ADVERTISEMENT

ಚಾಮರಾಜೇಶ್ವರ ದೇವಾಲಯ ತಲುಪಿದ ಬ್ರಹ್ಮರಥದ ಗಾಲಿಗಳು

ಚಾಮರಾಜೇಶ್ವರ ದೇವಾಲಯ: ಬದಾಮಿಯಿಂದ ಬಂದ ಆರು ಚಕ್ರಗಳು

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 16:01 IST
Last Updated 10 ಆಗಸ್ಟ್ 2021, 16:01 IST
ಬದಾಮಿಯಿಂದ ತರಲಾದ ರಥದ ಗಾಲಿಗಳಿಗೆ ಶಾಸಕ ಪುಟ್ಟರಂಗಶೆಟ್ಟಿ ಅವರ ಸಮ್ಮುಖದಲ್ಲಿ ಪೂಜೆ ಸಲ್ಲಿಸಲಾಯಿತು
ಬದಾಮಿಯಿಂದ ತರಲಾದ ರಥದ ಗಾಲಿಗಳಿಗೆ ಶಾಸಕ ಪುಟ್ಟರಂಗಶೆಟ್ಟಿ ಅವರ ಸಮ್ಮುಖದಲ್ಲಿ ಪೂಜೆ ಸಲ್ಲಿಸಲಾಯಿತು   

ಚಾಮರಾಜನಗರ: ನಗರದ ಇತಿಹಾಸ ಪ್ರಸಿದ್ಧ ಚಾಮರಾಜೇಶ್ವರ ದೇವಾಲಯಕ್ಕೆ ಹೊಸ ರಥಬರುವ ಕಾಲ ಸನ್ನಿಹಿತವಾಗಿದೆ. ರಥದ ಗಾಲಿಗಳನ್ನು ಮಂಗಳವಾರ ದೇವಸ್ಥಾನಕ್ಕೆ ತರಲಾಗಿದೆ.

ಬ್ರಹ್ಮರಥದ ನಿರ್ಮಾಣ ಕಾರ್ಯ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಬಹುತೇಕ ಕೆಲಸಗಳು ಮುಗಿದಿವೆ. ರಥದ ಆರು ಗಾಲಿಗಳನ್ನು ಬದಾಮಿಯಲ್ಲಿ ತಯಾರಿಸಲಾಗಿದ್ದು,ಲಾರಿಯಲ್ಲಿ ಬಂದ ಚಕ್ರಗಳಿಗೆ ಸ್ಥಳೀಯ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಪೂಜೆ ಸಲ್ಲಿಸಿದರು.

ಕ್ರೇನ್‌ ಮೂಲಕ ಗಾಲಿಗಳನ್ನು ದೇವಸ್ಥಾನದ ಆವರಣದಲ್ಲಿ ಇಳಿಸಲಾಯಿತು. 2017ರಲ್ಲಿ ಕಿಡಿಗೇಡಿಯೊಬ್ಬ ಬ್ರಹ್ಮರಥಕ್ಕೆ ಬೆಂಕಿಹಚ್ಚಿದ್ದರಿಂದ ಅದು ಸುಟ್ಟು ಹೋಗಿತ್ತು. ‘ಬೆಂಕಿ ಬಿದ್ದ ಕಾರಣದಿಂದ ಆ ರಥವನ್ನು ಬಳಸಲು ಸಾಧ್ಯವಿಲ್ಲ. ಹೊಸ ರಥವಾಗಬೇಕು’ ಎಂಬ ಒತ್ತಾಯ ಭಕ್ತರಿಂದ ಹಾಗೂ ವಿವಿಧ ಸಮಾಜದ ಮುಖಂಡರಿಂದ ಕೇಳಿ ಬಂದಿತ್ತು.

ADVERTISEMENT

ಹೊಸ ರಥ ನಿರ್ಮಾಣ ಆಗದೇ ಇರುವ ಕಾರಣದಿಂದ 2017ರಿಂದಪ್ರತಿ ವರ್ಷ ಆಷಾಢ ಮಾಸದಲ್ಲಿ ನಡೆಯುವ ರಥೋತ್ಸವ ನಡೆಯುತ್ತಿಲ್ಲ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ರಥ ನಿರ್ಮಾಣಕ್ಕಾಗಿ ₹1.20 ಕೋಟಿ ಮಂಜೂರು ಮಾಡಿತ್ತು. ತಾಂತ್ರಿಕ ಕಾರಣಗಳಿಂದಾಗಿ ನಿರ್ಮಾಣ ಕಾರ್ಯ ವಿಳಂಬವಾಗಿತ್ತು. ಕಳೆದ ವರ್ಷ ನಿರ್ಮಾಣ ಕೆಲಸ ಆರಂಭವಾಗಿತ್ತು.

