ADVERTISEMENT

ಕೋವಿಡ್ ನಿಯಂತ್ರಣಕ್ಕೆ ಕಾರ್ಯಪಡೆ ರಚನೆ: ಎಸ್.ಸುರೇಶ್‌ಕುಮಾರ್

ಮರಣದರ ಕಡಿಮೆ ಮಾಡಲು ಪರಿಣತರ ತಂಡ ಕರೆಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 7 ಮೇ 2021, 5:05 IST
Last Updated 7 ಮೇ 2021, 5:05 IST
ಸಚಿವ ಎಸ್.ಸುರೇಶ್‌ಕುಮಾರ್ ಅವರು ಗುರುವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು
ಸಚಿವ ಎಸ್.ಸುರೇಶ್‌ಕುಮಾರ್ ಅವರು ಗುರುವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು   

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಿಸಲು 15 ಮಂದಿ ಸದಸ್ಯರಿರುವ ಕಾರ್ಯಪಡೆಯೊಂದನ್ನು ರಚಿಸಲಾಗಿದ್ದು, ಇನ್ನು ಮುಂದೆ ಕೋವಿಡ್ ನಿಯಂತ್ರಣಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ಉಸ್ತುವಾರಿ ಸಚಿವ ಎಸ್.ಸುರೇಶ್‌ಕುಮಾರ್ ವ್ಯಕ್ತಪಡಿಸಿದರು.

ಜಿಲ್ಲೆಯ ಎಲ್ಲ ಶಾಸಕರು ಸದಸ್ಯರಾಗಿರುವ ಈ ಕಾರ್ಯಪಡೆ ಕೋವಿಡ್ ನಿಯಂತ್ರಣ ಮಾತ್ರವಲ್ಲ ಆಮ್ಲಜನಕ ಪೂರೈಕೆಯ ಮೇಲೂ ನಿಗಾ ವಹಿಸಲಿದೆ. ಒಬ್ಬೊಬ್ಬ ಅಧಿಕಾರಿಗಳಿಗೂ ಒಂದೊಂದು ಜವಾಬ್ದಾರಿ ನೀಡಲಾಗಿದೆ ಎಂದು ಅವರು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಡಿಸಿಎಫ್ ಏಡುಕುಂಡಲು ಅವರಿಗೆ ಆಮ್ಲಜನಕ ಪೂರೈಕೆಯ ಜವಾಬ್ದಾರಿ ನೀಡಲಾಗಿದೆ. ಆಮ್ಲಜನಕವನ್ನು ತುಂಬಿಸುವಿಕೆಯ ಹೊಣೆ ಪ್ರಭುಸ್ವಾಮಿ ಅವರದು. ಆಸ್ಪತ್ರೆಯ ಬೆಡ್‌ ವ್ಯವಸ್ಥೆಯನ್ನು ಡಿಸಿಎಫ್ ಸಂತೋಷ್ ನೋಡಿಕೊಳ್ಳುವರು. ಶಾಸಕರ ಜತೆಗೆ ಜಿಲ್ಲಾಧಿಕಾರಿ , ಜಿಲ್ಲಾ ಸರ್ಜನ್, ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಚಾಮರಾಜನಗರ ವೈದ್ಯಕೀಯ ಕಾಲೇಜಿನ ಡೀನ್‌ ಮತ್ತು ನಿರ್ದೇಶಕರು ಕಾರ್ಯಪಡೆಯ ಸದಸ್ಯರಾಗಿರುತ್ತಾರೆ ಎಂದರು.

ADVERTISEMENT

ಇದೇ ಬಗೆಯಲ್ಲಿ ತಾಲ್ಲೂಕು ಮಟ್ಟದಲ್ಲಿ ಶಾಸಕರ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲಾಗಿದೆ. ಇಲ್ಲೂ ಇದೇ ರೀತಿ ಹೊಣೆಗಾರಿಕೆಯನ್ನು ಹಂಚಿಕೆ ಮಾಡಲಾಗಿದೆ. ಇದರ ಉದ್ದೇಶ ಕೋವಿಡ್‌ನ್ನು ಶರವೇಗದಲ್ಲಿ ನಿಯಂತ್ರಣಕ್ಕೆ ತರುವುದಾಗಿದೆ ಎಂದು ಹೇಳಿದರು.

