ADVERTISEMENT

ಸ್ವಚ್ಚತಾ ಹಿ ಸೇವಾ: ಜಿಲ್ಲೆಯಾದ್ಯಂತ ಜಾಗೃತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2022, 15:34 IST
Last Updated 17 ಸೆಪ್ಟೆಂಬರ್ 2022, 15:34 IST
ಚಾಮರಾಜನಗರ ತಾಲ್ಲೂಕಿನ ಕೆಂಪನಪುರ ಗ್ರಾಮದಲ್ಲಿ ಶಾಲಾ ಮಕ್ಕಳು ಜಾಥಾ ನಡೆಸುವ ಮೂಲಕ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿದರು
ಚಾಮರಾಜನಗರ ತಾಲ್ಲೂಕಿನ ಕೆಂಪನಪುರ ಗ್ರಾಮದಲ್ಲಿ ಶಾಲಾ ಮಕ್ಕಳು ಜಾಥಾ ನಡೆಸುವ ಮೂಲಕ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿದರು   

ಚಾಮರಾಜನಗರ: ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲಶಕ್ತಿ ಸಚಿವಾಲಯವು ಗ್ರಾಮಗಳಲ್ಲಿ ಸಂಪೂರ್ಣ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ, ಸ್ವಚ್ಛ ಭಾರತ್‌ ಯೋಜನೆಯಡಿಯಲ್ಲಿ ಇದೇ 15ರಿಂದ ಅ.2ರವರೆಗೆ ದೇಶದಾದ್ಯಂತ ಸ್ವಚ್ಛತಾ ಹಿ ಸೇವಾ ಆಂದೋಲನ ಆಯೋಜಿಸಿದ್ದು, ಜಿಲ್ಲೆಯಲ್ಲೂ ಅಭಿಯಾನಕ್ಕೆ ಚಾಲನೆ ದೊರೆತಿದೆ.

ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಕಸ ಸಂಗ್ರಹಣೆ, ಮೂಲದಲ್ಲಿಯೇ ಕಸ ವಿಂಗಡಣೆ, ವಿಲೇವಾರಿ ಮತ್ತು ಸ್ವಚ್ಛತಾ ಶ್ರಮದಾನ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಆಯಾ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು, ಯುವ ಸಂಘಟನೆಗಳು, ಕಾಲೇಜು ವಿದ್ಯಾರ್ಥಿಗಳು, ಗ್ರಾಮ ಪಂಚಾಯಿತಿ ಸಿಬ್ಬಂದಿ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಹಾಗೂ ಗ್ರಾಮಸ್ಥರನ್ನೊಳಗೊಂಡಂತೆ ಗ್ರಾಮದ ಪ್ರಮುಖ ಬೀದಿ, ಶಾಲೆಗಳ ಆವರಣ, ಆಟದ ಮೈದಾನ, ಕಲ್ಯಾಣಿ, ಧಾರ್ಮಿಕ ಕೇಂದ್ರಗಳ ಸಮೀಪ ಇತ್ಯಾದಿ ಹಳ್ಳಿಗಳ ಪ್ರತಿಯೊಂದು ಸ್ಥಳಗಳಲ್ಲಿಯೂ ಸ್ವಚ್ಛತೆ ಕಾಪಾಡುವ ಶ್ರಮದಾನ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ.

ADVERTISEMENT

ಪ್ರತಿಯೊಂದು ಗ್ರಾಮದಲ್ಲೂ ಅತ್ಯಂತ ಹೆಚ್ಚು ತ್ಯಾಜ್ಯ ಸಂಗ್ರಹವಾಗುವ ಪ್ರದೇಶ, ಅಧಿಕ ಅನೈರ್ಮಲ್ಯ ಇರುವ ಸ್ಥಳ, ಬೀದಿ ಹಾಗೂ ಸ್ವಚ್ಛತೆ ಇಲ್ಲದಿರುವ ಸ್ಥಳಗಳನ್ನು ಗುರುತಿಸಿ ಸ್ವಚ್ಛಗೊಳಿಸುವುದು. ಮನೆ-ಮನೆ ಭೇಟಿ ಮಾಡಿ ಮಾಹಿತಿ ನೀಡುವುದು, ಸ್ವಚ್ಛ ವಾಹಿನಿಗಳ ಮೂಲಕ ಪ್ರಚಾರ, ಗುಂಪುಸಭೆ ನಡೆಸಿ ಸಮುದಾಯಕ್ಕೆ ಮಾಹಿತಿ ನೀಡುವುದು, ಡಂಗೂರ ಸಾರುವುದು ಮತ್ತು ಜಾಥಾ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮೂಲದಲ್ಲಿಯೇ ಹಸಿ ಮತ್ತು ಒಣ ಕಸ ವಿಂಗಡಣೆ ಮಾಡುವ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.