ADVERTISEMENT

ಗುಂಡ್ಲುಪೇಟೆ: ನಿರ್ವಹಣೆ ಕೊರತೆಯಿಂದ ಕೆರೆಯಲ್ಲಿ ನಿಲ್ಲದ ನೀರು

ಕೆರೆ ತುಂಬಿಸುವ ಯೋಜನೆಗಳಲ್ಲಿ 24 ಕೆರೆಗಳಿಗೆ ನೀರು

ಮಲ್ಲೇಶ ಎಂ.
Published 13 ಸೆಪ್ಟೆಂಬರ್ 2021, 19:30 IST
Last Updated 13 ಸೆಪ್ಟೆಂಬರ್ 2021, 19:30 IST
ಬರಿದಾಗಿರುವ ತಾಲ್ಲೂಕಿನ ಹಂಗಳ ಕೆರೆಯ ನೋಟ. ಗಿಡಗಂಟಿಗಳು ಬೆಳೆದು, ಹೂಳು ತುಂಬಿ ಕೆರೆ ಪಾಳು ಬಿದ್ದಿದೆ
ಬರಿದಾಗಿರುವ ತಾಲ್ಲೂಕಿನ ಹಂಗಳ ಕೆರೆಯ ನೋಟ. ಗಿಡಗಂಟಿಗಳು ಬೆಳೆದು, ಹೂಳು ತುಂಬಿ ಕೆರೆ ಪಾಳು ಬಿದ್ದಿದೆ   

ಗುಂಡ್ಲುಪೇಟೆ: ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿರುವ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಸರ್ಕಾರಿ ಲೆಕ್ಕಕ್ಕೆ 130 ಕೆರೆಗಳು ಸಿಗುತ್ತವೆ. ಆದರೆ, ಕೆರೆ ತುಂಬಿಸುವ ಯೋಜನೆ ವ್ಯಾಪ್ತಿಗೆ ಸೇರಿದ ಕೆರೆಗಳನ್ನು ಬಿಟ್ಟರೆ ಉಳಿದವುಗಳಲ್ಲಿ ಮಳೆಗಾಲದಲ್ಲೂ ನೀರು ತುಂಬುವುದಿಲ್ಲ.

ಈ ವರ್ಷದ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ, ಈ ಬಾರಿ ತಾಲ್ಲೂಕಿನಲ್ಲಿ ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿದೆ. ಆದರೆ ಯಾವ ಕೆರೆಗಳೂ ತುಂಬಿಲ್ಲ. ಕೆಲವು ಕೆರೆಗಳಿಗೆ ಸ್ವಲ್ಪ ಪ್ರಮಾಣದಲ್ಲಿ ನೀರು ಹರಿದು ಬಂದರೂ, ನಿರ್ವಹಣೆಯ ಕೊರತೆಯಿಂದ ಕೆರೆಯಲ್ಲಿ ಅವು ದೀರ್ಘ ಸಮಯ ಉಳಿಯುತ್ತಿಲ್ಲ. ನೀರಿಲ್ಲದ ಕೆರೆಗಳ ಅಂಗಳದಲ್ಲಿ ಜಾಲಿ ಸೇರಿದಂತೆ ಇತರೆ ಗಿಡಗಂಟಿಗಳು ಬೆಳೆದು ಕಾಡಿನ ರೀತಿ ಕಾಣಿಸುತ್ತಿವೆ.

