ADVERTISEMENT

ಮನ್‌ಮುಲ್‌ ಹಗರಣದ ತಪ್ಪಿತಸ್ಥರಿಗೆ ಶಿಕ್ಷೆ ಖಚಿತ: ಸಚಿವ ಕೆ.ಸಿ.ನಾರಾಯಣ ಗೌಡ

​ಪ್ರಜಾವಾಣಿ ವಾರ್ತೆ
Published 30 ಜೂನ್ 2021, 13:32 IST
Last Updated 30 ಜೂನ್ 2021, 13:32 IST
ನಾರಾಯಣ ಗೌಡ
ನಾರಾಯಣ ಗೌಡ   

ಚಾಮರಾಜನಗರ: ಮನ್‌ಮುಲ್‌ ಹಗರಣದ ತಪ್ಪಿತಸ್ಥರು ದೊಡ್ಡವರಾಗಿದ್ದರೂ, ಚಿಕ್ಕವರಾಗಿದ್ದರೂ ಶಿಕ್ಷೆಯಾಗುವುದು ಖಚಿತಎಂದು ಯುವಜನ ಸಬಲೀಕರಣ ಮತ್ತು ಕ್ರೀಡೆ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣ ಗೌಡ ಅವರು ಬುಧವಾರ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹೈನುಕಾರಿಕೆಯನ್ನೇ ಬಹುತೇಕ ರೈತ ಕುಟುಂಬಗಳು ನಂಬಿವೆ. ಅವರಿಗೆ ಅನ್ಯಾಯ ಆಗಲು ನಾನು ಬಿಡುವುದಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದೇವೆ. ಹಗರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಲಾಗುತ್ತದೆ’ ಎಂದರು.

ದೇವೇಗೌಡ ಅವರು ತನಿಖೆಗೆ ಅಡ್ಡಗಾಲು ಹಾಕುತ್ತಿದ್ದಾರೆ ಎಂಬ ಆರೋಪ ಇದೆಯಲ್ಲಾ ಎಂದು ಕೇಳಿದ್ದಕ್ಕೆ, ‘ತನಿಖೆಗೆ ದೇವೇಗೌಡರು ಅಡ್ಡಗಾಲು ಹಾಕಿಲ್ಲ. ನನಗೆ ಪೋನ್ ಕೂಡ ಮಾಡಿಲ್ಲ’ ಎಂದರು.

ADVERTISEMENT

ಚಲುವರಾಯಸ್ವಾಮಿ ಅವರು ದೇವೇಗೌಡ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಅವರ ವಿರುದ್ಧ ನೇರವಾಗಿ ಆರೋಪ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಕುಮಾರಸ್ವಾಮಿ ಅವರು ಕೂಡ ರೈತರ ಮಗ. ಅವರು ತನಿಖೆಗೆ ಸಹರಿಸುತ್ತಾರೆ.ರೈತರ ಶ್ರಮದ ಹಣ ತಿಂದವರು ಉದ್ಧಾರವಾಗುವುದಿಲ್ಲ.ರೈತರಿಗೆ ಅನ್ಯಾಯ ಮಾಡುವವರಿಗೆ ಯಾರೂ ಬೆಂಬಲ ನೀಡಬಾರದು’ ಎಂದರು.

‘ಹಗರಣದ ಬಗ್ಗೆ ಮುಖ್ಯಮಂತ್ರಿ ಹಾಗೂ ಮನ್‌ಮುಲ್‌ ಅಧ್ಯಕ್ಷರ ಜೊತೆ ಮಾತನಾಡಿದ್ದೇನೆ. ಲಾರಿ ಮಾಲೀಕರ ತಪ್ಪಿನಿಂದಾಗಿ ಇದು ನಡೆದಿದೆ. ಇದರಲ್ಲಿ ಮನ್‌ಮುಲ್‌ ನಿರ್ದೇಶಕರ ಪಾತ್ರದ ಬಗ್ಗೆ ಗೊತ್ತಿಲ್ಲ. ಮಾಹಿತಿ ಕಲೆ ಹಾಕುತ್ತಿದ್ದೇವೆ’ ಎಂದು ನಾರಾಯಣಗೌಡ ಅವರು ಹೇಳಿದರು. ‌

‘ಹಾಲಿನ ಒಕ್ಕೂಟವನ್ನು ಸೂಪರ್ ಸೀಡ್ ಮಾಡುವುದಿಲ್ಲ. ಮಾಡಿದರೆ, ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರುತ್ತಾರೆ’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.