ADVERTISEMENT

ಚಾಮರಾಜನಗರ | ಬೇಸಿಗೆ ಶಿಬಿರದಿಂದ ಮಕ್ಕಳ ವ್ಯಕ್ತಿತ್ವ ಬೆಳವಣಿಗೆ: ಜನ್ನಿ

ಆತ್ಮೀಯ ರಂಗ ಪ್ರಯೋಗಾಲಯ ಟ್ರಸ್ಟ್‌ನ ‘ಆಡು ಬಾ ನನ ಕಂದ’ ಶಿಬಿರ ಸಮಾರೋಪ

​ಪ್ರಜಾವಾಣಿ ವಾರ್ತೆ
Published 16 ಮೇ 2022, 3:19 IST
Last Updated 16 ಮೇ 2022, 3:19 IST
‘ಆಡು ಬಾ ನನ ಕಂದ’ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ರಂಗಕರ್ಮಿ ಎಚ್‌.ಜನಾರ್ದನ್‌ ಉದ್ಘಾಟಿಸಿದರು. ಗಾಯಕ ಮಹೇಂದ್ರ, ಗಂಗಾಧರ್‌, ಸಿಸ್ಟರ್‌ ಅನಿತಾ ಡೈಸಿ, ಕಿರಣ್‌ ಗಿರ್ಗಿ ಇದ್ದಾರೆ
‘ಆಡು ಬಾ ನನ ಕಂದ’ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ರಂಗಕರ್ಮಿ ಎಚ್‌.ಜನಾರ್ದನ್‌ ಉದ್ಘಾಟಿಸಿದರು. ಗಾಯಕ ಮಹೇಂದ್ರ, ಗಂಗಾಧರ್‌, ಸಿಸ್ಟರ್‌ ಅನಿತಾ ಡೈಸಿ, ಕಿರಣ್‌ ಗಿರ್ಗಿ ಇದ್ದಾರೆ   

ಚಾಮರಾಜನಗರ: ‘ಬೇಸಿಗೆ ಶಿಬಿರಗಳು ಮಕ್ಕಳ ವ್ಯಕ್ತಿತ್ವ, ಸಾಮಾಜಿಕ ಹಾಗೂ ಕಲಾ ಬೆಳವಣಿಗೆಗೆ ಸಹಕಾರಿಯಾಗಿವೆ’ ಎಂದು ರಂಗ ಕರ್ಮಿ ಎಚ್‌.ಜನಾರ್ದನ್‌ (ಜನ್ನಿ) ಭಾನುವಾರ ಇಲ್ಲಿ ಅಭಿಪ್ರಾಯಪಟ್ಟರು.

ನಗರದ ಆತ್ಮೀಯ ರಂಗ ಪ್ರಯೋಗಾಲಯ ಟ್ರಸ್ಟ್‌ ಆಯೋಜಿಸಿದ್ದ ‘ಆಡು ಬಾ ನನ ಕಂದ’ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಮಾತನಾಡಿದ ಅವರು, ‘ಮಕ್ಕಳನ್ನು ನಾವು ಹಿಡಿದಿಡುವುದರಲ್ಲಿ ಅರ್ಥವಿಲ್ಲ. ಅವರನ್ನು ಆಟವಾಡುವುದಕ್ಕೆ ಬಿಟ್ಟು ಬಿಡಬೇಕು. ಯಾವಾಗ ತಡೆಯುತ್ತೇವೆಯೋ ಅವರು ಕೆಟ್ಟ ಆಟವಾಡುವುದಕ್ಕೆ ಆರಂಭಿಸುತ್ತಾರೆ. ಬೇಸಿಗೆ ಶಿಬಿರಗಳಲ್ಲಿ ವಿವಿಧ ಚಟುವಟಿಕೆ ಮೂಲಕ ಮಕ್ಕಳಿಗೆ ಕಲಿಸುವುದರಿಂದ ಅವರಲ್ಲಿ ಚೈತನ್ಯ ಮೂಡುತ್ತದೆ. ವ್ಯಕ್ತಿತ್ವವೂ ರೂಪಿತವಾಗುತ್ತದೆ’ ಎಂದರು.

‘ಒಂದು ಮಗುವನ್ನು ಪ್ರಜ್ಞಾವಂತನನ್ನಾಗಿ ರೂಪಿಸಿ ದೇಶದ ಸತ್ಪ್ರಜೆಯನ್ನಾಗಿ ಸಿದ್ಧಪಡಿಸುವುದುತಂದೆ–ತಾಯಿ, ಅ‌ಕ್ಕ ಪಕ್ಕದವರು ಹಾಗೂ ಸಮಾಜದ ಕರ್ತವ್ಯ. ನಾವು ಹೆತ್ತ ಮಕ್ಕಳಾದರೂ ಅವರು ನಮ್ಮ ಮಕ್ಕಳು ಅಲ್ಲ. ಯಾಕೆಂದರೆ ಮಕ್ಕಳು ದೇಶಕ್ಕೆ ಸೇರಿದ್ದು. ಮಕ್ಕಳ ಬೆಳವಣಿಗೆಗೆ ನಮ್ಮ ದೇಶದಲ್ಲಿರುವಂತಹ ಅವಕಾಶ ಎಲ್ಲಿಯೂ ಇಲ್ಲ.ಭಾರತದಲ್ಲಿ ವ್ಯಕ್ತಿ ಪ್ರಜ್ಞಾವಂತನಾಗಿದ್ದರೆ ಬದುಕು ಹತ್ತಿರವಾಗಿರುತ್ತದೆ. ಸುಂದರವಾಗಿರುತ್ತದೆ.ಹಾಗಾಗಿ, ಬೆಳೆಯುವ ಪೈರನ್ನು ಸಮೃದ್ಧವಾಗಿ ಬೆಳೆಸುವುದು ವೈಯಕ್ತಿಕ ಕರ್ತವ್ಯ ಮಾತ್ರವಲ್ಲ ಸಾಮಾಜಿಕ ಕರ್ತವ್ಯವೂ ಹೌದು. ಮಕ್ಕಳು ಸಮಾಜಕ್ಕೆ ಕೊಡುಗೆಯಾಗಬೇಕು’ ಎಂದರು.

