ADVERTISEMENT

ಕೊಳ್ಳೇಗಾಲ: ಜನರಲ್ಲಿ ಆತಂಕ ತಂದ ಕಳ್ಳತನ

₹490 ಗ್ರಾಂ ಆಭರಣ ಕಳ್ಳತನ, ಸಿಗದ ಆರೋಪಿಗಳ ಸುಳಿವು

ಅವಿನ್ ಪ್ರಕಾಶ್
Published 23 ಜನವರಿ 2023, 19:30 IST
Last Updated 23 ಜನವರಿ 2023, 19:30 IST
ಕಳ್ಳತನ ನಡೆದ ಮನೆಗೆ ಎಸ್‌ಪಿ ಟಿ.ಪಿ.ಶಿವಕುಮಾರ್‌, ಎಎಸ್‌ಪಿ ಉದೇಶ ಅವರು ಭೇಟಿ ನೀಡಿ ಪರಿಶೀಲಿಸಿದ ಸಂದರ್ಭ
ಕಳ್ಳತನ ನಡೆದ ಮನೆಗೆ ಎಸ್‌ಪಿ ಟಿ.ಪಿ.ಶಿವಕುಮಾರ್‌, ಎಎಸ್‌ಪಿ ಉದೇಶ ಅವರು ಭೇಟಿ ನೀಡಿ ಪರಿಶೀಲಿಸಿದ ಸಂದರ್ಭ   

ಕೊಳ್ಳೇಗಾಲ: ಗಡಿ ಜಿಲ್ಲೆಯ ವಾಣಿಜ್ಯ ನಗರವಾಗಿರುವ ಕೊಳ್ಳೇಗಾಲದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಜನರಲ್ಲಿ ಆತಂಕ ಮೂಡಿದೆ.

ನಗರದಲ್ಲಿ ನಾಲ್ಕು ದಿನಗಳ ಹಿಂದೆ ದತ್ತ ಮೆಡಿಕಲ್ ಮಾಲೀಕ‌ ವಿನಯ್ ಮನೆಯಲ್ಲಿ ನಡೆದ ₹490 ಗ್ರಾಂ ಚಿನ್ನಾಭರಣ ಹಾಗೂ ₹50 ಸಾವಿರ ನಗದು ಕಳ್ಳತನ ಪ್ರಕರಣದ ಆರೋಪಿಗಳ ಸುಳಿವು ಇನ್ನೂ ಪತ್ತೆಯಾಗಿಲ್ಲ.

'ಹಗಲು ಹೊತ್ತಿನಲ್ಲೇ ಅರ್ಧ ಕೆಜಿಯಷ್ಟು ಚಿನ್ನ ಕಳ್ಳತನವಾಗುತ್ತದೆ ಎಂದರೆ ಕಳ್ಳಕಾಕರಿಗೆ ಭಯವೇ ಇಲ್ಲದಂತಾಗಿದೆ ಎಂದರ್ಥವಲ್ಲವೇ’ ಎಂದು ಪ್ರಶ್ನಿಸುತ್ತಾರೆ ಸಾರ್ವಜನಿಕರು.

ADVERTISEMENT

ನಗರದಲ್ಲಿ ಕಳ್ಳತನ, ಸರಕಳ್ಳತನ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. ಅದೇ ದಿನವೇ, ನಡೆದುಕೊಂಡು ಹೋಗುತ್ತಿದ್ದ ನಾಗರತ್ನ ಎಂಬುವವರ ಸರಗಳ್ಳತನವಾಗಿದೆ. ಪೊಲೀಸರು ನಿರ್ಲಕ್ಷ್ಯವಹಿಸಿದ್ದಾರೆ ಎಂಬುದು ನಗರ ನಿವಾಸಿಗಳ ದೂರು.

ಪೂರ್ವ ಯೋಜಿತ ಕೃತ್ಯ: ಕಳ್ಳರು ಹೊಸ ಬಡಾವಣೆ, ಶ್ರೀಮಂತರು ವಾಸಿಸುತ್ತಿರುವ ಬಡಾವಣೆ, ನಿರ್ಜನ ಪ್ರದೇಶ ಹಾಗೂ ಕಾಲೇಜು ಆವರಣಗಳಲ್ಲಿ ವಾಯುವಿಹಾರಕ್ಕೆ ತೆರಳುವ ಮಹಿಳೆಯರನ್ನು ಗುರಿಯಾಗಿಸಿಕೊಂಡು, ಕೆಲವು ದಿನಗಳ ಕಾಲ ಅವರ ಚಲನವಲನಗಳನ್ನು ಗಮನಿಸಿ ನಂತರ ಪೂರ್ವ ಯೋಜನೆ ಮಾಡಿಕೊಂಡು ಕೃತ್ಯ ಎಸಗುತ್ತಿದ್ದಾರೆ.