ದೊಡ್ಡ ಕೆರೆಗಳ ಏರಿಗಳು ಸದೃಢವಾಗಿಲ್ಲ.ಆಗಸ್ಟ್ 22ರಂದು ಬೇಗೂರು ಹೋಬಳಿಯ ಬೆಳಚವಾಡಿ ಕೆರೆಯ ಏರಿ ಒಡೆದು 52 ಎಕರೆಗಳಷ್ಟು ಪ್ರದೇಶದಲ್ಲಿ ಬೆಳೆ ನಾಶವಾಗಿದ್ದು ಇದಕ್ಕೆ ಒಂದು ಉದಾಹರಣೆ.ಕರಕಲಮಾದಳ್ಳಿ ಕೆರೆಯಲ್ಲಿ ಸದ್ಯ ನೀರಿದೆ. ಈ ಕೆರೆಯ ಏರಿಯಲ್ಲೂ ಬಿರುಕು ಕಾಣಿಸಿಕೊಂಡು ನೀರು ಜಿನುಗುತ್ತಿದೆ. ಏರಿ ಒಡೆದು ಹೋಗುವ ಭೀತಿಯಲ್ಲಿ ಗ್ರಾಮಸ್ಥರು ಇದ್ದಾರೆ. ತಕ್ಷಣವೇ ದುರಸ್ತಿ ಮಾಡುವಂತೆ ಗ್ರಾಮಸ್ಥರು ಶಾಸಕರು ಹಾಗೂ ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದಾರೆ.

ADVERTISEMENT

ತಾಲ್ಲೂಕಿನಲ್ಲಿರುವ 130 ಕೆರೆಗಳ ಪೈಕಿ 24 ಕೆರೆಗಳು ಸಣ್ಣ ನೀರಾವರಿ ಇಲಾಖೆಯ ಮಾಲೀಕತ್ವದಲ್ಲಿವೆ. 28 ಕೆರೆಗಳನ್ನು ಜಿಲ್ಲಾ ಪಂಚಾಯಿತಿ ನಿರ್ವಹಿಸುತ್ತಿದೆ. ಉಳಿದವು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕೆರೆಗಳು.ಕೆರೆಗೆ ನೀರು ತುಂಬಿಸುವ ಯೋಜನೆಗಳಿಂದ ತಾಲ್ಲೂಕಿನ 24 ಕೆರೆಗಳಿಗೆ ಈಗಾಗಲೇ ನೀರು ಹರಿಯುತ್ತಿದೆ.

ಗಾಂಧಿಗ್ರಾಮ ಏತ ನೀರಾವರಿ ಯೋಜನೆ ವ್ಯಾಪ್ತಿಯಲ್ಲಿ ಬೆಳಚವಾಡಿ, ಚಿಕ್ಕಾಟಿ, ತೊಂಡವಾಡಿ, ಕಮರಹಳ್ಳಿ, ಹಳ್ಳದ ಮಾದಹಳ್ಳಿ, ರಾಘವಾಪುರ, ಗರಗನಹಳ್ಳಿ, ಅಗತಗೌಡನ ಹಳ್ಳಿ, ಹೆಗ್ಗಡಹಳ್ಳಿ, ಮಳವಳ್ಳಿ ಕೆರೆಗಳು ಬರುತ್ತವೆ. ಕಳೆದ ವರ್ಷದಿಂದ ಕೆಲವು ಕೆರೆಗಳಿಗೆ ನೀರು ಹರಿಸಲಾಗುತ್ತಿದೆ.

ಆಲಂಬೂರು ಏತ ನೀರಾವರಿ ಯೋಜನೆ ಅಡಿಯಲ್ಲಿ ಶ್ಯಾನಡ್ರಹಳ್ಳಿ, ಬಲಚವಾಡಿ, ತೆರಕಣಾಂಬಿಯ ದೊಡ್ಡಕೆರೆ, ತೆರಕಣಾಂಬಿ ಕೆರೆ, ಹುತ್ತೂರು, ವಡ್ಡಗೆರೆ, ಕರಕಲಮಾದಳ್ಳಿ, ಬೊಮ್ಮನಹಳ್ಳಿ, ಯರಿಯೂರು, ವಡೆಯನಪುರ, ಬೋಮ್ಮಲಾಪುರ, ಕಲ್ಲಟ್ಟ ಹಳ್ಳ ಕೆರೆ, ಗುಂಡ್ಲುಪೇಟೆ ದೊಡ್ಡ ಕೆರೆ, ನಲ್ಲೂರು ಅಮ್ಮಣಿ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಕೆರೆ ತುಂಬಿಸುವ ಯೋಜನೆಯ ಕೆರಗಳ ಪೈಕಿ ಅನೇಕ ಕೆರೆಗಳು ನಿರ್ವಹಣೆ ಕೊರತೆ ಎದುರಿಸುತ್ತಿವೆ.

