ADVERTISEMENT

ಪ್ರಧಾನಿ ಮೋದಿ ಇಳಿದಿದ್ದ ಹೆಲಿಪ್ಯಾಡ್ ಈಗ ಕುಡುಕರ ಅಡ್ಡೆ

ಜಿಲ್ಲಾಡಳಿತ ಖಾಸಗಿ ಜಮೀನಿನಲ್ಲಿ ನಿರ್ಮಾಣ, ಯಥಾಸ್ಥಿತಿಗೆ ತರದೆ ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2023, 17:15 IST
Last Updated 7 ಸೆಪ್ಟೆಂಬರ್ 2023, 17:15 IST
ಗುಂಡ್ಲುಪೇಟೆ ತಾಲ್ಲೂಕಿನ ಮೇಲುಕಾಮನಹಳ್ಳಿ ಬಳಿ ಕೆ.ಎನ್.ಶಿವಣ್ಣ ಎಂಬುವವರ ಜಮೀನಿನಲ್ಲಿ ನಿರ್ಮಾಣ ಮಾಡಿರುವ ಹೆಲಿಪ್ಯಾಡ್.
ಗುಂಡ್ಲುಪೇಟೆ ತಾಲ್ಲೂಕಿನ ಮೇಲುಕಾಮನಹಳ್ಳಿ ಬಳಿ ಕೆ.ಎನ್.ಶಿವಣ್ಣ ಎಂಬುವವರ ಜಮೀನಿನಲ್ಲಿ ನಿರ್ಮಾಣ ಮಾಡಿರುವ ಹೆಲಿಪ್ಯಾಡ್.   

ಗುಂಡ್ಲುಪೇಟೆ: ಪ್ರಧಾನಿ ಮೋದಿ ಭೇಟಿ ಸಂದರ್ಭ ಜಿಲ್ಲಾಡಳಿತ ನಿರ್ಮಿಸಿದ್ದ ತಾತ್ಕಾಲಿಕ ಹೆಲಿಪ್ಯಾಡ್ ಈಗ ಕುಡುಕರ ಅಡ್ಡೆಯಾಗಿ ಮಾರ್ಪಾಡಾಗಿದ್ದು, ಜಮೀನನ್ನು ಸರಿಪಡಿಸದೆ ಸರ್ಕಾರ ನಿರ್ಲಕ್ಷ್ಯ ತೋರಿದೆ ಎಂದು ಜಮೀನಿನ ಮಾಲಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಂಡೀಪುರ ಸಫಾರಿ ಕೇಂದ್ರಕ್ಕೆ ಹೊಂದಿಕೊಂಡಂತ್ತಿರುವ ಹೆಲಿಪ್ಯಾಡ್ ಸುತ್ತಲೂ ಹತ್ತಾರು ಬಿಯರ್ ಬಾಟಲಿ ಮತ್ತು ಮದ್ಯದ ಪೌಚ್‌‌‌ಗಳು ಬಿದ್ದಿವೆ. ಕೆಲವರು ಪಾನಮತ್ತರಾದ ನಂತರ ಒಡೆದ ಬಾಟಲಿ ಚೂರುಗಳು ಜಮೀನಿನಲ್ಲಿ ಹರಡಿ ಹೋಗಿರುವುದು ರೈತನಿಗೆ ಸಮಸ್ಯೆಯಾಗಿ ಕಾಡುತ್ತಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಏ.9ರಂದು ಬಂಡೀಪುರ ಮತ್ತು ಮದುಮಲೈ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡುವ ಸಂದರ್ಭ ತಾಲ್ಲೂಕಿನ ಮೇಲುಕಾಮನಹಳ್ಳಿ ಬಳಿ ಖಾಸಗಿ ಜಮೀನಿನಲ್ಲಿ ನಿರ್ಮಿಸಿದ್ದ ಹೆಲಿಪ್ಯಾಡ್ 5 ತಿಂಗಳು ಕಳೆದರೂ ಜಿಲ್ಲಾಡಳಿತ ಯಥಾಸ್ಥಿತಿಗೆ ತಂದಿಲ್ಲ ಎಂದು ಜಮೀನು ಮಾಲೀಕ ಕೆ.ಎನ್.ಶಿವಣ್ಣ ಆಕ್ರೋಶ ಹೊರ ಹಾಕಿದರು.

ADVERTISEMENT

ಪ್ರಧಾನಿ ಹೆಲಿಕಾಪ್ಟರ್ ಇಳಿಯಲು ಹಾಗೂ ಎಸ್.ಪಿ.ಜಿ ಭದ್ರತಾ ಪಡೆಗೆ ಎಂದು ಎರಡು ಪ್ರತ್ಯೇಕ ಹೆಲಿಪ್ಯಾಡ್ ನಿರ್ಮಾಣಕ್ಕೆ ಕೆಬ್ಬೇಪುರ ಗ್ರಾಮದ ಕೆ.ಎನ್.ಶಿವಣ್ಣ ಎಂಬುವರು ಜಮೀನಿನಲ್ಲಿ ಸ್ಥಳ ನೀಡಿದ್ದರು. ನಂತರ ಕಾಂಕ್ರೀಟ್ ಬಳಸಿ ಮೂರು ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿತ್ತು. ‘ಇಲ್ಲಿಯವರೆಗೆ ಈ ಸ್ಥಳವನ್ನು ಸರಿಪಡಿಸದ ಹಿನ್ನಲೆ ಜಮೀನಿನಲ್ಲಿ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ’ ಎಂದು ಮಾಲೀಕ  ಅಸಮಾಧಾನ ಹೊರ ಹಾಕಿದರು.

ಜಿಲ್ಲಾಡಳಿತ ಮೋದಿ ಭೇಟಿ ನಂತರ 10ರಿಂದ 15 ದಿನಗಳ ಒಳಗೆ ಜಮೀನನ್ನು ಹಿಂದೆ ಇದ್ದ ಮಾದರಿಯಲ್ಲಿ ಸರಿಪಡಿಸಿ ವಾಪಸ್ ನೀಡುವುದಾಗಿ ಭರವಸೆ ನೀಡಿತ್ತು. ಇದೀಗ 5 ತಿಂಗಳು ಕಳೆದರು ಸಬೂಬು ಹೇಳುವ ಮೂಲಕ ಕಾಲಹರಣ ಮಾಡುತ್ತಿದ್ದಾರೆ ಎಂದು ಮಾಲೀಕರು ದೂರಿದರು.

ಹೆಲಿಪ್ಯಾಡ್ ನಿರ್ಮಾಣಕ್ಕೆ ಜಮೀನು ಪಡೆದುಕೊಂಡ ಜಿಲ್ಲಾಡಳಿತ ನಮಗೆ ಹಣ ನೀಡುವುದು ಬೇಡ. ಹಿಂದೆ ಇದ್ದ ರೀತಿಯಲ್ಲಿ ಜಮೀನನ್ನು ದುರಸ್ತಿ ಪಡಿಸಿಕೊಟ್ಟರೆ ಸಾಕು. ಇದರಿಂದ ಮುಂದಿನ ದಿನಗಳಲ್ಲಿ ಫಸಲು ಬೆಳೆಯಲು ಸಹಕಾರಿವಾಗುತ್ತದೆ.
- ಕೆ.ಎನ್.ಶಿವಣ್ಣ ಜಮೀನು ಮಾಲೀಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.