ADVERTISEMENT

ಚಾಮರಾಜನಗರ: ಉದ್ಘಾಟನೆಗೆ ಸಜ್ಜಾಗುತ್ತಿದೆ ಹೊಸ ಆಸ್ಪತ್ರೆ ಕಟ್ಟಡ

ಮಾರ್ಚ್‌ ಕೊನೆಯ ವಾರದಲ್ಲಿ ರಾಷ್ಟ್ರಪತಿ ಅವರಿಂದ ಲೋಕಾರ್ಪಣೆ ಸಾಧ್ಯತೆ

ಸೂರ್ಯನಾರಾಯಣ ವಿ
Published 20 ಜನವರಿ 2021, 1:09 IST
Last Updated 20 ಜನವರಿ 2021, 1:09 IST
ಬೋಧನಾ ಆಸ್ಪತ್ರೆಯ ಕಟ್ಟಡ ಕಾಮಗಾರಿ ಅಂತಿಮ ಹಂತ ತಲುಪಿದೆ
ಬೋಧನಾ ಆಸ್ಪತ್ರೆಯ ಕಟ್ಟಡ ಕಾಮಗಾರಿ ಅಂತಿಮ ಹಂತ ತಲುಪಿದೆ   

ಚಾಮರಾಜನಗರ: ನಗರದ ಹೊರವಲಯದ ಯಡಬೆಟ್ಟದಲ್ಲಿ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬಳಿ ನಿರ್ಮಿಸಲಾಗುತ್ತಿರುವ 450 ಹಾಸಿಗೆ ಸಾಮರ್ಥ್ಯಗಳ ಸುಸಜ್ಜಿತ ಬೋಧನಾ ಆಸ್ಪತ್ರೆಯ ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಜ್ಜಾಗುತ್ತಿದೆ.

ವೈದ್ಯಕೀಯ ಶಿಕ್ಷಣ ಇಲಾಖೆ, ಜಿಲ್ಲಾಡಳಿತವು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಂದ ಕಟ್ಟಡವನ್ನು ಲೋಕಾರ್ಪಣೆಗೊಳಿಸಲು ಯೋಚಿಸುತ್ತಿದ್ದು, ಮಾರ್ಚ್‌ ಕೊನೆಯ ವಾರದಲ್ಲಿ ಇಲ್ಲಿಗೆ ಬರಲು ಅವರು ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

‘ಶೇ 90ರಷ್ಟು ಕೆಲಸಗಳು ಪೂರ್ಣಗೊಂಡಿವೆ. ಬಣ್ಣ ಬಳಿಯುವುದು, ಎದುರುಗಡೆ ಲಾನ್‌ ನಿರ್ಮಾಣ ಸೇರಿದಂತೆ ಸಣ್ಣ ಪುಟ್ಟ ಕೆಲಸಗಳು ಬಾಕಿ ಇವೆ. ಉದ್ಘಾಟನೆಯ ಹೊತ್ತಿಗೆ ಎಲ್ಲವೂ ಪೂರ್ಣಗೊಳ್ಳಲಿದೆ’ ಎಂದು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್‌ ಹಾಗೂ ನಿರ್ದೇಶಕ ಡಾ.ಸಂಜೀವ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

₹130 ಕೋಟಿ ವೆಚ್ಚ:2018ರ ಮಾರ್ಚ್‌ನಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಲಾಗಿತ್ತು. ಅದೇ ವರ್ಷದ ನವೆಂಬರ್‌ನಲ್ಲಿ ಕಾಮಗಾರಿ ಆರಂಭವಾಗಿತ್ತು. ಆರಂಭದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ₹113 ಕೋಟಿ ಬೇಕು ಎಂದು ಅಂದಾಜಿಸಲಾಗಿತ್ತು. ಈಗ ಆ ವೆಚ್ಚ ₹130 ಕೋಟಿಗೆ ಹಿಗ್ಗಿದೆ.

ಕೋವಿಡ್‌ನಿಂದ ವಿಳಂಬ: ಕಟ್ಟಡ ನಿರ್ಮಾಣ ಕಾಮಗಾರಿ ಈಗಾಗಲೇ ಪೂರ್ಣಗೊಳ್ಳಬೇಕಿತ್ತು. ಕೋವಿಡ್‌ನಿಂದಾಗಿ ಸ್ವಲ್ಪ ವಿಳಂಬವಾಗಿದೆ.

