ADVERTISEMENT

ಗುಂಡ್ಲುಪೇಟೆ: ಸೂರ್ಯಕಾಂತಿ ಬೆಳೆಗಾರರ ಸಂಕಷ್ಟ

ಕರ್ನಾಟಕ ಆಯಿಲ್ ಫೆಡರೇಶನ್ ಖರೀದಿ ವಿಳಂಬ, ತೂಕ ವ್ಯತ್ಯಾಸ: ಆರೋಪ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 4:56 IST
Last Updated 16 ನವೆಂಬರ್ 2025, 4:56 IST
ಗುಂಡ್ಲುಪೇಟೆ ಪಟ್ಟಣದ ಎಪಿಎಂಸಿ ಆವರಣದಲ್ಲಿ ಸೂರ್ಯಕಾಂತಿ ಖರೀದಿ ಕೇಂದ್ರದ ದಾಸ್ತಾನು ಮಳಿಗೆ ಬಾಗಿಲು ಮುಚ್ಚಿರುವುದು.
ಗುಂಡ್ಲುಪೇಟೆ ಪಟ್ಟಣದ ಎಪಿಎಂಸಿ ಆವರಣದಲ್ಲಿ ಸೂರ್ಯಕಾಂತಿ ಖರೀದಿ ಕೇಂದ್ರದ ದಾಸ್ತಾನು ಮಳಿಗೆ ಬಾಗಿಲು ಮುಚ್ಚಿರುವುದು.   

ಗುಂಡ್ಲುಪೇಟೆ: ‘ಎಪಿಎಂಸಿ ಆವರಣದಲ್ಲಿ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ ಖರೀದಿಗೆ ನೋಂದಣಿ ತಿಂಗಳಿಂದ ಆರಂಭಿಸಿದ್ದು, ಇನ್ನೂ ಸಮರ್ಪಕವಾಗಿ ಖರೀದಿ ಪ್ರಾರಂಭವಾಗಿಲ್ಲ. ಇದರಿಂದ ಸೂರ್ಯಕಾಂತಿ ಬೆಳೆಗಾರರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ರೈತರು ದೂರಿದ್ದಾರೆ.

‘ಕೇಂದ್ರ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿಗೆ ₹7721 ರೂ. ನಿಗದಿ ಮಾಡಿ, ಖರೀದಿ ಕೇಂದ್ರ ತೆರೆಯುವಂತೆ ಆದೇಶಿಸಿದಂತೆ ಸೆ.26ರಂದು ಖರೀದಿಗೆ ಜಿಲ್ಲಾಧಿಕಾರಿ ಸೂಚನೆಯಂತೆ ಪಟ್ಟಣದ ಎಪಿಎಂಸಿ ಖರೀದಿ ಕೇಂದ್ರದಲ್ಲಿ 664 ಮಂದಿ ರೈತರು ನೋಂದಣಿ ಮಾಡಿದ್ದಾರೆ. ತೆರಕಣಾಬಿಯಲ್ಲಿ 357 ಮಂದಿ ಸೂರ್ಯಕಾಂತಿ ಮಾರಾಟ ಮಾಡಲು ನೋಂದಣಿ ಮಾಡಿದ್ದಾರೆ. ಕರ್ನಾಟಕ ಸಹಕಾರಿ ಎಣ್ಣೆ ಬೀಜ ಬೆಳೆಗಾರರ ಮಹಾ ಮಂಡಳಿಯು ಶ್ರಮ ಸಂಜಾತ ರೈತ ಉತ್ಪಾದಕರ ಸಂಘದ ಮೂಲಕ ರೈತರ ನೋಂದಣಿ ಮತ್ತು ಉತ್ಪನ್ನ ಖರೀದಿಗೆ ಸಿದ್ಧತೆ ನಡೆಸಿದ್ದರು. ಆದರೆ ಇವರು  ಖರೀದಿಗೆ ವಿಳಂಬ ಮಾಡುತ್ತಿದ್ದಾರೆ.  ಖರೀದಾರರು ಮನಬಂದಂತೆ ಕೇಂದ್ರದ ಬಾಗಿಲು ತೆರೆಯುತ್ತಿರುವುದರಿಂದ ರೈತರಿಗೆ ಗೊಂದಲ ಉಂಟಾಗಿದೆ’ ಎಂದು ರೈತ ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷ ಶಿವಪುರ ಮಹದೇವಪ್ಪ ದೂರಿದರು.

