ADVERTISEMENT

ವಿದ್ಯೆ ಯಾರ ಸ್ವತ್ತಲ್ಲ; ಪರಿಶ್ರಮಕ್ಕೆ ಯಶಸ್ಸು ಖಚಿತ: ಸುತ್ತೂರುಶ್ರೀ

ದುಗ್ಗಟ್ಟಿ ವೀರಭದ್ರಪ್ಪಗೆ ರಾಜೇಂದ್ರ ಸೇವಾ ಪ್ರಶಸ್ತಿ, ಮಹೇಶ್ವರಿಗೆ ಕೆ.ಸಿ. ಶಿವಪ್ಪ ಪ್ರಶಸ್ತಿ ಪ್ರದಾನ ಮಾಡಿದ ಸುತ್ತೂರುಶ್ರೀ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2024, 14:31 IST
Last Updated 25 ಡಿಸೆಂಬರ್ 2024, 14:31 IST
<div class="paragraphs"><p>ಚಾಮರಾಜನಗರದ ಡಾ.ರಾಜ್‌ಕುಮಾರ್ ಕಲಾಮಂದಿರದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾ ಘಟಕದಿಂದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿವರಾತ್ರಿ ರಾಜೇಂದ್ರ ಸೇವಾ ಪ್ರಶಸ್ತಿಯನ್ನು ದುಗ್ಗಹಟ್ಟಿ ವೀರಭದ್ರಪ್ಪ ಅವರಿಗೆ ಹಾಗೂ ಕೆ.ಸಿ.ಶಿವಪ್ಪ ಪ್ರತಿಭಾ ಪುರಸ್ಕಾರ ಪ್ರಶಸ್ತಿಯನ್ನು ಮಹೇಶ್ವರಿ ಅವರಿಗೆ ಪ್ರದಾನ ಮಾಡಲಾಯಿತು.&nbsp;</p></div>

ಚಾಮರಾಜನಗರದ ಡಾ.ರಾಜ್‌ಕುಮಾರ್ ಕಲಾಮಂದಿರದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾ ಘಟಕದಿಂದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿವರಾತ್ರಿ ರಾಜೇಂದ್ರ ಸೇವಾ ಪ್ರಶಸ್ತಿಯನ್ನು ದುಗ್ಗಹಟ್ಟಿ ವೀರಭದ್ರಪ್ಪ ಅವರಿಗೆ ಹಾಗೂ ಕೆ.ಸಿ.ಶಿವಪ್ಪ ಪ್ರತಿಭಾ ಪುರಸ್ಕಾರ ಪ್ರಶಸ್ತಿಯನ್ನು ಮಹೇಶ್ವರಿ ಅವರಿಗೆ ಪ್ರದಾನ ಮಾಡಲಾಯಿತು. 

   

ಚಾಮರಾಜನಗರ: ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಮನೋಭಾವ ಪೋಷಕರಲ್ಲಿ ಮೂಡಿದರೆ ಸರ್ಕಾರಿ ಶಾಲೆಗಳು ಉಳಿಯುತ್ತವೆ, ಬೆಳೆಯುತ್ತವೆ ಎಂದು ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಡಾ. ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾ ಘಟಕದ ವತಿಯಿಂದ ಶಿವರಾತ್ರಿ ರಾಜೇಂದ್ರ ಸೇವಾ ಪ್ರಶಸ್ತಿ ಹಾಗೂ ಕೆ.ಸಿ.ಶಿವಪ್ಪ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ADVERTISEMENT

ಸರ್ಕಾರಿ ಸವಲತ್ತು ಪಡೆಯುವ ಪ್ರತಿಯೊಬ್ಬರೂ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿದರೆ ಸರ್ಕಾರಿ ಶಾಲೆಗಳು ಮುಚ್ಚುವುದಿಲ್ಲ; ಬದಲಾಗಿ ಅಭಿವೃದ್ಧಿ ಹೊಂದುತ್ತವೆ. ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಆರ್ಥಿಕವಾಗಿ ಹಿಂದುಳಿದಿರುವ ಪೋಷಕರ ಮಕ್ಕಳು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವುದು ವಿದ್ಯೆಯ ಮೇಲಿನ ಶ್ರದ್ಧೆಗೆ ಸಾಕ್ಷಿಯಾಗಿದೆ ಎಂದು ಸ್ವಾಮೀಜಿ ಹೊಗಳಿದರು.

