ADVERTISEMENT

ತಾಳವಾಡಿ: ಭಾವೈಕ್ಯತೆ ಸಾರುವ ಕೊಂಡೋತ್ಸವ ಸಂಪನ್ನ

ಮಸೀದಿ ಎದುರು ನಡೆದ ಆಚರಣೆ, 16ನೇ ಬಾರಿ ಕೊಂಡ ಹಾಯ್ದ ಶಿವಣ್ಣ, ಸಾವಿರಾರು ಭಕ್ತರು ಭಾಗಿ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2020, 5:27 IST
Last Updated 6 ಮಾರ್ಚ್ 2020, 5:27 IST
ಮಾರಮ್ಮನ ಮೂರ್ತಿ ಹೊತ್ತಿದ್ದ ಶಿವಣ್ಣ ಅವರು ಸಾವಿರಾರು ಭಕ್ತರ ಸಮ್ಮುಖದಲ್ಲಿ ಕೊಂಡವನ್ನು ಹಾಯ್ದರು ಪ್ರಜಾವಾಣಿ ಚಿತ್ರ: ಸಿ.ಆರ್‌.ವೆಂಕಟರಾಮು
ಮಾರಮ್ಮನ ಮೂರ್ತಿ ಹೊತ್ತಿದ್ದ ಶಿವಣ್ಣ ಅವರು ಸಾವಿರಾರು ಭಕ್ತರ ಸಮ್ಮುಖದಲ್ಲಿ ಕೊಂಡವನ್ನು ಹಾಯ್ದರು ಪ್ರಜಾವಾಣಿ ಚಿತ್ರ: ಸಿ.ಆರ್‌.ವೆಂಕಟರಾಮು   

ಚಾಮರಾಜನಗರ: ಚಾಮರಾಜನಗರ ಸಮೀಪದ ತಮಿಳುನಾಡಿನ ತಾಳವಾಡಿಯಲ್ಲಿ ಮಸೀದಿ ಮುಂಭಾಗದಲ್ಲಿ ಪ್ರತಿ ವರ್ಷ ಧಾರ್ಮಿಕ ಸಾಮರಸ್ಯ ಸಾರುವಮಾರಿಯಮ್ಮನ ಕೊಂಡೋತ್ಸವ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ತಾಳವಾಡಿ, ದೊಡ್ಡಗಾಜನೂರು, ತಲಮಲೈ, ಕೋಡಿಪುರ, ಚಾಮರಾಜನಗರ, ಮೈಸೂರು ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಕೊಂಡೋತ್ಸವಕ್ಕೆ ಸಾಕ್ಷಿಯಾದರು.

ಮಾರಮ್ಮ ದೇವತೆಯನ್ನು ತಲೆ ಮೇಲೆ ಹೊತ್ತ ಶಿವಣ್ಣ ಎಂಬುವವರು ಸತತ 16ನೇ ಬಾರಿ ಕೊಂಡ ಹಾಯ್ದಿದ್ದು ವಿಶೇಷ ವಾಗಿತ್ತು. ಇದಕ್ಕೂ ಮೊದಲು ಅವರು ದೇವತೆಯ ಮೂರ್ತಿಯನ್ನು ಹೊತ್ತುಕೊಂಡು ಊರಿನ ಬೀದಿ ಬೀದಿಗಳಲ್ಲಿ ಸಂಚರಿಸಿದರು. ಮೆರವಣಿಗೆಯ ಸಂದರ್ಭದಲ್ಲಿ ನಿವಾಸಿಗಳು ದೇವತೆಗೆ ಪೂಜೆ ಮಾಡಿ, ಕಷ್ಟ ಪರಿಹಾರಕ್ಕಾಗಿ ಹರಕೆ ಸಲ್ಲಿಸಿದರು. ಗೊರವರ ಕುಣಿತ ಸೇರಿದಂತೆ ಹಲವು ಕಲಾ ತಂಡಗಳು ಮೆರವಣಿಗೆಗೆ ಮತ್ತಷ್ಟು ಕಳೆ ನೀಡಿದವು.

ADVERTISEMENT

ತಾಳವಾಡಿ ತಮಿಳುನಾಡಿನಲ್ಲಿದ್ದರೂ ಕನ್ನಡಿಗರೇ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ತಾಳವಾಡಿ ವ್ಯಾಪ್ತಿಯ 58 ಗ್ರಾಮಗಳು, ಚಾಮರಾಜನಗರ ಜಿಲ್ಲೆ, ಸತ್ಯಮಂಗಲ, ಈರೋಡ್, ಕೊಯಮತ್ತೂರು, ಬೆಂಗಳೂರು, ಚೆನ್ನೈ ಮುಂತಾದ ಕಡೆಗಳಿಂದ ಭಕ್ತರು ಕೊಂಡೋತ್ಸವಕ್ಕೆ ಬರುತ್ತಾರೆ.

ಈ ಹಿಂದೆ 20ರಿಂದ 30 ಜನರು ಕೊಂಡ ಹಾಯುತ್ತಿದ್ದರು. ಅದರೆ, ನೂಕು ನುಗ್ಗಲು ಆಗುತ್ತಿದ್ದುದರಿಂದ ಈಗ ಮಾರಿಯಮ್ಮನ ಆವಾಹನೆಗೊಂಡಂತಹ ಶಿವಣ್ಣ ಎಂಬುವವರು ಮಾತ್ರ 16 ವರ್ಷಗಳಿಂದ ಒಬ್ಬರೇ ಕೊಂಡ ಹಾಯುತ್ತಿದ್ದಾರೆ.

ಕೊಂಡೋತ್ಸವಕ್ಕೂ ಮುಂಚೆ ಎರಡು ದಿನಗಳ ಹಿಂದೆ ಮಾರಿಯಮ್ಮನ ದೇವಾಲಯದಲ್ಲಿ ₹ 30 ರೂಗಳ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ವಿಮಾನ ಗೋಪುರ ಉದ್ಘಾಟನೆ ಹಾಗೂ ಕುಂಬಾಭಿಷೇಕ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.