ADVERTISEMENT

ಚಾಮರಾಜನಗರ | ‘ಕೋವಿಡ್‌–19ಗೆ ಧೈರ್ಯವೇ ಮದ್ದು’

ಸೋಂಕಿನ ವಿರುದ್ಧ ಜಯಿಸಿದ ಭೂಮಾಪನ ಇಲಾಖೆಯ ಮಹಿಳಾ ಅಧಿಕಾರಿ ಮಾತು

ಸೂರ್ಯನಾರಾಯಣ ವಿ
Published 6 ಜುಲೈ 2020, 19:30 IST
Last Updated 6 ಜುಲೈ 2020, 19:30 IST
ಸಾಮದರ್ಭಿಕ ಚಿತ್ರ
ಸಾಮದರ್ಭಿಕ ಚಿತ್ರ   

ಚಾಮರಾಜನಗರ: ‘ಧೈರ್ಯದಿಂದ ಇರುವುದೇ ಕೋವಿಡ್‌–19ಗೆ ಅತ್ಯುತ್ತಮ ಮದ್ದು. ಯಾವುದೇ ಕಾರಣಕ್ಕೂ ಭಯಪಡಬಾರದು. ಐದಾರು ದಿನಗಳಲ್ಲಿ ಆರೋಗ್ಯ ಸಹಜ ಸ್ಥಿತಿಗೆ ಬರುತ್ತದೆ’

– ಕೋವಿಡ್‌–19 ವಿರುದ್ಧದ ಹೋರಾಟದಲ್ಲಿ ಜಯದ ನಗೆ ಬೀರಿರುವ ತಾಲ್ಲೂಕು ಪಂಚಾಯಿತಿಯ ಭೂಮಾಪನಾ ಇಲಾಖೆಯ ಮಹಿಳಾ ಅಧಿಕಾರಿ ಮಾತು.

ಎರಡು ದಿನಗಳ ಹಿಂದೆ ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿರುವ ಅವರು ‘ಪ್ರಜಾವಾಣಿ’ಯೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಅನುಭವ ಹಂಚಿಕೊಂಡರು.

ADVERTISEMENT

ಮೈಸೂರಿಗೆ ಹೋಗಿ ಬಂದ ನಂತರ ಅವರಲ್ಲಿ ತಲೆನೋವು, ಜ್ವರ ಕಾಣಿಸಿಕೊಂಡಿತ್ತು. ಗಂಟಲ ದ್ರವದ ಮಾದರಿ ಪರೀಕ್ಷಿಸುವಾಗ ಕೊರೊನಾ ವೈರಸ್‌ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಜೂನ್‌ 22ರಂದು ಅವರು ಆಸ್ಪತ್ರೆಗೆ ದಾಖಲಾಗಿದ್ದರು.

‘ಕೋವಿಡ್‌–19 ದೃಢಪಟ್ಟಿದೆ ಎಂಬ ಮಾಹಿತಿ ಬಂದ ತಕ್ಷಣ ಭಯ ಆಯಿತು. ಸೋಂಕು ಎಲ್ಲಿಂದ ನನಗೆ ತಗುಲಿತು ಎಂಬುದೇ ಗೊತ್ತಿಲ್ಲ. ಆದರೆ, ಜೀವ ಉಳಿಸಿಕೊಂಡು ಮುಂದೆಯೂ ಬದುಕಲೇ ಬೇಕಲ್ಲ? ಅದಕ್ಕಾಗಿ ಧೈರ್ಯ ತಂದುಕೊಂಡೆ’ ಎಂದು ಅವರು ಹೇಳಿದರು.

‘ನಾನು ಆಸ್ಪತ್ರೆಯಲ್ಲಿ ಇದ್ದಾಗ, ನನ್ನ ಮನೆಯವರು, ಸ್ನೇಹಿತರು, ಕಚೇರಿ ಸಿಬ್ಬಂದಿ ಎಲ್ಲರೂ ದೂರವಾಣಿ ಮೂಲಕ ನಿರಂತರ ಸಂಪರ್ಕದಲ್ಲಿದ್ದರು. ನನಗೆ ಬೇರೆ ಯೋಚನೆಯನ್ನು ಮಾಡುವುದಕ್ಕೆ ಅವಕಾಶ ಕೊಟ್ಟಿಲ್ಲ. ‘ಏನೂ ಆಗುವುದಿಲ್ಲ. ಭಯ ಪಡಬೇಡ’ ಎಂದು ಎಲ್ಲರೂ ಧೈರ್ಯ ತುಂಬುತ್ತಿದ್ದರು’ ಎಂದು ಮಹಿಳಾ ಅಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ನನಗೆ ತಲೆನೋವು, ಜ್ವರ ಹಾಗೂ ಉಸಿರಾಡುವುದಕ್ಕೂ ಸ್ವಲ್ಪ ಕಷ್ಟವಾಗುತ್ತಿತ್ತು. ರೋಗ ಲಕ್ಷಣಗಳಿಗೆ ಅನುಗುಣವಾಗಿ ವೈದ್ಯರು ಚಿಕಿತ್ಸೆ ನೀಡಿದರು. ಎರಡು ಹೊತ್ತು ಚುಚ್ಚುಮದ್ದುಗಳನ್ನು ತೆಗೆದುಕೊಳ್ಳಬೇಕಿತ್ತು‌. ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ಐದಾರು ಮಾತ್ರೆಗಳನ್ನು ಕೊಟ್ಟರು. ಆರನೇ ದಿನಕ್ಕೆ ಸಂಪೂರ್ಣವಾಗಿ ಸುಧಾರಿಸಿದೆ. 10ನೇ ದಿನ ವೈದ್ಯಕೀಯ ಕಾಲೇಜಿನಲ್ಲಿರುವ ಕೋವಿಡ್‌–19 ಕೇರ್‌ ಕೇಂದ್ರಕ್ಕೆ ಸ್ಥಳಾಂತರಿಸಿದರು. ಅಲ್ಲಿ ಆರಾಮವಾಗಿದ್ದೆ’ ಎಂದು ಅವರು ವಿವರಿಸಿದರು.

‘ಈಗ ಮನೆಗೆ ಬಂದಿದ್ದೇನೆ. ವಿಶ್ರಾಂತಿಯಲ್ಲಿದ್ದೇನೆ. ಕಡ್ಡಾಯವಾಗಿ 14 ದಿನಗಳ ಕ್ವಾರಂಟೈನ್‌ನಲ್ಲಿ ಇರಬೇಕಾಗಿದೆ’ ಎಂದು ಅವರು ಮಾಹಿತಿ ನೀಡಿದರು.

‘ಆಸ್ಪತ್ರೆಯಲ್ಲಿ ಚೆನ್ನಾಗಿ ನೋಡಿಕೊಂಡರು’

ಆಸ್ಪತ್ರೆಯಲ್ಲಿ ಚಿಕಿತ್ಸೆ ಹೇಗೆ ಕೊಟ್ಟರು, ಊಟ ತಿಂಡಿ ಎಲ್ಲ ಚೆನ್ನಾಗಿತ್ತಾ ಎಂದು ಕೇಳಿದ್ದಕ್ಕೆ, ‘ವೈದ್ಯರು, ನರ್ಸ್‌ಗಳು ಚೆನ್ನಾಗಿ ನೋಡಿಕೊಂಡರು. ಹೊತ್ತಿಗೆ ಸರಿಯಾಗಿ ತಿಂಡಿ, ಊಟವನ್ನೂ ಕೊಟ್ಟರು. ಗುಣಮಟ್ಟವೂ ಚೆನ್ನಾಗಿತ್ತು’ ಎಂದು ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.