ಗ್ರಾಮೀಣ ಮಟ್ಟದ ಕೆರೆಗಳು ಒತ್ತುವರಿಯಾಗಿವೆ. ಕೆರೆಗಳಲ್ಲಿ ಗಿಡಗಂಟಿಗಳು ಬೆಳೆದು ನೀರು ನಿಲ್ಲುವುದಕ್ಕೆ ಯೋಗ್ಯವಾಗಿಲ್ಲ ಎಂದು ಹೇಳುತ್ತಾರೆ ರೈತರು.

ಕೆರೆತುಂಬಿಸುವ ಯೋಜನೆಗಳಿಂದಾಗಿ ಕೆರೆಗಳಿರುವ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟದಲ್ಲಿ ಗಣನೀಯ ಸುಧಾರಣೆ ಕಂಡು ಬಂದಿದೆ.

‘ಹಿಂದಿನಂತೆ ಈಗ ಕೆರೆಗಳು ಕುಡಿಯುವ ನೀರಿನ ಉದ್ದೇಶಕ್ಕೆ ಬಳಕಯಾಗುತ್ತಿಲ್ಲ. ಕೆರೆಗಳು ತುಂಬಿದರೆ ಅಂತರ್ಜಲದ ಮಟ್ಟ ಏರಿಕೆ ಆಗುತ್ತದೆ. ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ಉಂಟಾಗುವುದಿಲ್ಲ. ಮಳೆ ಸಾಕಷ್ಟು ಬಂದರೂ, ಕೆರೆಗೆ ನೀರು ಹರಿಯುವ ಕಾಲುವೆಗಳು ಮುಚ್ಚಿ ಹೋಗಿವೆ. ಕೆರೆಗಳ ತೂಬುಗಳು ಸರಿ ಇಲ್ಲ. ಹೂಳಿನ ಸಮಸ್ಯೆ ಕೆರೆಗಳ ನೀರು ಸಂಗ್ರಹ ಸಾಮರ್ಥ್ಯ ಕುಗ್ಗಿಸಿವೆ’ ಎಂದು ತಾಲ್ಲೂಕಿನ ಕೆರೆಗಳ ಬಗ್ಗೆ ಅಧ್ಯಯನ ಮಾಡುತ್ತಿರುವ ಬೆಂಡರವಾಡಿ ಗ್ರಾಮದ ಆನಂದ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಅನುದಾನದ ಕೊರತೆ: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನರೇಗಾ ಅಡಿಯಲ್ಲಿ ಕೆರೆಗಳನ್ನು ದುರಸ್ತಿ ಮಾಡುವ ಪ್ರಯತ್ನ ನಡೆಯುತ್ತಿದೆ. ಒಮ್ಮೆ ದುರಸ್ತಿ ಮಾಡಿದರೆ ಅದನ್ನು ಹಾಗೆಯೇ ಬಿಡಲಾಗುತ್ತದೆ. ನಂತರ ನಿರ್ವಹಣೆ ಮಾಡುತ್ತಿಲ್ಲ. ಇದರಿಂದ ಮಾಡಿರುವ ಕೆಲಸವೂ ಪ್ರಯೋಜನಕ್ಕೆ ಬಾರದಂತಾಗುತ್ತಿದೆ.

ಕೆರೆಗಳ ನಿರ್ವಹಣೆಗೆ ನಿಗದಿತ ಹಣ ಬಿಡುಗಡೆಯಾಗುವುದಿಲ್ಲ ಎಂದು ಪಿಡಿಒಗಳು ಅಳಲು ತೋಡಿಕೊಳ್ಳುತ್ತಾರೆ.

