವೈದ್ಯಕೀಯ ಕಾಲೇಜುಗಳು, ಸಾರ್ವಜನಿಕ ಕ್ರೀಡಾಂಗಣಗಳು, ಕ್ರೀಡಾ ಸಂಕೀರ್ಣ, ಬಸ್ ನಿಲ್ದಾಣ, ಬಸ್ ಡಿಪೊ, ರೈಲು ನಿಲ್ದಾಣ ಹಾಗೂ ಇತರೆ ಸಾರ್ವಜನಿಕ ಪ್ರದೇಶಗಳಲ್ಲಿರುವ ಬೀದಿ ನಾಯಿಗಳನ್ನು ಸ್ಥಳೀಯ ಸಂಸ್ಥೆಗಳು ಸೆರೆ ಹಿಡಿದು ಸಂತಾನಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

ADVERTISEMENT

‘ಸಾರ್ವಜನಿಕ ಸ್ಥಳಗಳಿಂದ ಬೀದಿ ನಾಯಿಗಳನ್ನು ಹಿಡಿದ ಬಳಿಕ ಅವುಗಳನ್ನು ನಿಗದಿತ ಕಟ್ಟಡ, ಸ್ಥಳಗಳಿಗೆ ಸ್ಥಳಾಂತರಿಸಿ ಆಶ್ರಯ ನೀಡಬೇಕು. ರೇಬಿಸ್ ಪೀಡಿತ ನಾಯಿಗಳನ್ನು ಪ್ರತ್ಯೇಕ ಕಟ್ಟಡ ಸ್ಥಳಗಳಲ್ಲಿ ಇರಿಸಿ ನಿಗಾ ಇರಿಸಬೇಕು, ಪ್ರಾಣಿ ಜನನ ನಿಯಂತ್ರಣ (ಎಬಿಸಿ) ನಿಯಮಾವಳಿ ಅನ್ವಯ ರಕ್ಷಣೆ, ಆಹಾರ, ಆರೋಗ್ಯ ಪಾಲನೆಗೆ ಮುತುವರ್ಜಿ ವಹಿಸಬೇಕು’ ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶೃತಿ, ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಮಂಜುನಾಥ್, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ಎಂ.ವಿ.ಸುಧಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಚಿದಂಬರ, ಚಾಮರಾಜನಗರ ವಿಶ್ವವಿದ್ಯಾನಿಲಯದ ಕುಲಸಚಿವ (ಮೌಲ್ಯಮಾಪನ) ಜಿ.ವಿ. ವೆಂಕಟರಮಣ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಪುಟ್ಟಗೌರಮ್ಮ, ತಾಲ್ಲೂಕು ಪಶು ವೈದ್ಯಾಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರು, ಮುಖ್ಯಾಧಿಕಾರಿಗಳು ಹಾಗೂ ಅಧಿಕಾರಿಗಳು ಸಭೆಯಲ್ಲಿ ಇದ್ದರು.

ಬೀದಿನಾಯಿಗಳ ನಿಯಂತ್ರಣಕ್ಕೆ ತುರ್ತು ಕ್ರಮ ವಹಿಸಲು ಸೂಚನೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಕ್ರಮಕ್ಕೆ ಆದೇಶ ನಾಯಿ ಕಡಿದರೆ ನಿರ್ಲಕ್ಷ್ಯ ಬೇಡ; ಚಿಕತ್ಸೆ ಪಡೆದುಕೊಳ್ಳಲು ಸಲಹೆ

ನಾಯಿ ಕಡಿತ: ಉದಾಸೀನ ಬೇಡ ನಾಯಿ ಕಡಿದಾಗ ಸಾರ್ವಜನಿಕರು ಉದಾಸೀನ ತೋರದೆ ಚಿಕಿತ್ಸೆ ಪಡೆಯಬೇಕು. ನಾಯಿ ಕಡಿತದಿಂದ ಮಾರಣಾಂತಿಕ ರೇಬಿಸ್ ಕಾಯಿಲೆ ಬರುವ ಅಪಾಯವಿದೆ. ನಾಯಿಯ ಜೊಲ್ಲನ್ನು ಮುಟ್ಟುವುದು ಮುಟ್ಟಿದ ನಂತರ ಆಹಾರ ಸೇವನೆ ತರಚುಗಾಯಗಳನ್ನು ನಾಯಿಗಳು ನೆಕ್ಕುವುದರಿಂದ ಮನುಷ್ಯರ ಎಂಜಲಿನೊಂದಿಗೆ ನಾಯಿಯ ಜೊಲ್ಲು ಮಿಶ್ರಣವಾದರೆ ರೇಬಿಸ್ ಹರಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ನಾಯಿ ಕಚ್ಚಿದ ಜಾಗವನ್ನು ಹರಿಯುವ ಅಥವಾ ರಭಸವಾದ ನೀರಿನಿಂದ ಸಾಬೂನಿನೊಂದಿಗೆ ಚೆನ್ನಾಗಿ ತೊಳೆಯಬೇಕು. ಗಾಯವನ್ನು ಬಟ್ಟೆಗಳಿಂದ ಕಟ್ಟಬಾರದು. ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು. ಸಾಕು ನಾಯಿಗಳಿಗೆ ರೇಬೀಸ್ ಬಾರದಂತೆ ಲಸಿಕೆ ಹಾಕಿಸಬೇಕು. ಮಕ್ಕಳನ್ನು ನಾಯಿಯ ಹತ್ತಿರ ಆಟವಾಡಲು ಬಿಡಬಾರದು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ತಿಳಿಸಿದ್ದಾರೆ.

ಸಮನ್ವಯಾಧಿಕಾರಿ ನೇಮಿಸಿ ಸುಪ್ರೀಂಕೋರ್ಟ್‌ ಆದೇಶವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಜಿಲ್ಲಾಮಟ್ಟದಲ್ಲಿ ವಿವಿಧ ಇಲಾಖೆಗಳನ್ನೊಳಗೊಂಡ ಸಮಿತಿ ರಚಿಸಲಾಗಿದ್ದು ನಿಯಮಿತ ಸಭೆ ನಡೆಸಿ ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸಿರುವ ಬಗ್ಗೆ ಅನುಪಾಲನಾ ವರದಿ ಸಲ್ಲಿಸಬೇಕು. ಸ್ಥಳೀಯ ಸಂಸ್ಥೆಗಳೊಂದಿಗೆ ಸಮನ್ವಯತೆ ಸಾಧಿಸಲು ಎಲ್ಲ ಸಾರ್ವಜನಿಕ ಸಂಸ್ಥೆಗಳು ಸಮನ್ವಯಾಧಿಕಾರಿಯನ್ನು ನೇಮಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.