ಮುಂದಿನ ವರ್ಷ ರಥೋತ್ಸವ:ಗಾಲಿಗಳಿಗೆ ಪೂಜೆ ಸಲ್ಲಿಸಿ ಮಾತನಾಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು, ‘ಜನರು ಹೊಸ ರಥನೇ ಬೇಕು ಎಂದು ಎಲ್ಲರೂ ಒತ್ತಾಯ ಮಾಡಿದಾಗ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೆ. ಸಿದ್ದರಾಮಯ್ಯ ಅವರು ಚಾಮರಾಜನಗರ ಹಾಗೂ ಬಿಳಿಗಿರಿರಂಗನಬೆಟ್ಟ ದೇವಾಲಯಗಳಿಗೆ ರಥ ನಿರ್ಮಾಣಕ್ಕೆ ತಲಾ ₹1.20 ಕೋಟಿ ಮಂಜೂರು ಮಾಡಿದ್ದರು. ₹1 ಕೋಟಿ ರಥ ಹಾಗೂ ₹20 ಲಕ್ಷ ರಥ ನಿಲುಗಡೆ ಮಾಡಲು ಶೆಡ್‌ ನಿರ್ಮಾಣಕ್ಕೆ ನಿಗದಿ ಪಡಿಸಲಾಗಿತ್ತು’ ಎಂದರು.

‘ಕಳೆದ ವರ್ಷವೇ ರಥ ತಯಾರಾಗಬೇಕಿತ್ತು. ಈ ವರ್ಷ ತೇರು ನಡೆಯಲೇ ಬೇಕು ಎಂಬ ಸಂಕಲ್ಪ ಮಾಡಲಾಗಿತ್ತು. ಆದರೆ, ಕೋವಿಡ್‌ ಕಾರಣದಿಂದ ಎಲ್ಲವೂ ವಿಳಂಬವಾಗಿದೆ. ರಥ ನಿರ್ಮಾಣ ಕಾರ್ಯ ಬಹುತೇಕ ಮುಗಿದಿದೆ. ಈಗ ಗಾಲಿಗಳು ಬಂದಿದ್ದು, ಕೋವಿಡ್‌ ಕಡಿಮೆಯಾದ ನಂತರ ರಥವನ್ನೂ ನಗರಕ್ಕೆ ಕರೆತಂದು ಮೆರವಣಿಗೆ ಮೂಲಕ ಸ್ವಾಗತಿಸಲಾಗುವುದು. ನಂತರ ಗಾಲಿಗಳನ್ನು ಅಳವಡಿಸಲಾಗುವುದು. ಮುಂದಿನ ಬಾರಿ ರಥೋತ್ಸವ ನಡೆಯಲಿದೆ’ ಎಂದು ಹೇಳಿದರು.

ಶೀಘ್ರ ಸಂಪ್ರೋಕ್ಷಣಾ ಕಾರ್ಯ

‘₹2 ಕೋಟಿ ವೆಚ್ಚದಲ್ಲಿ ದೇವಾಲಯದ ಜೀರ್ಣೋದ್ಧಾರ ಮಾಡಲಾಗಿದೆ. ಇನ್ನೀಗ ಸಂಪ್ರೋಕ್ಷಣಾ ಕಾರ್ಯ ನಡೆಯಬೇಕಿದೆ. ಇದಕ್ಕೆ ₹7 ಲಕ್ಷ ಅಗತ್ಯವಿದೆ. ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸರ್ಕಾರ ಕೊಡುತ್ತೋ ಬಿಡುತ್ತದೆಯೋ, ಊರಿನ ಎಲ್ಲ ಸಮಾಜದವರು, ಮುಖಂಡರೆಲ್ಲ ಸೇರಿ ಅದ್ಧೂರಿಯಾಗಿ ಆ ಕಾರ್ಯಕ್ರಮವನ್ನೂ ನಡೆಸಲಾಗುವುದು’ ಎಂದು ಸಿ.ಪುಟ್ಟರಂಗಶೆಟ್ಟಿ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.