ADVERTISEMENT

ಹನೂರು| ಅಧಿಕಾರಿಗಳತ್ತ ಗುಂಡು ಹಾರಿಸಿ, ಪರಾರಿ

ಕಾವೇರಿ ನದಿ ದಾಟಿ  ಜಿಂಕೆ ಬೇಟೆಯಾಡಿದ ತಮಿಳುನಾಡಿನ ನಾಲ್ವರು,

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2023, 6:39 IST
Last Updated 17 ಫೆಬ್ರುವರಿ 2023, 6:39 IST
ಕಾವೇರಿ ವನ್ಯಧಾಮದಲ್ಲಿ ಬೇಟೆಯಾಡಲು ಬಂದಿದ್ದವರು ತೆಪ್ಪದಲ್ಲಿ ಪರಿಕರಗಳನ್ನು ಬಿಟ್ಟು ಹೋಗಿರುವುದು
ಕಾವೇರಿ ವನ್ಯಧಾಮದಲ್ಲಿ ಬೇಟೆಯಾಡಲು ಬಂದಿದ್ದವರು ತೆಪ್ಪದಲ್ಲಿ ಪರಿಕರಗಳನ್ನು ಬಿಟ್ಟು ಹೋಗಿರುವುದು   

ಹನೂರು:ಕಾವೇರಿ ನದಿ ದಾಟಿ ರಾಜ್ಯದ ಅರಣ್ಯಕ್ಕೆ ಬಂದು ಬೇಟೆಯಾಡುತ್ತಿದ್ದ ತಮಿಳುನಾಡಿನ ನಾಲ್ವರು ಬೇಟೆಗಾರರು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯತ್ತ ಗುಂಡು ಹಾರಿಸಿ, ಪರಾರಿಯಾಗಿರುವ ಪ್ರಕರಣ ಮಂಗಳವಾರ ರಾತ್ರಿ ನಡೆದಿದೆ.

ಕಾವೇರಿ ವನ್ಯಧಾಮದ ಗೋಪಿನಾಥಂ ವನ್ಯಜೀವಿ ವಲಯದ ಅಡಿಪಾಲರ್ ಬಳಿ ತಮಿಳುನಾಡಿನ ಕಳ್ಳಬೇಟೆಗಾರರು ಪ್ರಾಣಿ ಬೇಟೆಯಾಡುತ್ತಿರುವ ಬಗ್ಗೆ ಅಲ್ಲಿನ ಅರಣ್ಯಾಧಿಕಾರಿಗಳು ನೀಡಿದ ಮಾಹಿತಿ ಆಧರಿಸಿ ಕಾವೇರಿ ವನ್ಯಧಾಮದ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದರು.

ಅರಣ್ಯಾಧಿಕಾರಿಗಳನ್ನು ನೋಡುತ್ತಿದ್ದಂತೆ ಬೇಟೆಗಾರರು ಅಧಿಕಾರಿಗಳು ಮತ್ತು ಸಿಬ್ಬಂದಿಯತ್ತ ಗುಂಡು ಹಾರಿಸಿದರು. ಕೂಡಲೇ ಅರಣ್ಯಾಧಿಕಾರಿಗಳು ಗಾಳಿಯಲ್ಲಿ ಗುಂಡು ಹಾರಿಸಿದಾಗ ಬೆದರಿದ ಬೇಟೆಗಾರರು ತಮ್ಮಲ್ಲಿದ್ದ ನಾಡಬಂದೂಕು ಸೆರಿದಂತೆ ಬೇಟೆಯಾಡುವ ಸಲಕರಣೆಗಳನ್ನು ತೆಪ್ಪದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಘಟನೆಯಲ್ಲಿ ಯಾರಿಗೂ ಏನೂ ಆಗಿಲ್ಲ.

ADVERTISEMENT

ಪರಾರಿಯಾಗಿರುವ ನಾಲ್ವರೂ ತಮಿಳುನಾಡಿನ ಗೋವಿಂದಪಾಡಿ ಗ್ರಾಮದವರು ಎಂದು ಅರಣ್ಯಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

‘ನಾಡಬಂದೂಕು, ತಲೆಬ್ಯಾಟರಿ, ಬಲೆಗಳು ಹಾಗೂ ಮೃತಪಟ್ಟಿರುವ ಎರಡು ಜಿಂಕೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವರ ಬಳಿ ನಾಡಬಂದೂಕು ಇದ್ದುದರಿಂದ ಪ್ರಕರಣವನ್ನು ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ’ ಎಂದು ಕಾವೇರಿ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ನಂದೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.