ಕನ್ನಡದಲ್ಲಿ 125 ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳು ಗ್ರಾಮಾಂತರ ಪ್ರದೇಶದಲ್ಲಿರುವುದು ಹೆಮ್ಮೆಯ ವಿಚಾರ. ಮಕ್ಕಳು ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಓದಿದರೆ ಮಾತ್ರ ರ‍್ಯಾಂಕ್ ಪಡೆಯುತ್ತಾರೆ ಎಂಬ ಭಾವನೆ ಇದೆ. ಆದರೆ, ವಿದ್ಯೆ ಯಾರೊಬ್ಬರ ಸ್ವತ್ತಲ್ಲ; ಕಷ್ಟಪಟ್ಟು ಓದಿದರೆ ಖಂಡಿತ ಸಾಧನೆ ಮಾಡಬಹುದು ಎಂದು ಸ್ವಾಮೀಜಿ ಕಿವಿಮಾತು ಹೇಳಿದರು.

ರಾಜೇಂದ್ರ ಶ್ರೀಗಳಿಗೆ ಚಾಮರಾಜನಗರ ಜಿಲ್ಲೆಯ ಬಗ್ಗೆ ವಿಶೇಷ ಕಾಳಜಿ ಇದ್ದಿದ್ದರಿಂದ ಜಿಲ್ಲೆಯ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದರು. ಈ ಭಾಗದ ಬಹುತೇಕ ಮುಖಂಡರೊಂದಿಗೆ ಸಂಪರ್ಕ ಹೊಂದಿದ್ದರು. ಪ್ರಮುಖವಾಗಿ ದುಗ್ಗಹಟ್ಟಿ ವೀರಭದ್ರಪ್ಪ ಅವರೊಂದಿಗೆ ಬಾಂಧವ್ಯ ಹೊಂದಿದ್ದರು. ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ವೀರಭದ್ರಪ್ಪ ಅವರಿಗೆ ರಾಜೇಂದ್ರ ಸೇವಾ ಪ್ರಶಸ್ತಿ ದೊರೆತಿರುವುದು ಸಂತಸವಾಗಿದೆ. ಅವರ ಸಮಾಜಸೇವೆ ಮುಂದುವರಿಯಲಿ ಎಂದು ಆಶಿಸಿದರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಮಲ್ಲೇಪುರಂ ಜಿ. ವೆಂಕಟೇಶ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶರಣ ಸಾಹಿತ್ಯ ಪರಿಷತ್ ವಚನ ಸಾಹಿತ್ಯ ಹಾಗೂ ಕನ್ನಡ ಸೇವೆಯನ್ನು ಅಚ್ಚುಕಟ್ಟಾಗಿ ಮಾಡುತ್ತಿದೆ. ರಾಜೇಂದ್ರ ಶ್ರೀಗಳ ನೇತೃತ್ವದಲ್ಲಿ ಸಂಸ್ಥೆ ಅಸ್ತಿತ್ವಕ್ಕೆ ಬಂತು ಎಂಬುದೇ ಹೆಮ್ಮೆಯ ವಿಚಾರ.

ಧಾರ್ಮಿಕ, ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡಿರುವ ಶ್ರೀಗಳು ವಚನ ಸಾಹಿತ್ಯವನ್ನು ಉಳಿಸಿ ಬೆಳೆಸುವ ಪರಿಕಲ್ಪನೆಯೊಂದಿಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಸ್ಥಾಪಿಸಿದರು. ಶ್ರೀಗಳ ಉದ್ದೇಶವನ್ನು ಕೆ.ಸಿ. ಶಿವಪ್ಪ ಅವರು ದತ್ತಿ ಸ್ಥಾಪನೆ ಮಾಡಿ ಸೇವಾ ಪ್ರಶಸ್ತಿ ಹಾಗೂ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಎತ್ತರಕ್ಕೆ ಬೆಳೆಸುತ್ತಿದ್ದಾರೆ ಎಂದರು.