ಕಳೆದ ವರ್ಷ ಹಲವು ತಿಂಗಳ ಕಾಲ ಕೋವಿಡ್ ನಿಯಂತ್ರಣದ ವಿಚಾರದಲ್ಲಿ ದೇಶದಲ್ಲಿಯೇ ಚಾಮರಾಜನಗರ ಹೆಸರುವಾಸಿಯಾಗಿತ್ತು. ಆದರೆ, ಈಗ ಬೇರೆ ಕಾರಣಕ್ಕೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಲ್ಲಿರುವುದು ನಿಜಕ್ಕೂ ಬೇಸರ ತರಿಸಿದೆ ಎಂದು ತಿಳಿಸಿದರು.

ಮತ್ತೆ ಹಳೆಯ ವೈಭವದತ್ತ ಜಿಲ್ಲೆಯನ್ನು ಕೊಂಡೊಯ್ಯಲು ಪಣ ತೊಡಲಾಗಿದೆ. ಇದಕ್ಕೆ ಎಲ್ಲ ಅಧಿಕಾರಿಗಳೂ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕಿದೆ ಎಂದರು.

ಕೇವಲ ಅಧಿಕಾರಿಗಳಿಂದ ಮಾತ್ರವೇ ಕೋವಿಡ್ ನಿಯಂತ್ರಣವಾಗುವುದಿಲ್ಲ. ಸಾರ್ವಜನಿಕರ ಸಹಕಾರ ತೀರಾ ಅಗತ್ಯ ಇದೆ. ಆಸ್ಪತ್ರೆಯ ಒಳಗೆ ಬಂದರೆ ವೇದನೆಪಡುವಂತಹ ಸ್ಥಿತಿ. ಹೊರಗೆ ಸಾರ್ವಜನಿಕರು ಇದಕ್ಕೂ ತಮಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಇಂತಹ ಬೇಜವಾಬ್ದಾರಿ ವರ್ತನೆಗೆ ಸಾರ್ವಜನಿಕರು ಇನ್ನಾದರೂ ಕಡಿವಾಣ ಹಾಕಿಕೊಳ್ಳಬೇಕು ಎಂದು ಮನವಿ ಮಾಡಿದರು.‌

ಕೊರೊನಾ ಸೋಂಕಿತರೂ ಸಹ ತಡ ಮಾಡದೇ ಆಸ್ಪತ್ರೆಗೆ ಬರಬೇಕು. ತಡವಾಗಿ, ರೋಗ ಉಲ್ಬಣಗೊಂಡ ಬಳಿಕ ಆಸ್ಪತ್ರೆಗೆ ಬಂದರೆ ನಿಜಕ್ಕೂ ಏನು ಮಾಡಲಾಗದು. ರೋಗ ಲಕ್ಷಣಗಳು ಕಾಣಿಸಿಕೊಂಡ ಬಳಿಕ ಅಥವಾ ಕೊರೊನಾ ಪಾಸಿಟೀವ್ ಆದ ನಂತರ ಒಂದೊಂದು ದಿನವೂ ಮುಖ್ಯ. ಒಂದೊಂದು ದಿನ ಕಳೆಯುತ್ತಿದ್ದಂತೆ ರೋಗ ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚು ಎಂಬುದನ್ನು ಯಾರೂ ಮರೆಯಬಾರದು ಎಂದು ಅವರು ಕಿವಿಮಾತು ಹೇಳಿದರು.

