ADVERTISEMENT

ಚಾಮರಾಜನಗರ: ಇಬ್ಭಾಗವಾದ ಕಬ್ಬು ಬೆಳೆಗಾರರ ಸಂಘ

ಹಾಲಿ ಸಂಘದಿಂದ ದೂರವಾಗಿ ಹೊಸ ಸಂಘ ಕಟ್ಟಿದ ಹಳ್ಳಿಕೆರೆ ಹುಂಡಿಭಾಗ್ಯರಾಜ್‌

ಸೂರ್ಯನಾರಾಯಣ ವಿ.
Published 4 ಫೆಬ್ರುವರಿ 2024, 6:11 IST
Last Updated 4 ಫೆಬ್ರುವರಿ 2024, 6:11 IST
ಹಳ್ಳಿಕೆರೆಹುಂಡಿ ಭಾಗ್ಯರಾಜ್‌
ಹಳ್ಳಿಕೆರೆಹುಂಡಿ ಭಾಗ್ಯರಾಜ್‌   

ಚಾಮರಾಜನಗರ: ಕಬ್ಬು ಬೆಳೆಗಾರರ ಪರವಾಗಿ ಹೋರಾಡುತ್ತಿರುವ ‘ರಾಜ್ಯ ಕಬ್ಬು ಬೆಳೆಗಾರರ ಸಂಘ’ ಇಬ್ಭಾಗವಾಗಿದೆ. ಸಂಘದ ಮೈಸೂರು–ಚಾಮರಾಜನಗರ ಘಟಕದ ಕಾರ್ಯಾಧ್ಯಕ್ಷರಾಗಿದ್ದ ಹಳ್ಳಿಕೆರೆಹುಂಡಿ ಭಾಗ್ಯರಾಜ್‌ ಹಾಗೂ ಬೆಂಬಲಿಗರು ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಅವರಿಂದ ದೂರವಾಗಿದ್ದು, ‘ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ’ ಎಂಬ ಹೊಸ ಸಂಘಟನೆ ಕಟ್ಟಿಕೊಂಡಿದ್ದಾರೆ. 

‘ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಅವರ ಕೆಲವು ನಡೆಗಳನ್ನು ಪ್ರಶ್ನಿಸಿದ್ದಕ್ಕೆ, ವೈಯಕ್ತಿಕ ವಿಚಾರಗಳನ್ನಿಟ್ಟುಕೊಂಡು ನೋಟಿಸ್‌ ನೀಡಿದ್ದರು. ನಮ್ಮನ್ನು ಸಂಘದಿಂದ ಹೊರ ಹಾಕಲು ಯತ್ನ ನಡೆದಿತ್ತು. ಹಾಗಾಗಿ, ನಾವೇ ಹೊರ ಬಂದು ಸಂಘಟನೆ ಮಾಡಿದ್ದೇವೆ’ ಎಂದು ಹೊಸ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ಈ ವಿಷಯವನ್ನು ದೃಢಪಡಿಸಿರುವ ಶಾಂತಕುಮಾರ್‌, ‘ಸಂಘದಲ್ಲಿ ಶಿಸ್ತಿಗೆ ಮಹತ್ವ ಕೊಡುತ್ತೇವೆ. ಸಂಘಟನೆಯಲ್ಲಿರುವವರು ಶಿಸ್ತಿನಿಂದ ನಡೆದುಕೊಳ್ಳಬೇಕು. ವರ್ತನೆ ಸರಿಪಡಿಸಿಕೊಳ್ಳುವಂತೆ ಶಿಸ್ತು ಸಮಿತಿ ನೋಟಿಸ್‌ ನೀಡಿತ್ತು. ಎಚ್ಚರಿಕೆಯನ್ನೂ ನೀಡಿದ್ದೆವು. ಅದು ಬಿಟ್ಟರೆ, ನಾವು ಅವರನ್ನು ಹೊರಗೆ ಹಾಕಿಲ್ಲ’ ಎಂದರು. 

ADVERTISEMENT

ಆರೋಪ–ಪ್ರತ್ಯಾರೋಪ: ‘ಕೊಳ್ಳೇಗಾಲದ ಕುಂತೂರಿನ ಸಕ್ಕರೆ ಕಾರ್ಖಾನೆಗೆ ಸಂಬಂಧಿಸಿದ ವಿಚಾರದಲ್ಲಿ ಬೆಂಗಳೂರಿನಲ್ಲಿ ಸಕ್ಕರೆ ಆಯುಕ್ತರೊಂದಿಗೆ ಕುರುಬೂರು ಶಾಂತಕುಮಾರ್‌ ಸಭೆ ನಡೆಸಿದ್ದರು. ಈ ವಿಚಾರವನ್ನು ನಮ್ಮ ಗಮನಕ್ಕೆ ತಂದಿರಲಿಲ್ಲ’ ಎಂಬುದು ಭಾಗ್ಯರಾಜ್‌ ಬಣದ ವಾದ.