‘ಖರೀದಿ ಕೇಂದ್ರ ತೆರಯುವಂತೆ ಪ್ರತಿಭಟನೆ ನಡೆಸಿದ ರೈತ ಸಂಘಟನೆಯವರಿಗೆ ಇದೀಗ ಸೂರ್ಯಕಾಂತಿ ಖರೀದಿ ವಿಳಂಬ ಧೋರಣೆ  ಕಾಣುತ್ತಿಲ್ಲವೇ.  ತಿಂಗಳುಗಳಿಂದ ರೈತರು ಸೂರ್ಯಕಾಂತಿ ಸಂಗ್ರಹಿಸಿಟ್ಟಿದ್ದು, ಗುಣಮಟ್ಟ ಕೆಟ್ಟು, ತೂಕದಲ್ಲಿಯು ಇಳಿಕೆಯಾಗುತ್ತಿದೆ. ಹೀಗಿದ್ದರೂ ಖರೀದಿ ಪ್ರಾರಂಭ ಮಾಡಿಲ್ಲ’ ಎಂದು ರೈತರಾದ ಶಿವಪ್ಪ, ಗಣೇಶ್ ದೂರಿದರು.

ADVERTISEMENT

ತೂಕದಲ್ಲಿ ವ್ಯತ್ಯಾಸ: ‘ಕರ್ನಾಟಕ ಆಯಿಲ್ ಫೆಡರೇಶನ್ ತೂಕದಲ್ಲಿಯೂ ವ್ಯತ್ಯಾಸ ಮಾಡುತ್ತಿದ್ದಾರೆ.  ತೆರಕಣಾಂಬಿಯಲ್ಲಿ ಹೊರೆ ಕಾರ್ಮಿಕರ  ಕೂಲಿ ಎಂದು  ಪ್ರತಿ ಚೀಲಕ್ಕೆ ₹10 ಪಡೆಯುತ್ತಿದ್ದಾರೆ. ಗುಂಡ್ಲುಪೇಟೆಯ ನೋಂದಾಯಿತ ರೈತರ ಉತ್ಪನ್ನವನ್ನು ತೆರಕಣಾಂಬಿಯಲ್ಲಿ ಖರೀದಿ ಮಾಿಸಲಾಗುತ್ತಿದೆ.  ಗುಂಡ್ಲುಪೇಟೆಯಲ್ಲಿ ಏಕೆ ನಡೆಯುತ್ತಿಲ್ಲ. ಎಂದು ರೈತರು ಪ್ರಶ್ನಿಸಿದ್ದಾರೆ.  ಇಲಾಖೆಯ ಉನ್ನತ ಅಧಿಕಾರಿಗಳು  ಕ್ರಮ ವಹಿಸಬೇಕು ಎಂದು ಶಿವಪುರ ಮಹದೇವಪ್ಪ ಒತ್ತಾಯಿಸಿದ್ದಾರೆ.

ಎಪಿಎಂಸಿ ಅಧಿಕಾರಿಗಳನ್ನು ಕೇಳಿದರೆ ಖರೀದಿ ಪ್ರಕ್ರಿಯೆ ಕೆಒಎಫ್ ಅವರದ್ದು ಎನ್ನುತ್ತಾರೆ. ಆದರೆ ಕೆಒಎಫ್ ಹಿರಿಯ ಅಧಿಕಾರಿ ಬಸವಪ್ರಸಾದ್  ಸಂಪರ್ಕಕ್ಕೆ ಸಿಗುತ್ತಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.