ADVERTISEMENT

‘ನಾವೀಗ ಎಷ್ಟು ದುಷ್ಟರಾಗಿದ್ದೇವೆ ಎಂದರೇ, ಹಣಕ್ಕಾಗಿ ನಮ್ಮನ್ನು ನಾವೇ ಮಾರಿಕೊಳ್ಳುತ್ತಿದ್ದೇವೆ. ಸರ್ಕಾರಗಳೇ ಮಾರಿಕೊಂಡು ಹೋಗುತ್ತಿವೆ. ನಮಗೆ ಆಚಾರ ಬೇಕು. ದುರಾಚಾರ ಅಲ್ಲ. ಆದರೆ, ನಮ್ಮ ನಡುವೆ ದುರಾಚಾರವೇ ಇದೆ. ಈ ನಡುವೆಯೇ ಮಕ್ಕಳನ್ನು ಬೆಳೆಸಬೇಕು’ ಎಂದು ಜನ್ನಿ ಹೇಳಿದರು.

ಆತ್ಮೀಯ ರಂಗ ಪ್ರಯೋಗಾಲಯ ಟ್ರಸ್ಟ್‌ ಅಧ್ಯಕ್ಷ ಹಾಗೂ ಶಿಬಿರದ ನಿರ್ದೇಶಕ ಕಿರಣ್‌ಕುಮಾರ್‌ ಗಿರ್ಗಿ ಅವರನ್ನು ಶ್ಲಾಘಿಸಿದ ಜನ್ನಿ, ‘ಕಿರಣ್‌ಗೆ ಕಲಿಕೆಯಲ್ಲಿ ಶ್ರದ್ಧೆ, ರಂಗ ಬದ್ಧತೆ ಇದೆ. ಏನಾದರೂ ಮಾಡಬೇಕು ಹುಮ್ಮಸ್ಸು ಇದೆ. ರಂಗದ ಬಗ್ಗೆ ಕಲಿಯುತ್ತಾ, ಇತರರಿಗೆ ಕಲಿಸುವ ಗುಣ ಇದೆ. ಅವರಿಗೆ ಮೈಸೂರು, ಬೆಂಗಳೂರಿನಲ್ಲಿ ಅವಕಾಶ ಇದೆ. ಆದರೆ ಚಾಮರಾಜನಗರ ಬಿಟ್ಟು ಕದಲಿಲ್ಲ. ಹುಟ್ಟೂರಿನಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬುದು ಅವರಲ್ಲಿನ ಬದ್ಧತೆ ತೋರಿಸುತ್ತದೆ’ ಎಂದರು.

ಗಾಯಕ ಮಹೇಂದ್ರ ಆರ್‌, ಜಿಲ್ಲಾ ಪಂಚಾಯಿತಿ ಲೆಕ್ಕಾಧಿಕಾರಿ ಎಚ್‌.ಎಸ್‌.ಗಂಗಾಧರ್‌, ನಂಜನಗೂಡು ತಾಲ್ಲೂಕು ಉಪನ್ಯಾಸಕರ ಸಂಘದ ಅಧ್ಯಕ್ಷ ಬಿ.ಶಿವಕುಮಾರ್‌, ನಗರದ ಸಂತ ಜೋಸೆಫರ ಸಂಸ್ಥೆಯ ಮುಖ್ಯ ವ್ಯವಸ್ಥಾಪಕಿ ಸಿಸ್ಟರ್‌ ಅನಿತಾ ಡೈಸಿ, ಸಂತ ಜೋಸೆಫರ ಮಹಿಳಾ ಅಭಿವೃದ್ಧಿ ಕೇಂದ್ರದ ಸಂಯೋಜಕಿ ಸಿಸ್ಟರ್‌ ಮರಿಯ ಜೋಸ್‌ ಇದ್ದರು.

ವೇದಿಕೆ ಸಮಾರಂಭದ ಬಳಿಕ ಬೇಸಿಗೆ ಶಿಬಿರದ ಮಕ್ಕಳೂ ಶ್ರೀಕೃಷ್ಣ ಗಾರುಡಿ ಎಂಬ ಪೌರಾಣಿಕ ನಾಟಕ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.