ADVERTISEMENT

ಚಾಮರಾಜನಗರ: ಆಮ್ಲಜನಕ ಘಟಕದಲ್ಲಿ ತಾಂತ್ರಿಕ ದೋಷ

​ಪ್ರಜಾವಾಣಿ ವಾರ್ತೆ
Published 8 ಜೂನ್ 2021, 14:43 IST
Last Updated 8 ಜೂನ್ 2021, 14:43 IST
ಜಿಲ್ಲಾಸ್ಪತ್ರೆಗೆ ಬಂದಿರುವ ಹೊಸ ಆಮ್ಲಜನಕ ಸಂಗ್ರಹ ಟ್ಯಾಂಕ್‌
ಜಿಲ್ಲಾಸ್ಪತ್ರೆಗೆ ಬಂದಿರುವ ಹೊಸ ಆಮ್ಲಜನಕ ಸಂಗ್ರಹ ಟ್ಯಾಂಕ್‌   

ಚಾಮರಾಜನಗರ: ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಹೊಸದಾಗಿ ಸ್ಥಾಪಿಸಲಾಗಿರುವ ಆಮ್ಲಜನಕ ಘಟಕದ ಟ್ಯಾಂಕ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ಹೊಸ ಟ್ಯಾಂಕ್‌ ಬಂದಿದೆ.

ಆದರೆ, ಟ್ಯಾಂಕ್‌ ಬಂದು ಒಂದು ವಾರವಾದರೂ ಇನ್ನೂ ಅಳವಡಿಕೆಯಾಗಿಲ್ಲ. ಟ್ಯಾಂಕ್‌ ಹೊತ್ತಿರುವ ಲಾರಿ ಆಸ್ಪತ್ರೆಯ ಬಳಿ ನಿಂತುಕೊಂಡಿದೆ.

ಘಟಕದಲ್ಲಿರುವ ಟ್ಯಾಂಕ್‌ನಲ್ಲಿ ಹೊರ ಭಾಗದ ಒತ್ತಡ ನಿಯಂತ್ರಣ ವ್ಯವಸ್ಥೆಯಲ್ಲಿ ದೋಷ ಕಂಡು ಬಂದಿದೆ ಎಂದು ಜಿಲ್ಲಾ ಸರ್ಜನ್‌ ಡಾ.ಶ್ರೀನಿವಾಸ್‌ ಹೇಳಿದ್ದಾರೆ.

ADVERTISEMENT

‘ಇದು ಸಣ್ಣ ಪ್ರಮಾಣದ ದೋಷ. ರೋಗಿಗಳಿಗೆ ಆಮ್ಲಜನಕ ಪೂರೈಕೆಗೆ ಏನೂ ತೊಂದರೆಯಾಗಿಲ್ಲ. ಘಟಕ ಅಳವಡಿಸಿರುವ ಕಂಪನಿಯ ತಾಂತ್ರಿಕ ಸಿಬ್ಬಂದಿ ಅದನ್ನು ದುರಸ್ತಿ ಮಾಡಿದ್ದಾರೆ’ ಎಂದು ಡಾ.ಶ್ರೀನಿವಾಸ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಇದಕ್ಕೂ ಮೊದಲು ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದ ಅವರು, ‘ಟ್ಯಾಂಕ್‌ನಲ್ಲಿ ಸೋರಿಕೆ ಇಲ್ಲ. ಆದರೆ, ಹೊರಗಿನ ಒತ್ತಡ ನಿಯಂತ್ರಣ ವ್ಯವಸ್ಥೆಯಲ್ಲಿ ದೋಷವಿದೆ. ಅದನ್ನು ತಾತ್ಕಾಲಿಕವಾಗಿ ಸರಿಪಡಿಸಲಾಗಿದೆ. ದೀರ್ಘಕಾಲದಲ್ಲಿ ಅದು ಸಮಸ್ಯೆಯಾಗಿ ಕಾಡಬಹುದು ಎಂಬ ಉದ್ದೇಶದಿಂದ ಹೊಸ ಟ್ಯಾಂಕ್‌ ಅಳವಡಿಸಲಾಗುತ್ತಿದೆ. ಈಗಾಗಲೇ ಟ್ಯಾಂಕ್‌ ತಲುಪಿದೆ. ಅದರ ಅಳವಡಿಕೆಗೆ ಚೆನ್ನೈಯಿಂದ ಅನುಮತಿ ಬೇಕಾಗಿದೆ. ಆ ಪ್ರಕ್ರಿಯೆ ನಡೆಯುತ್ತಿದ್ದು, ಇನ್ನು ಒಂದೆರಡು ದಿನಗಳಲ್ಲಿ ಅಳವಡಿಸಲಾಗುವುದು’ ಎಂದರು.

ಆಮ್ಲಜನಕ ಸಮಸ್ಯೆ ಇಲ್ಲ: ಆಸ್ಪತ್ರೆಗೆ ಈಗ ನಿಗದಿಯಂತೆ ಆಮ್ಲಜನಕ ಪೂರೈಕೆಯಾಗುತ್ತಿದೆ. ಘಟಕಕ್ಕೆ ಬಳ್ಳಾರಿಯಿಂದ ನಿಯಮಿತವಾಗಿ ಆಮ್ಲಜನಕ ಬರುತ್ತಿದೆ. ಸಿಲಿಂಡರ್‌ಗಳನ್ನೂ ತರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಕಡಿಮೆಯಾಗುತ್ತಿರುವುದರಿಂದ ಇನ್ನು ಸಮಸ್ಯೆ ಉಂಟಾಗದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.