ಶಿವರಾತ್ರಿ ರಾಜೇಂದ್ರ ಸೇವಾ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ದುಗ್ಗಟ್ಟಿ ಪಿ.ವೀರಭದ್ರಪ್ಪ ‘70 ವರ್ಷಗಳಿಂದ ಸಮಾಜ ಸೇವೆ ಹಾಗೂ ಶ್ರೀಮಠದ ಸೇವೆಯಲ್ಲಿ ತೊಡಗಿಕೊಂಡಿರುವುದಕ್ಕೆ ಪ್ರತಿಫಲವಾಗಿ ರಾಜೇಂದ್ರಶ್ರೀಗಳ ಸೇವಾ ಪ್ರಶಸ್ತಿ ದೊರೆತಿರುವುದು ಸಂತಸ ತಂದಿದೆ. ಪ್ರಶಸ್ತಿ ಜೊತೆಗೆ ದೊರೆತ ನಗದು ಪುರಸ್ಕಾರದ ಜೊತೆಗೆ ಹೆಚ್ಚುವರಿ ₹ 25,000 ನೀಡಿ ಜಿಲ್ಲೆಯಲ್ಲಿ ಶರಣ ಸಾಹಿತ್ಯ ಪರಿಷತ್ ಕಾರ್ಯಕ್ರಮಗಳಿಗೆ ಸದ್ಬಳಕೆ ಮಾಡಿಕೊಳ್ಳಲು ನೀಡುವುದಾಗಿ ಘೋಷಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಸಿ.ಸೋಮಶೇಖರ್ ಮಾತನಾಡಿ, ಶರಣ ಸಾಹಿತ್ಯ ಪರಿಷತ್‌ ಹಳೆಯ ಬೇರು ಹೊಸ ಚಿಗರು ಪರಿಕಲ್ಪನೆಯಲ್ಲಿ ಬೆಳೆಯುತ್ತಿದೆ ಎಂದರು.

ಕೆ.ಸಿ.ಶಿವಪ್ಪ ಪ್ರತಿಭಾ ಪುರಸ್ಕಾರ ಪ್ರಶಸ್ತಿಯನ್ನು ಶಿಂಡನಪುರ ಮಹೇಶ್ವರಿ ಅವರಿಗೆ ನೀಡಲಾಯಿತು. ಪಡಗೂರು ಅಡವಿ ಮಠಾಧ್ಯಕ್ಷರಾದ ಶಿವಲಿಂಗೇಂದ್ರ ಸ್ವಾಮೀಜಿ, ದತ್ತಿ ಪ್ರಾಯೋಜಕ ಸಾಹಿತಿ ಕೆ.ಸಿ.ಶಿವಪ್ಪ, ಜಿಲ್ಲಾ ಶಸಾಪ ಅಧ್ಯಕ್ಷ ವಿ. ಮಲ್ಲಿಕಾರ್ಜುನ ಸ್ವಾಮಿ ದುಗ್ಗಹಟ್ಟಿ, ಪ್ರಧಾನ ಕಾರ್ಯದರ್ಶಿ ಬಿ.ಕೆ.ರವಿಕುಮಾರ್, ಕಾರ್ಯದರ್ಶಿ ಬಿ.ಎಸ್.ವಿನಯ್, ನಾಗರಾಜು, ನಗರ ಘಟಕದ ಅಧ್ಯಕ್ಷ ಎಂ.ಸುಂದರ್, ತಾಲ್ಲೂಕು ಅಧ್ಯಕ್ಷ ಆರ್.ಎಸ್.ಲಿಂಗರಾಜು, ಕಾರ್ಯದರ್ಶಿ ವೀರಭದ್ರಸ್ವಾಮಿ, ನಾಗರಾಜು, ನಾಗಮಲ್ಲೇಶ್, ದೊಡ್ಡರಾಯಪೇಟೆ ನಾಗರಾಜು, ಕದಳಿ ವೇದಿಕೆಯ ಅಧ್ಯಕ್ಷೆ ವಸಂತಮ್ಮ ಇದ್ದರು.

ಸರ್ಕಾರಿ ಶಾಲೆಗಳತ್ತ ಪೋಷಕರ ಆಸಕ್ತಿ ಬೆಳೆಯಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸಾಧನೆ ಹೆಮ್ಮೆಯ ವಿಚಾರ ಶಿಕ್ಷಣ ಕ್ಷೇತ್ರಕ್ಕೆ ಸುತ್ತೂರು ಮಠದ ಕೊಡುಗೆ ಅನನ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.