ಚಾಮರಾಜನಗರ: ದೇಶದ ಸತ್ಪ್ರಜೆಗಳನ್ನು ರೂಪಿಸುವ ಶಿಕ್ಷಕರ ವೃತ್ತಿ ಶ್ರೇಷ್ಠ ಹಾಗೂ ಮಹತ್ವ ಹೊಂದಿದೆ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಅಭಿಪ್ರಾಯಪಟ್ಟರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಡಾ.ಎಸ್.ರಾಧಾಕೃಷ್ಣನ್ ಹಾಗೂ ಸಾವಿತ್ರಿ ಬಾಫುಲೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
ಶಿಕ್ಷಕರು ಶಾಲೆಗಳಲ್ಲಿ ಪಾಠ, ಪ್ರವಚನ ಮಾಡಬಲ್ಲರು, ದೇಶದ ಆಡಳಿತ ಚುಕ್ಕಾಣಿಯನ್ನೂ ಹಿಡಿಯಬಲ್ಲರು ಎಂಬುದಕ್ಕೆ ಮಾಜಿ ಉಪ ರಾಷ್ಟ್ರಪತಿ ಡಾ.ಎಸ್.ರಾಧಾಕೃಷ್ಣನ್ ಉತ್ತಮ ನಿದರ್ಶನ. ಜ್ಯೋತಿ ಬಾಫುಲೆ ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿ ಶಾಲೆಗಳನ್ನು ತೆರೆದರು. ಸಾವಿತ್ರಿ ಬಾಫುಲೆ ದೇಶದ ಮೊದಲ ಮಹಿಳಾ ಶಿಕ್ಷಕಿಯಾಗಿ ಶಿಕ್ಷಕ ವೃತ್ತಿಯ ಶ್ರೇಷ್ಠತೆ ಸಾರಿದರು ಎಂದು ಹೇಳಿದರು.
ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಶಿಕ್ಷಕರ ಸೇವೆ ಅವಿಸ್ಮರಣೀಯವಾದುದು, ದಶಕಗಳ ಹಿಂದೆ ಎಲ್ಲರಿಗೂ ಶಿಕ್ಷಣ ಕೈಗೆಟುಕುತ್ತಿರಲಿಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚನೆ ಮಾಡಿದ ಬಳಿಕ ಪ್ರತಿಯೊಬ್ಬರಿಗೂ ಶಿಕ್ಷಣದ ಹಕ್ಕು ನೀಡಿದರು ಎಂದರು.
ಅಂಬೇಡ್ಕರ್, ಫುಲೆ ದಂಪತಿ ತ್ಯಾಗ, ಪರಿಶ್ರಮ, ದೂರದೃಷ್ಟಿತ್ವದ ಫಲವಾಗಿ ತುಳಿತಕ್ಕೊಳಗಾದ ಸಮುದಾಯಗಳು ಶಿಕ್ಷಣ ಪಡೆಯಲು ಸಾಧ್ಯವಾಯಿತು. ಶಿಕ್ಷಕರು ಸಮಾಜಕ್ಕೆ ಆದರ್ಶಪ್ರಾಯರಾಗಿರಬೇಕು, ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸಲು ಪಠ್ಯದ ಜೊತೆಗೆ ನೈತಿಕ ಶಿಕ್ಷಣ ನೀಡಬೇಕು ಎಂದರು.
ಮೈಸೂರು ಮಹಾರಾಜ ಕಾಲೇಜಿನ ಪ್ರಾಧ್ಯಾಪಕ ಬಿಪಿನ್ ನಾಗರಾಜು ಮಾತನಾಡಿ, ಶಿಕ್ಷಕರ ದಿನಾಚರಣೆಗಿಂತ ಶಿಕ್ಷಣದ ಮೌಲ್ಯಗಳ ಪಾಲನೆಯಾಗಬೇಕು. ಶಿಕ್ಷಣದ ಅರಿವಿಲ್ಲದಿದ್ದರೆ ಉತ್ತಮ ಶಿಕ್ಷಕನಾಗಲು ಸಾಧ್ಯವಿಲ್ಲ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬುದು ಕೇವಲ ನಾಣುಡಿಯಲ್ಲ; ನೈಜ ಸತ್ಯವಾಗಿದ್ದು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು.