61 ಕೆರೆಗಳ ಒತ್ತುವರಿ ತೆರವು

ಜಿಲ್ಲಾಡಳಿತ ಕೈಗೆತ್ತಿಕೊಂಡಿರುವ ಕೆರೆ ಸಂರಕ್ಷಣೆ ಕಾರ್ಯಕ್ರಮದಲ್ಲಿ ಸೆಪ್ಟೆಂಬರ್‌ ತಿಂಗಳ ಆರಂಭದವರೆಗೆ ಗುಂಡ್ಲುಪೇಟೆ ತಾಲ್ಲೂಕಿನ 117 ಕೆರೆಗಳ ಸರ್ವೆ ಕಾರ್ಯ ಪೂರ್ಣಗೊಂಡಿದ್ದು, 71 ಕೆರೆಗಳು ಒತ್ತುವರಿಯಾಗಿರುವುದನ್ನು ಭೂಮಾಪನ ಇಲಾಖೆ ಗುರುತಿಸಿತ್ತು. ಈ ಪೈಕಿ 61 ಕೆರೆಗಳ ಒತ್ತುವರಿಯನ್ನು ಕಂದಾಯ ಇಲಾಖೆ ತೆರವುಗೊಳಿಸಿದೆ. ಇನ್ನು 13 ಕೆರೆಗಳು ಸರ್ವೆಗೆ ಬಾಕಿ ಇವೆ. ಈ ತಿಂಗಳಲ್ಲಿ ಅದು ಪೂರ್ಣಗೊಳ್ಳಲಿದೆ ಎಂದು ಹೇಳುತ್ತಾರೆ ಅಧಿಕಾರಿಗಳು.

ತಾಲ್ಲೂಕಿನಲ್ಲಿರುವ 130 ಕೆರೆಗಳ ವಿಸ್ತೀರ್ಣ 3,209.17 ಎಕರೆಗಳಷ್ಟಿದೆ. ಈ ಪೈಕಿ 1,479.34 ಎಕರೆಗಳಷ್ಟು ಕೆರೆಗಳ ಜಾಗ ಒತ್ತುವರಿಯಾಗಿರುವುದನ್ನು ಪತ್ತೆ ಹಚ್ಚಿತ್ತು. ಕಂದಾಯ ಇಲಾಖೆಯು ಕಾರ್ಯಾಚರಣೆ ನಡೆಸಿ 1,348.29 ಎಕರೆ ಪ್ರದೇಶದಲ್ಲಿದ್ದ ಒತ್ತುವರಿಯನ್ನು ತೆರವುಗೊಳಿಸಿದೆ.

––

ತಾಲ್ಲೂಕಿನ ಕೆಲವು ಕೆರೆಗಳಿಗೆ ಈಗಾಗಲೇ ನೀರು ತುಂಬಿಸಲಾಗಿದೆ. ಉಳಿದವುಗಳಿಗೆ ನೀರು ಹರಿಸಲು ಕ್ರಮಕೈಗೊಳ್ಳಲಾಗುವುದು

-ಸಿ.ಎಸ್.ನಿರಂಜನ ಕುಮಾರ್, ಗುಂಡ್ಲುಪೇಟೆ ಶಾಸಕ

––

ಮಳೆ ಬಂದರೂ ಕೆರೆಗಳಲ್ಲಿ ನೀರಿಲ್ಲ. ಕೆರೆಗಳಿಗೆ ನೀರು ಹರಿದು ಹೋಗುವ ಜಾಗ ಎಲ್ಲೂ ಇಲ್ಲ. ನಿರ್ವಹಣೆಗೆ ಒತ್ತು ನೀಡುವ ಅಗತ್ಯವಿದೆ

-ಆನಂದ್‌, ಬೆಂಡರವಾಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.