ಆಮ್ಲಜನಕದ ಸಂಕಷ್ಟ ಹೀಗಿದೆ
ಜಿಲ್ಲೆಯಲ್ಲಿ ಆಮ್ಲಜನಕದ ಫಿಲ್ಲಿಂಗ್ ಪಾಯಿಂಟ್ ಇಲ್ಲದೇ ಇರುವುದರಿಂದ ಪ್ರತಿ ಸಿಲಿಂಡರ್ ಮೈಸೂರಿಗೆ ಹೋಗಿ ತುಂಬಿಸಿಕೊಂಡು ಬರಬೇಕಿದೆ. ಒಂದು ಸಿಲಿಂಡರ್ ತುಂಬಿಸಿಕೊಳ್ಳುವುದಕ್ಕೆ ಸುಮಾರು 40 ನಿಮಿಷ ಬೇಕಾಗುತ್ತದೆ. ಒಟ್ಟಿಗೆ 42 ಸಿಲಿಂಡರ್‌ನ್ನು ತುಂಬಿಸಬಹುದು. ದಾಬಾಸ್‌ಪೇಟೆಯಿಂದ ಲಿಕ್ವಿಡ್‌ ಆಮ್ಲಜನಕದ ಟ್ಯಾಂಕರ್ ಹೊರಟಾಗ ಮಂಡ್ಯದಿಂದ ಒಂದು ಎಸ್ಕಾರ್ಟ್ ನೆರವಿನಿಂದ ಬರುತ್ತದೆ. ನಮ್ಮ ಜಿಲ್ಲೆಯ ಗಡಿ ಸಮೀಪ ಬಂದರೆ ನಮ್ಮ ಎಸ್ಕಾರ್ಟ್‌ನ್ನು ಕಳುಹಿಸಿ ತರಿಸಿಕೊಳ್ಳಲಾಗುವುದು ಎಂದು ಸಚಿವ ಎಸ್.ಸುರೇಶ್‌ಕುಮಾರ್ ಮಾಹಿತಿ ನೀಡಿದರು.

200 ಬೆಡ್‌ಗಳ ಆಸ್ಪತ್ರೆ 4ರಿಂದ 5 ದಿನಗಳಲ್ಲಿ ಕಾರ್ಯಾರಂಭ ಆಗಲಿದೆ. ಸದ್ಯ, ಜಿಲ್ಲಾಸ್ಪತ್ರೆಗೆ ಆಮ್ಲಜನಕದ ಪೂರೈಕೆ ಸಾಕಾಗುವಷ್ಟು ಇದೆ. ಚಾಮರಾಜನಗರದ ಎಲ್ಲ ನಗರಪಾಲಿಕೆ ಸದಸ್ಯರನ್ನು ಕರೆದು ಸಭೆ ನಡೆಸಲಾಗುವುದು. ಗ್ರಾಮ ಪಂಚಾಯಿತಿ ಸದಸ್ಯರನ್ನು ಒಳಗೊಳ್ಳಲಾಗುವುದು. ಪ್ರತಿ 2 ದಿನಕ್ಕೊಮ್ಮೆ ಕಾರ್ಯಪಡೆ ಸಭೆ ನಡೆಸಲು ನಿರ್ಧರಿಸಲಾಗಿದೆ. ಎಂದರು.

ಸರ್ಕಾರ ಹೇರಿರುವ ನಿರ್ಬಂಧಗಳನ್ನು ದಯವಿಟ್ಟು ಎಲ್ಲ ಸಾರ್ವಜನಿಕರು ಅನುಸರಿಸಿ ಸಹಕಾರ ನೀಡಬೇಕು. ಎಲ್ಲೂ ಗುಂಪುಗೂಡದಂತೆ ಎಚ್ಚರ ವಹಿಸಬೇಕು. ತುಂಬಾ ತಡವಾಗಿ ಕೊನೆಯ ಹಂತದಲ್ಲಿ ಕೋವಿಡ್ ರೋಗಿಗಳನ್ನು ಆಸ್ಪತ್ರೆಗೆ ಕರೆತರುವ ಬದಲು ರೋಗ ಲಕ್ಷಣಗಳು ಕಂಡು ಬಂದ ಕೂಡಲೇ ಆಸ್ಪತ್ರೆ ಕರೆತರಬೇಕು ಎಂದು ಮನವಿ ಮಾಡಿದರು.

ಆಶಾ ಕಾರ್ಯಕರ್ತೆಯರ ಮೂಲಕ ಎಲ್ಲ ಮನೆಗಳ ಸಮೀಕ್ಷೆಯನ್ನು ನಡೆಸಲಾಗುವುದು. 10ಕ್ಕಿಂತ ಹೆಚ್ಚು ಸೋಂಕಿತರು ಇದ್ದರೆ ಆ ಪ್ರದೇಶವನ್ನು ಕಂಟೈನ್‌ಮೆಂಟ್ ವಲಯವನ್ನಾಗಿ ಮಾಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.