ಮೊನ್ನೆ ನಡೆದ ಪ್ರಕರಣದಲ್ಲಿ ಸುತ್ತಮುತ್ತಲಿನವರಿಗೆ ಅನುಮಾನ ಬರಬಾರದು ಎಂಬ ಕಾರಣಕ್ಕೆ ಕಳ್ಳರು, ಮನೆ ಕೆಲಸದವರ ರೀತಿ ಗಿಡಗಳಿಗೆ ನೀರು ಹಾಕುತ್ತಿರುವಂತೆ, ಮನೆಯವರೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಿರುವಂತೆ ನಟನೆ ಮಾಡಿ ಕಪಾಟಿನಿಂದ ಚಿನ್ನಾಭರಣ, ನಗದು ದೋಚಿದ್ದಾರೆ.

‘ಶಿವಕುಮಾರ ಸ್ವಾಮಿ ಬಡಾವಣೆ, ಸಾಯಿಬಾಬ ಬಡಾವಣೆ, ಬಸವೇಶ್ವರ ನಗರ, ರಾಮಸ್ವಾಮಿ ಲೇ ಔಟ್‍ಗಳಲ್ಲಿ ಆಗಾಗ
ಕಳ್ಳತನ ನಡೆಯುತ್ತಿರುತ್ತದೆ. ಪೊಲೀಸರು ಕಳ್ಳರ ಮೇಲೆ ನಿಗಾ ಇಡಲು ಕ್ರಮ ಕೈಗೊಳ್ಳಬೇಕು’ ಎಂದು ಸಾಯಿಬಾಬ ಬಡಾವಣೆಯ ನಿವಾಸಿ ನಾಗರತ್ನ ‘ಪ್ರಜಾವಾಣಿ’ಗೆ ತಿಳಿಸಿದರು.

ಬ್ಯಾಂಕ್ ಲಾಕರ್ ಬಳಸಿ

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಉದೇಶ ಜಿ.ಟಿ ಅವರು, ‘ಮನೆಯಲ್ಲಿ ಅನವಶ್ಯಕವಾಗಿ ಹೆಚ್ಚು ಪ್ರಮಾಣದ ಚಿನ್ನಾಭರಣ ಇಟ್ಟುಕೊಳ್ಳುವುದನ್ನು ತಪ್ಪಿಸಬೇಕು. ಅಗತ್ಯಕ್ಕೆ ಬೇಕಾದಷ್ಟು ಇಟ್ಟುಕೊಂಡು ಉಳಿದವುಗಳನ್ನು ಬ್ಯಾಂಕ್‌ ಲಾಕರ್‌ಗಳಲ್ಲಿ ಇಡುವುದು ಹೆಚ್ಚು ಸುರಕ್ಷಿತ. ಮನೆಗೆ ಬೀಗ ಹಾಕಿ ಹೋಗುವುದಕ್ಕಿಂತ ಮನೆಯಲ್ಲಿ ಯಾರನ್ನಾದರೂ ಉಳಿಯುವುದಕ್ಕೆ ಹೇಳಬೇಕು’ ಎಂದರು.

‘ರಾತ್ರಿ ಹೊತ್ತು ಮನೆ ಎದುರು ದೀಪ ಉರಿಯುತ್ತಿರಲಿ. ಬೀಗ ಹಾಕಬೇಕಾದ ಅನಿವಾರ್ಯತೆ ಬಂದಲ್ಲಿ ಸಮೀಪದ ಠಾಣೆಗೆ ವಿಷಯ ತಿಳಿಸಿದರೆ, ಆ ಭಾಗದಲ್ಲಿ ಪೊಲೀಸ್‌ ಪಹರೆ ಹೆಚ್ಚಿಸಲಾಗುತ್ತದೆ. ನೆರೆಹೊರೆಯವರು, ಅಪರಿಚಿತರಿಗೆ ಪಕ್ಕದ ಮನೆಯವರ ಇರುವಿಕೆ ಬಗ್ಗೆ ಸುಳಿವು ನೀಡಬಾರದು’ ಎಂದು ಸಲಹೆ ನೀಡಿದರು.

------

ಪೊಲೀಸರು ಕಳ್ಳರ ಪತ್ತೆಗೆ ಮುಂದಾಗಬೇಕು. ಕಳ್ಳತನ ಪ್ರಕರಣಗಳಿಂದ ನಗರದಲ್ಲಿ ಮಹಿಳೆಯರು ಮತ್ತು ಮಕ್ಕಳು ಓಡಾಡಲು ಭಯಭೀತರಾಗಿದ್ದಾರೆ.
ಗುರುಶಾಂತ ಮೂರ್ತಿ ನಗರ ನಿವಾಸಿ

--

ಜನರು ಭಯಪಡಬೇಕಾಗಿಲ್ಲ.ಕಳ್ಳರ ಪತ್ತೆಗೆ ಬಲೆ ಬೀಸಲಾಗಿದೆ. ಶೀಘ್ರ ಬಂಧಿಸುತ್ತೇವೆ. ಸಾಧ್ಯವಾದರೆ ಪ್ರತಿ ಮನೆಯವರೂ ಸಿಸಿಟಿವಿ ಕ್ಯಾಮೆರಾ ಅಳವಡಿಸಿ
ಸೋಮೇಗೌಡ, ಡಿವೈಎಸ್‌ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.