ನೆಲಮಹಡಿ ಹಾಗೂ ನಾಲ್ಕು ಅಂತಸ್ತುಗಳನ್ನು ಹೊಂದಿರುವ ಕಟ್ಟಡವು 30,728 ಚದರ ಮೀಟರ್‌ ವಿಸ್ತೀರ್ಣಹೊಂದಿದೆ. ಬೋಧನಾ ಆಸ್ಪತ್ರೆಗಾಗಿ ಸರ್ಕಾರ 10 ಎಕರೆ ಭೂಮಿ ಮಂಜೂರು ಮಾಡಿದ್ದು, ಈ ಪೈಕಿ 2.33 ಎಕರೆ ಪ್ರದೇಶದಲ್ಲಿ ಕಟ್ಟಡ ತಲೆ ಎತ್ತಿದೆ.

ತುರ್ತು ನಿಗಾ ಘಟಕಗಳು, ಮುಖ್ಯ ಶಸ್ತ್ರಚಿಕಿತ್ಸಾ ಘಟಕಗಳು, ಹೊರ ರೋಗಿಗಳ ವಿಭಾಗ, ವಾರ್ಡ್‌, ಪ್ರಯೋಗಾಲಯಗಳು,ವೈದ್ಯಕೀಯ ಅಧಿಕಾರಿಗಳ ಕೊಠಡಿ, ವೀಕ್ಷಣಾ ಗ್ಯಾಲರಿ, ಬೋಧನಾ ಹಾಲ್‌, ಬೋಧನಾ ಸಿಬ್ಬಂದಿ ವಿಭಾಗ, ಆಡಳಿತ ಕಚೇರಿ ಸೇರಿದಂತೆ ಎಲ್ಲ ಸೌಲಭ್ಯಗಳು ಕಟ್ಟಡದಲ್ಲಿರಲಿವೆ.

‘ರಾಜ್ಯ ಸರ್ಕಾರವು 2013ರಲ್ಲಿ ಕೊಪ್ಪಳ, ಗದಗ ಮತ್ತು ಕಲ್ಬುರ್ಗಿ ಹಾಗೂ 2014ರಲ್ಲಿ ಚಾಮರಾಜನಗರ, ಮಡಿಕೇರಿ ಹಾಗೂ ಕಾರವಾರಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಈ ಆರು ಕಾಲೇಜುಗಳ ಪೈಕಿ ನಮಲ್ಲಿ ಆಸ್ಪತ್ರೆ ಕಟ್ಟಡ ಹೆಚ್ಚು ಸುಸಜ್ಜಿತವಾಗಿ ಮೂಡಿ ಬಂದಿದೆ’ ಎಂದು ಡಾ.ಸಂಜೀವ್‌ ಅವರು ಹೇಳಿದರು.

ವರ್ಷಾಂತ್ಯದೊಳಗೆ ಸಾರ್ವಜನಿಕರಿಗೆ ಮುಕ್ತ?

ಕಟ್ಟಡ ಉದ್ಘಾಟನೆಯಾದ ಬಳಿಕ, ಆಸ್ಪತ್ರೆಯ ಉಪಕರಣಗಳ ಅಳವಡಿಕೆಗೆ ಕನಿಷ್ಠ ಆರು ತಿಂಗಳಾದರೂ ಬೇಕು. ಹಾಗಾಗಿ, ಹೊಸ ಆಸ್ಪತ್ರೆ ಸಾರ್ವಜನಿಕರ ಸೇವೆಗೆ ಮುಕ್ತವಾಗಲು ಕನಿಷ್ಠ ಏಳೆಂಟು ತಿಂಗಳುಗಳು ಬೇಕು. ಇದೇ ವೇಗದಲ್ಲಿ ಕೆಲಸಗಳು ನಡೆದರೆ ಈ ವರ್ಷದ ನವೆಂಬರ್‌– ಡಿಸೆಂಬರ್‌ ಒಳಗಾಗಿ ಆಸ್ಪತ್ರೆ ಉದ್ಘಾಟನೆಯಾಗುವುದು ಖಚಿತ.