ಇಂದಿನ ಶಿಕ್ಷಕರು ಮತ್ತಷ್ಟು ಪರಿಪಕ್ವವಾಗಬೇಕು, ವೈಚಾರಿಕ ನೆಲೆಗಟ್ಟಿನಲ್ಲಿ ಬೋಧನೆ ಮಾಡಬೇಕು, ವಿದ್ಯಾರ್ಥಿಗಳ ತಪ್ಪುಗಳನ್ನು ಗುರುತಿಸಿ ತಿದ್ದಿತೀಡುವ ಶಿಲ್ಪಿಗಳಾಗಬೇಕು. ಮಕ್ಕಳ ಶೈಕ್ಷಣಿಕ ಜೀವನದಲ್ಲಿ ಸಕಾರಾತ್ಮಕ ಪ್ರಭಾವ ಬೀರಬೇಕು ಎಂದರು.
ಬುದ್ಧ, ಬಸವ, ಕನಕದಾಸ, ಫಾತಿಮಾ ಬೇಗಂ, ಅಂಬೇಡ್ಕರ್, ಪೆರಿಯಾರ್ ರಾಮಸ್ವಾಮಿ, ಬ್ರಹ್ಮಶ್ರೀ ನಾರಾಯಣಗುರು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಂತಹ ಶ್ರೇಷ್ಠ ವ್ಯಕ್ತಿಗಳ ಹೋರಾಟ, ಪರಿಶ್ರಮದ ಫಲವಾಗಿ ಪ್ರತಿಯೊಬ್ಬರಿಗೂ ಶಿಕ್ಷಣ ದಕ್ಕುತ್ತಿದೆ. ನೆಮ್ಮದಿಯ ಜೀವನವೂ ದೊರೆಯುತ್ತಿದೆ ಎಂದು ಹೇಳಿದರು.
ಸಮಾಜಕ್ಕೆ ಮೆರವಣಿಗೆಯ ಆದರ್ಶ ವ್ಯಕ್ತಿಗಳ ಅವಶ್ಯಕತೆ ಇಲ್ಲ, ಬರವಣಿಗೆಯ ವ್ಯಕ್ತಿಗಳು ಬೇಕಾಗಿದ್ದಾರೆ. ಶಿಕ್ಷಕರು ಕಂದಾಚಾರ, ಮೌಢ್ಯಗಳನ್ನು ಬಿಟ್ಟು ಜಾಗೃತರಾಗಿ ಸಮಸಮಾಜ ಕಟ್ಟುವಲ್ಲಿ ಮಕ್ಕಳಿಗೆ ತಿಳಿವಳಿಕೆ ನೀಡಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಎಚ್.ವಿ. ಚಂದ್ರು ಹಾಗೂ ನಗರಸಭಾ ಸದಸ್ಯ ಎಂ.ಮಹೇಶ್ ಮಾತನಾಡಿದರು.
ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಆಯ್ಕೆಯಾದ ಶಿಕ್ಷಕರಿಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಮೃತ ಶಿಕ್ಷಕರ ಗೌರವಾರ್ಥ ಮೌನಾಚರಣೆ ಮಾಡಲಾಯಿತು.
ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮದ್ ಅಸ್ಗರ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಚಂದ್ರಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಶಿಕ್ಷಕರ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು, ಬೋಧಕ, ಬೋಧಕೇತರ ಸಂಘಗಳು, ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಇದ್ದರು.
ಮೆರವಣಿಗೆ
ಜಿಲ್ಲಾಡಳಿತ ಭವನದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಗಣ್ಯರು ಗೌರವ ಸಲ್ಲಿಸಿದರು. ಬಳಿಕ ಪೇಟೆ ಪ್ರೈಮರಿ ಶಾಲೆಯಿಂದ ಡಾ. ಬಿ.ಆರ್.ಅಂಬೇಡ್ಕರ್ ಭವನದವರೆಗೆ ಡಾ.ಎಸ್.ರಾಧಾಕೃಷ್ಣನ್ ಹಾಗೂ ಸಾವಿತ್ರಿ ಬಾಫುಲೆ ಅವರ ಭಾವಚಿತ್ರಗಳ ಮೆರವಣಿಗೆ ನಡೆಯಿತು. ಕಲಾತಂಡಗಳ ಪ್ರದರ್ಶನ ಗಮನ ಸೆಳೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.