‘ಸಂಘದ ರಾಜ್ಯ ಅಧ್ಯಕ್ಷರೂ ಇವರೇ, ರಾಷ್ಟ್ರ ಅಧ್ಯಕ್ಷರೂ ಇವರೇ. ಬಣ್ಣಾರಿ ಸಕ್ಕರೆ ಕಾರ್ಖಾನೆ ಜಾಗೃತ ಸಮಿತಿಯ ಸದಸ್ಯರೂ ಇವರೇ. ಸಂಘದಲ್ಲಿ ವಿಕೇಂದ್ರೀಕರಣ ವ್ಯವಸ್ಥೆಯನ್ನು ಶಾಂತಕುಮಾರ್‌ ಒಪ್ಪುತ್ತಿರಲಿಲ್ಲ’ ಎಂಬುದು ಈ ಬಣದವರ ಮತ್ತೊಂದು ಆರೋಪ.

‘ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಒಂದೂವರೆ ತಿಂಗಳ ಹಿಂದೆ ಮೈಸೂರಿನಲ್ಲಿ ಮುಖ್ಯಮಂತ್ರಿ ನಿವಾಸದ ಮುಂದೆ ಪ್ರತಿಭಟನೆ ನಡೆಸಲಾಗಿತ್ತು. ನಂತರ ಸರ್ಕಾರವು ಶಾಂತಕುಮಾರ್‌ ಅವರನ್ನು ರಾಜ್ಯ ಕಬ್ಬು ಖರೀದಿ ಮತ್ತು ನಿಯಂತ್ರಣ ಮಂಡಳಿಯ ನಾಮ ನಿರ್ದೇಶಿತ ಸದಸ್ಯರನ್ನಾಗಿ ನೇಮಿಸಿದೆ. ಆ ಹುದ್ದೆಯ ಮೇಲೆ ಕಣ್ಣಿಟ್ಟುಕೊಂಡೇ ಶಾಂತಕುಮಾರ್‌ ಪ್ರತಿಭಟಿಸಿದ್ದರು’ ಎಂದೂ ಭಾಗ್ಯರಾಜ್‌ ಆರೋಪಿಸಿದ್ದಾರೆ. 

ಎಲ್ಲ ಆರೋಪಗಳನ್ನು ತಳ್ಳಿ ಹಾಕಿರುವ ಶಾಂತಕುಮಾರ್‌ ಬಣದವರು, ‘ಸಕ್ಕರೆ ಆಯುಕ್ತರ ಜೊತೆಗೆ ಗೋಪ್ಯ ಸಭೆ ನಡೆದಿರಲಿಲ್ಲ. ಸಕ್ಕರೆ ಕಾರ್ಖಾನೆಗಳ ವಿಚಾರವಾಗಿ ಈ ಹಿಂದೆ ಮುಖ್ಯಮಂತ್ರಿಯೊಂದಿಗೆ ನಡೆದ ಸಭೆಯಲ್ಲಿ ಭಾಗ್ಯರಾಜ್‌ ಕೂಡ ಪಾಲ್ಗೊಂಡಿದ್ದರು. ಸಂಘಟನೆಯಲ್ಲಿ ಅಧಿಕಾರ ಕೇಂದ್ರೀಕರಣ ಎಂಬುದಿಲ್ಲ. ಜಿಲ್ಲಾವಾರು ಸಂಘಟನೆಗಳಿವೆ. ಶಿಸ್ತು ಸಮಿತಿ ನೋಟಿಸ್‌ ನೀಡಿದ್ದನ್ನೇ ಮುಂದಿಟ್ಟುಕೊಂಡು ಇಂತಹ ಆರೋಪ ಮಾಡಲಾಗುತ್ತಿದೆ’ ಎಂದು ಪ್ರತಿಪಾದಿಸಿದ್ದಾರೆ. 

ಕುರುಬೂರು ಶಾಂತಕುಮಾರ್‌
ಚಾಮರಾಜನಗರ ಮೈಸೂರು ಮಂಡ್ಯ ದಾವಣಗೆರೆ ಸೇರಿ 7 ಜಿಲ್ಲೆಯವರು ಬೆಂಬಲ ನೀಡಿದ್ದಾರೆ. ಕಬ್ಬು ಬೆಳೆಗಾರರ ಹಿತರಕ್ಷಣೆಗಾಗಿ ಹೋರಾಟ ನಡೆಸಲಿದ್ದೇವೆ
-ಹಳ್ಳಿಕೆರೆಹುಂಡಿ ಭಾಗ್ಯರಾಜ್‌ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ
ಯಾರು ಇದ್ದರೂ ಇಲ್ಲದಿದ್ದರೂ ಸಂಘ ಹೋರಾಟ ಮುಂದುವರಿಯುತ್ತದೆ. ಹೊಸ ಸಂಘಟನೆ ಮೂಲಕ ಅವರು ಕೂಡ ಜನರಿಗೆ ರೈತರಿಗೆ ಒಳ್ಳೆಯದನ್ನೇ ಮಾಡಲಿ
ಕುರುಬೂರು ಶಾಂತಕುಮಾರ್‌ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.