ADVERTISEMENT

ಶಿಕ್ಷಕರ ವೃತ್ತಿ ಬಹಳ ಮಹತ್ವವಾದದ್ದು

ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ: ಎಆರ್‌ಕೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 4:26 IST
Last Updated 20 ಸೆಪ್ಟೆಂಬರ್ 2025, 4:26 IST
ಕೊಳ್ಳೇಗಾಲ ನಗರದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರಿಗೆ ಸನ್ಮಾನ ಮಾಡಲಾಯಿತು
ಕೊಳ್ಳೇಗಾಲ ನಗರದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರಿಗೆ ಸನ್ಮಾನ ಮಾಡಲಾಯಿತು   

ಕೊಳ್ಳೇಗಾಲ: ನಮ್ಮ ದೇಶದಲ್ಲಿ ಉತ್ತಮ ಪ್ರಜೆಗಳನ್ನು ರೂಪಿಸುವ ಜವಾಬ್ದಾರಿ ನಮ್ಮ ದೇಶದ ಶಿಕ್ಷಕರ ಕೈಯಲಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

ನಗರದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ, ನಿವೃತ್ತ ಶಿಕ್ಷಕರಿಗೆ ಸನ್ಮಾನ ಮತ್ತು ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.

ಒಬ್ಬ ಶಿಲ್ಪಿ ಕಲ್ಲನ್ನು ಕೆತ್ತಿ ಸುಂದರವಾದ ವಿಗ್ರಹ ಮಾಡುವಂತೆ ಮಕ್ಕಳನ್ನು ತಿದ್ದಿ ಆಸಕ್ತಿಗೆ ತಕ್ಕಂತೆ ಉತ್ತಮ ಶಿಕ್ಷಣ ನೀಡುವುದು ಪ್ರತಿಯೊಬ್ಬ ಶಿಕ್ಷಕರ ಜವಾಬ್ದಾರಿ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಶಿಕ್ಷಕರು ನಿಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕು. ಶಿಕ್ಷಕರು ಈ ದೇಶದ ಆಸ್ತಿ ಇದ್ದಂತೆ. ಶಿಕ್ಷಕರು ಮನಸು ಮಾಡಿದರೆ ಈ ದೇಶವನ್ನೇ ಬದಲಾಯಿಸುವ ಶಕ್ತಿ ಅವರ ಕೈಯಲ್ಲಿದೆ, ಹಾಗಾಗಿ ಶಿಕ್ಷಕ ವೃತ್ತಿ ಬಹಳ ಮಹತ್ವವಾದದ್ದು. ಇತ್ತೀಚೆಗೆ ನಮ್ಮ ಜಿಲ್ಲೆಯಲ್ಲಿ ಫಲಿತಾಂಶ ಮಟ್ಟ ಕುಸಿದಿರುವುದು ನಿಜಕ್ಕೂ ಬೇಸರದ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ಆ ಕಳಂಕವನ್ನು ತಪ್ಪಿಸಿ ಉತ್ತಮ ಫಲಿತಾಂಶ ಬರಲು ಶಿಕ್ಷಕರು ಶ್ರಮಿಸುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಉತ್ತಮ ಶಿಕ್ಷಕರ ಪ್ರಶಸ್ತಿ ಪಡೆದ ಶಿಕ್ಷಕರಾದ ಭವನ್ಸ್ ಗೀತಾ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಮಹೇಶ್ವರಿ, ಎಂಸಿಕೆಸಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ಸುಧಾಕರ್, ಹಿತ್ತಲದೊಡ್ಡಿ ಶಾಲೆಯ ಕೆಂಪರಾಜು, ತೇರಂಬಳ್ಳಿ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಕಲೀಂ ಶರೀಫ್, ಹೊಸ ಮಾಲಂಗಿ ಶಾಲೆಯ ಬಸವರಾಜು, ಜಕ್ಕಳ್ಳಿ ಮ್ಯಾಥ್ಯು ಶಾಲೆಯ ಮುಖ್ಯ ಶಿಕ್ಷಕಿ ಲೀನಾ ಉರ್ಸುಲಾ ಮೋನಿಸಾ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಹಾಗೂ ನಿವೃತ್ತಿ ಹೊಂದಿದ್ದ ಎಸ್ವಿಕೆ ಕಾಲೇಜು ಪ್ರಾಂಶುಪಾಲ ಎಚ್.ಶ್ರೀಧರ್, ದೈಹಿಕ ಶಿಕ್ಷಕ ಸುಂದರರಾಜ್ ಸೇರಿದಂತೆ ಅನೇಕ ನಿವೃತ್ತಿ ಶಿಕ್ಷಕರಿಗೆ ಸನ್ಮಾನಿಸಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ರೇಖಾ, ಉಪಾಧ್ಯಕ್ಷ ಎ.ಪಿ.ಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜೇಂದ್ರ, ಬಿಇಒ ಮಂಜುಳಾ, ಬಿ.ಆರ್.ಸಿ ಮಹದೇವ ಕುಮಾರ್, ಅಕ್ಷರ ದಾಸೋಹ ರಂಗಸ್ವಾಮಿ, ಸೇರಿದಂತೆ ಎಲ್ಲಾ ಶಾಲ ಶಿಕ್ಷಕರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.