ADVERTISEMENT

ಮೂರನೇ ಹಂತದ ಲಸಿಕೆ ವಿತರಣೆ: ಲಸಿಕೆ ಪಡೆದವರು ಆರು ಮಂದಿ ಮಾತ್ರ

ಮಧ್ಯಾಹ್ನದವರೆಗೆ ಪೋರ್ಟಲ್‌ನಲ್ಲಿ ದೋಷ: ಲಸಿಕೆ ಪಡೆಯಲು ಬಾರದ ವೃದ್ಧರು, ಅನಾರೋಗ್ಯ ಸಮಸ್ಯೆ ಉಳ್ಳವರು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 15:50 IST
Last Updated 1 ಮಾರ್ಚ್ 2021, 15:50 IST
ಜಿಲ್ಲಾಸ್ಪತ್ರೆಯಲ್ಲಿ ಹಿರಿಯ ನಾಗರಿಕರೊಬ್ಬರಿಗೆ ಲಸಿಕೆ ಹಾಕಲಾಯಿತು
ಜಿಲ್ಲಾಸ್ಪತ್ರೆಯಲ್ಲಿ ಹಿರಿಯ ನಾಗರಿಕರೊಬ್ಬರಿಗೆ ಲಸಿಕೆ ಹಾಕಲಾಯಿತು   

ಚಾಮರಾಜನಗರ: ಜಿಲ್ಲೆಯಲ್ಲಿ ಮೂರನೇ ಹಂತದ ಕೋವಿಡ್‌ ಲಸಿಕೆ ವಿತರಣೆ ಕಾರ್ಯಕ್ಕೆ ಸೋಮವಾರ ಚಾಲನೆ ಸಿಕ್ಕಿದ್ದು, ಮೊದಲ ದಿನ ಹಿರಿಯ ನಾಗರಿಕರು ಹಾಗೂ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಂದ ನಿರಾಶಾದಾಯಕ ಪ್ರತಿಕ್ರಿಯೆ ವ್ಯಕ್ತವಾಯಿತು. ಇಡೀ ಜಿಲ್ಲೆಯಲ್ಲಿ ಕೇವಲ ಆರುಮಂದಿ ಲಸಿಕೆ ಪಡೆದರು.

ಈ ಪೈಕಿ ಐವರು 60 ವರ್ಷಕ್ಕಿಂತ ಹೆಚ್ಚು ವಯಸ್ಸಿನವರಾಗಿದ್ದರೆ, ಒಬ್ಬರು ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ 45 ವರ್ಷದಿಂದ 59 ವರ್ಷದ ಒಳಗಿನವರು. ಆರೋಗ್ಯ ಇಲಾಖೆ ಈ ಅಭಿಯಾನಕ್ಕಾಗಿ ಕೋವಿಶೀಲ್ಡ್‌ ಲಸಿಕೆಯನ್ನು ಪೂರೈಸಿದೆ.

ಚಾಮರಾಜನಗರದ ಜಿಲ್ಲಾಸ್ಪತ್ರೆ, ಕೊಳ್ಳೇಗಾಲ, ಗುಂಡ್ಲುಪೇಟೆ, ಯಳಂದೂರು ತಾಲ್ಲೂಕು ಆಸ್ಪತ್ರೆಗಳು ಹಾಗೂ ಚಾಮರಾಜನಗರದ ಜೆಎಸ್‌ಎಸ್ ಆಸ್ಪತ್ರೆ, ಕಾಮಗೆರೆಯಲ್ಲಿರುವ ಹೋಲಿಕ್ರಾಸ್ ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗೆ ಲಸಿಕೆ ನೀಡಲು ಸಿದ್ಧತೆ ಮಾಡಲಾಗಿತ್ತು. ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಉಚಿತವಾಗಿದ್ದರೆ, ಖಾಸಗಿ ಆಸ್ಪತ್ರೆಗಳಲ್ಲಿ ₹250 ಶುಲ್ಕ ನೀಡಬೇಕು. ಸೋಮವಾರ ಖಾಸಗಿ ಆಸ್ಪತ್ರೆಗಳಲ್ಲಿ ಯಾರೂ ಲಸಿಕೆ ಹಾಕಿಸಿಕೊಂಡಿಲ್ಲ. ಕೊಳ್ಳೇಗಾಲ ತಾಲ್ಲೂಕು ಆಸ್ಪತ್ರೆಯಲ್ಲಿ ಯಾರಿಗೂ ಲಸಿಕೆ ಹಾಕಿಲ್ಲ.

ADVERTISEMENT

ಪೋರ್ಟಲ್‌ ಸಮಸ್ಯೆ: ಬೆಳಿಗ್ಗೆಯೇ ಅಭಿಯಾನಕ್ಕೆ ಚಾಲನೆ ಸಿಗಬೇಕಿತ್ತು. ಆದರೆ, ಮಧ್ಯಾಹ್ನದವರೆಗೂ ಕೋವಿನ್‌ ಪೋರ್ಟಲ್‌ನಲ್ಲಿ ತಾಂತ್ರಿಕ ದೋಷ ಇದ್ದುದರಿಂದ ನೋಂದಣಿ ಸಾಧ್ಯವಾಗಲಿಲ್ಲ. 12.30ರ ಬಳಿಕ ಪೋರ್ಟಲ್‌ ಸರಿಯಾಯಿತು. ಆದರೆ, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರಲಿಲ್ಲ. ಕೆಲವು ಕೇಂದ್ರಗಳಿಗೆ ಒಬ್ಬರು ಇಬ್ಬರು ಬಂದಿದ್ದರು. ಆದರೆ, ಒಂದು ಶೀಶೆಯನ್ನು ತೆರೆಯಬೇಕಾದರೆ ಕನಿಷ್ಠ 10 ಜನರು ಇರಬೇಕು. ಹೀಗಾಗಿ ಕೆಲವು ಕೇಂದ್ರಗಳಲ್ಲಿ ಬಂದವರನ್ನು ಸಿಬ್ಬಂದಿ ವಾಪಸ್‌ ಕಳುಹಿಸಿದರು.

