ADVERTISEMENT

ಸುಳ್ವಾಡಿ: 24ರಿಂದ ಮಾರಮ್ಮ ದೇವಾಲಯ ಭಕ್ತರಿಗೆ ಮುಕ್ತ

ವಾಸ್ತವ್ಯಕ್ಕೆ ಅವಕಾಶ ಇಲ್ಲ, ತಮಿಳುನಾಡಿನ ಭಕ್ತರಿಗೆ ತಾತ್ಕಾಲಿಕ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2020, 17:00 IST
Last Updated 16 ಅಕ್ಟೋಬರ್ 2020, 17:00 IST
ಸುಳ್ವಾಡಿ ಮಾರಮ್ಮ ದೇವಾಲಯ
ಸುಳ್ವಾಡಿ ಮಾರಮ್ಮ ದೇವಾಲಯ   

ಚಾಮರಾಜನಗರ: ಜಿಲ್ಲೆಯ ಹನೂರು ತಾಲ್ಲೂಕಿನ ಸುಳ್ವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇವಾಲಯವನ್ನು ಇದೇ 24ರ ಮಧ್ಯಾಹ್ನ 12.30ರಿಂದ ಸಾರ್ವಜನಿಕರ ಮತ್ತು ಭಕ್ತರ ಪ್ರವೇಶಕ್ಕೆ ಮುಕ್ತಗೊಳಿಸಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಆದೇಶಿಸಿದ್ದಾರೆ.

ಕೋವಿಡ್‌–19 ತಡೆಗೆ ಪಾಲಿಸಲಾಗುವ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

21ರಿಂದ 24ರವರೆಗೆ ದೇವಾಲಯದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ಹಮ್ಮಿಕೊಳ್ಳಲಾಗಿದೆ.

ADVERTISEMENT

ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ದರ್ಶನ:ದೇವಾಲಯದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಹಾಗೂ ದೇವಸ್ಥಾನಕ್ಕೆ ಬರುವ ಭಕ್ತಾದಿಗಳೆಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕನಿಷ್ಠ ಎರಡು ಮೀಟರ್ ಭೌತಿಕ ಅಂತರ ಕಾಯ್ದಿರಿಸಿಕೊಳ್ಳುವ ವ್ಯವಸ್ಥೆ ಮಾಡಬೇಕು. ದೇವಾಲಯದ ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ಯಾನರ್‌ನಿಂದ ತಪಾಸಣೆ ನಡೆಸಬೇಕು. ಕೈಗಳನ್ನು ಸ್ವಚ್ಛಗೊಳಿಸಲು ಸ್ಯಾನಿಟೈಜರ್ ವ್ಯವಸ್ಥೆ ಕಲ್ಪಿಸಬೇಕು. ಬೆಳಿಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಬೇಕು. ವಿಶೇಷ ಸೇವೆ ಪೂಜೆಗಳಿಗೆ ಅವಕಾಶ ಇಲ್ಲ.

ಬೆಳಿಗ್ಗೆ 7 ರಿಂದ 9ರವರೆಗೆ ಹೂವು ಕೇಳುವ (ಪ್ರಸಾದ) ಸೇವೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದೆ. ಭಕ್ತಾದಿಗಳು ರಾತ್ರಿ ವೇಳೆ ವಾಸ್ತವ್ಯ ಹೂಡುವುದನ್ನು ನಿಷೇಧಿಸಲಾಗಿದೆ. ತಮಿಳುನಾಡಿನ ಭಕ್ತರ ಪ್ರವೇಶಕ್ಕೆ ತಾತ್ಕಾಲಿಕವಾಗಿ ನಿರ್ಬಂಧ ವಿಧಿಸಲಾಗಿದೆ.

ತೀರ್ಥ ಮತ್ತು ನೈವೇದ್ಯ ಪ್ರಸಾದದ ವಿತರಣೆ, ಮಹಾ ಮಂಗಳಾರತಿ ಜ್ಯೋತಿ ಮುಟ್ಟುವುದನ್ನು ನಿರ್ಬಂಧಿಸಿದೆ. ಆದರೆ ದೂರದಿಂದ ಮಂಗಳಾರತಿ ಪಡೆದು ನಮಸ್ಕರಿಸಲು ಅವಕಾಶ ಕಲ್ಪಿಸಬೇಕು. ದಾಸೋಹ, ಪರ ಮಾಡುವುದು ಮತ್ತು ಇತರೆ ಪ್ರಸಾದ ವಿನಿಯೋಗದ (ಅನ್ನದಾನ) ವ್ಯವಸ್ಥೆಗೆ ಸದ್ಯ ಅವಕಾಶ ಇಲ್ಲ.

ದೇವಾಲಯಕ್ಕೆ 10 ವರ್ಷದೊಳಗಿನ ಮಕ್ಕಳು ಮತ್ತು 70 ವರ್ಷ ಮೇಲ್ಪಟ್ಟ ಹಾಗೂ ಗರ್ಭಿಣಿಯರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದೆ. ಲಗೇಜ್ ಆಟೋ, ಯಾವುದೇ ಗೂಡ್ಸ್ ವಾಹನದಲ್ಲಿ, ಲಾರಿಗಳಲ್ಲಿ ಮತ್ತು ಟ್ರ್ಯಾಕ್ಟರ್‌ಗಳಲ್ಲಿ ಭಕ್ತರು ಗುಂಪುಗೂಡಿ ಬರುವುದನ್ನು ನಿಷೇಧಿಸಲಾಗಿದೆ.

ದೇವಾಲಯದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಅಥವಾ ಭಕ್ತಾದಿಗಳಲ್ಲಿ ಜ್ವರ, ಕೆಮ್ಮು, ನೆಗಡಿ ಅಥವಾ ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಅಂತಹವರನ್ನು ದೇವಾಲಯದ ಪ್ರವೇಶಕ್ಕೆ ನಿರ್ಬಂಧಿಸಿ, ಸ್ಥಳೀಯ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಅಥವಾ ಜಿಲ್ಲಾ ಕಂಟ್ರೋಲ್ ರೂಂ ನಂಬರ್ 1077ಕ್ಕೆ ಮಾಹಿತಿ ನೀಡಬೇಕು. ಷರತ್ತುಗಳನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.