‘ಆಸ್ಪತ್ರೆಯಲ್ಲಿ ಹಾಸಿಗೆಗಳು, ವೈದ್ಯಕೀಯ ಸಲಕರಣೆ, ಪೀಠೋಕರಣ, ಕಂಪ್ಯೂಟರ್‌ಗಳ ಅಳವಡಿಕೆಯೂ ದೊಡ್ಡ ಕೆಲಸ. ಇದಕ್ಕೆ ಕನಿಷ್ಠ ಎಂದರೆ ಆರು ತಿಂಗಳಾದರೂ ಬೇಕು. ಉಪಕರಣಗಳ ಖರೀದಿ, ಅಳವಡಿಕೆಗೆ ಪ್ರತ್ಯೇಕ ಟೆಂಡರ್‌ ಕರೆಯಬೇಕಾಗುತ್ತದೆ. ಇದಕ್ಕೆ ಸರ್ಕಾರ ಈಗಾಗಲೇ ಮಂಜೂರಾತಿ ನೀಡಿದೆ. ಅನುದಾನವೂ ಲಭ್ಯವಿದೆ’ ಎಂದು ಡಾ.ಸಂಜೀವ್‌ ಅವರು ಮಾಹಿತಿ ನೀಡಿದರು.

ಇನ್ನು ಆಗಬೇಕಿರುವುದೇನು?

ಹೊಸ ಆಸ್ಪ‍ತ್ರೆಗೆ ನಿರಂತರ ವಿದ್ಯುತ್‌ ಪೂರೈಕೆಗಾಗಿ 800 ಕಿಲೊ ವಾಟ್‌ ಸಾಮರ್ಥ್ಯದ ಘಟಕ ನಿರ್ಮಾಣವಾಗಬೇಕಿದೆ. ಇದಕ್ಕೆ ಅರ್ಜಿ ಸಲ್ಲಿಸಬೇಕಿದೆ. ಆಸ್ಪತ್ರೆ ಕಾರ್ಯಾರಂಭ ಮಾಡಿದ ನಂತರ ಹೆಚ್ಚಿನ ವೈದ್ಯರು ಹಾಗೂ ಇತರ ಸಿಬ್ಬಂದಿ ಅಗತ್ಯವಿದೆ. ಇವರಿಗೆ ವಸತಿಗೃಹಗಳನ್ನು ನಿರ್ಮಿಸುವ ಅಗತ್ಯವೂ ಇದೆ.

ಆಸ್ಪತ್ರೆಗೆ ನೀರು ಪೂರೈಸುವುದು ಕೂಡ ದೊಡ್ಡ ಸವಾಲು. ಸದ್ಯ ಯಡಬೆಟ್ಟದಲ್ಲಿ ವೈದ್ಯಕೀಯ ಕಾಲೇಜು ಹಾಗೂ ವಸತಿಗೃಹಗಳು ಮಾತ್ರ ಇದ್ದು, ಕೊಳವೆಬಾವಿಗಳಿಂದ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ನೀರು ಪೂರೈಸಲಾಗುತ್ತಿದೆ.

‘ಆಸ್ಪತ್ರೆ ಆದ ಬಳಿಕ ನೀರಿನ ಬಳಕೆ ಹೆಚ್ಚುತ್ತದೆ. ಈ ಪ್ರದೇಶದಲ್ಲಿ ಕೊಳವೆಬಾವಿಯಲ್ಲಿ ನೀರು ಸಿಗುವುದಿಲ್ಲ. ಹಾಗಾಗಿ, ನೀರಿನ ವ್ಯವಸ್ಥೆ ಆಗಬೇಕಿದೆ. ಬದನಗುಪ್ಪೆ–ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶಕ್ಕೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಪೂರೈಸುವ ನೀರನ್ನು, ಯಡ
ಬೆಟ್ಟಕ್ಕೆ ವರೆಗೆ ವಿಸ್ತರಿಸುವ ಪ್ರಸ್ತಾವ ಇದೆ. ಅದು ಕಾರ್ಯರೂಪಕ್ಕೆ ಬಂದರೆ ನಮಗೆ ಅನುಕೂಲವಾಗುತ್ತದೆ’ ಎಂದು ಸಂಜೀವ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.