ಮೊದಲ ಹಂತದಲ್ಲಿ ಹಾಗೂ ಎರಡನೇ ಹಂತದಲ್ಲಿ ಲಸಿಕೆ ಪಡೆಯಬೇಕಾದ ಕೊರೊನಾ ಸೇನಾನಿಗಳಿಗೂ ಸೋಮವಾರ ಲಸಿಕೆ ನೀಡಲಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ 47 ಮಂದಿ ಲಸಿಕೆ ಪಡೆದಿದ್ದಾರೆ.

‘ಮಧ್ಯಾಹ್ನದವರೆಗೆ ಪೋರ್ಟಲ್‌ನಲ್ಲಿ ಸಮಸ್ಯೆಯಾಗಿತ್ತು. ಆ ಬಳಿಕ ಸರಿಯಾಯಿತು. ಆದರೆ, ಲಸಿಕೆ ಪಡೆಯಲು ಬಂದವರ ಸಂಖ್ಯೆ ಮೊದಲ ದಿನ ಕಡಿಮೆ ಇತ್ತು. ಜನರಲ್ಲಿ ಹಿಂಜರಿಕೆ ಇದ್ದಂತೆ ಕಾಣುತ್ತಿದೆ. ಈಗಾಗಲೇ ನಾವು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ಮುಂದೆಯೂ ಜನರು ಲಸಿಕೆ ಪಡೆಯುವಂತೆ ಮಾಡಲು ಅವರಿಗೆ ತಿಳಿವಳಿಕೆ ನೀಡಲಿದ್ದೇವೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಚಾಲನೆ: ಜಿಲ್ಲಾಸ್ಪತ್ರೆಯಲ್ಲಿ ಹಿರಿಯ ವ್ಯಕ್ತಿಯೊಬ್ಬರಿಗೆ ಲಸಿಕೆ ಹಾಕುವ ಮೂಲಕ ಮೂರನೇ ಹಂತದ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ನಗರದ ನಿವಾಸಿ, 79 ವರ್ಷದ ಮಹದೇವಪ್ಪ ಎಂಬುವವರು ಮೊದಲ ಲಸಿಕೆ ಪಡೆದರು.

ನಂತರ ಮಾತನಾಡಿದಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಂ.ಸಿ.ರವಿ ಅವರು ಮಾತನಾಡಿ, ‘60 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಹಿರಿಯ ನಾಗರಿಕರು ಹಾಗೂ 45 ವರ್ಷದಿಂದ 59 ವರ್ಷದೊಳಗಿನ, ಅಧಿಕ ರಕ್ತದೊತ್ತಡ, ಡಯಾಲಿಸಿಸ್, ಹೃದಯ ಸಂಬಂಧಿ ಕಾಯಿಲೆ ಇರುವವರು ಈ ಲಸಿಕೆ ಪಡೆಯುವುದು ಒಳ್ಳೆಯದು. ಲಸಿಕೆಯು ಸೋಂಕಿನ ತೀವ್ರತೆ ಕಡಿಮೆ ಮಾಡುತ್ತದೆ. ಜೊತೆಗೆ ಸೋಂಕು ಬಾರದಂತೆ ತಡೆಯುತ್ತದೆ’ ಎಂದರು.

‘ಮೊದಲ ಡೋಸ್ ಪಡೆದ ತಕ್ಷಣವೇ ರೋಗ ನಿರೋಧಕ ಶಕ್ತಿ ಬರುವುದಿಲ್ಲ. ಅದಕ್ಕೆ 2ನೇ ಡೋಸ್ ಪಡೆಯಬೇಕು. ಆ ಬಳಿಕ 15 ದಿನಗಳು ಕಳೆದು ರೋಗ ನಿರೋಧಕ ಶಕ್ತಿ ಬರುತ್ತದೆ. ಮೊದಲನೇ ಡೋಸ್ ಪಡೆದ 25 ದಿನಗಳ ನಂತರ 2ನೇ ಡೋಸ್ ಕೊಡಲಾಗುತ್ತದೆ. ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು’ ಎಂದು ತಿಳಿಸಿದರು.

‘60 ವರ್ಷ ಮೇಲ್ಪಟ್ಟವರು ವಯಸ್ಸಿನ ದೃಢೀಕರಣ ದಾಖಲೆ ತಂದು ಲಸಿಕೆ ಪಡೆಯಬಹುದು. ಎನ್‌ಜಿಒ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಗುಂಪು ಗುಂಪಾಗಿ ಕರೆ ತಂದು ಲಸಿಕೆ ಪಡೆಯಲು ಅನುಕೂಲ ಕಲ್ಪಿಸಲಾಗುವುದು. ಲಸಿಕೆ ಪಡೆದಿರುವವರಿಗೆ ಇಲ್ಲಿಯ ತನಕ ಯಾವುದೇ ಅಡ್ಡ ಪರಿಣಾಮ ಆಗಿಲ್ಲ’ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆ ಸರ್ಜನ್ ಡಾ.ಶ್ರೀನಿವಾಸ್, ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ರಮೇಶ್, ಲಸಿಕಾಧಿಕಾರಿ ಡಾ.ವಿಶ್ವೇಶ್ವರಯ್ಯ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.