ADVERTISEMENT

ಅತ್ತೆ, ವಾರಗಿತ್ತಿ, ಮೈದುನನಿಗೆ ಜೀವಾವಧಿ ಶಿಕ್ಷೆ

ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಗೃಹಿಣಿಯ ಹತ್ಯೆ ಪ್ರಕರಣ: ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಆದೇಶ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2019, 10:19 IST
Last Updated 17 ಡಿಸೆಂಬರ್ 2019, 10:19 IST
ಕೋರ್ಟ್‌
ಕೋರ್ಟ್‌   

ಚಾಮರಾಜನಗರ: ಮದುವೆಯಾಗಿ ಏಳು ವರ್ಷ ಆಗಿದ್ದರೂ ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಮಂಜುಳ ಎಂಬ ಗೃಹಿಣಿಯ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಅತ್ತೆ, ಮೈದುನ ಮತ್ತು ವಾರಗಿತ್ತಿಗೆ(ಗಂಡನ ಅಣ್ಣನ ಹೆಂಡತಿ) ಜೀವಾವಧಿ ಶಿಕ್ಷೆ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಸೋಮವಾರ ಆದೇಶ ಹೊರಡಿಸಿದೆ.

ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಮಾವ ಹಾಗೂ ಭಾವ (ಗಂಡನ ಅಣ್ಣ) ಅವರನ್ನು ಖುಲಾಸೆಗೊಳಿಸಿದೆ.

ಚಾಮರಾಜನಗರ ತಾಲ್ಲೂಕಿನ ಬೆಂಡರವಾಡಿ ಗ್ರಾಮದ ಬೆಳ್ಳಮ್ಮ (ಅತ್ತೆ) ದೊಡ್ಡಮ್ಮ (ವಾರಗಿತ್ತಿ) ಮತ್ತು ರಮೇಶ (ಮೈದುನ) ಶಿಕ್ಷೆಗೆ ಗುರಿಯಾದವರು. ಮಾವ ಚಿಕ್ಕಮಾದಶೆಟ್ಟಿ ಮತ್ತು ಭಾವ ರಂಗಸ್ವಾಮಿ ದೋಷಮುಕ್ತ ಗೊಂಡಿರುವವರು.ದೊಡ್ಡಮ್ಮ ಅವರು ರಂಗಸ್ವಾಮಿ ಅವರ ಪತ್ನಿ.

ADVERTISEMENT

ಚಾಮರಾಜನಗರದ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 302 (ಕೊಲೆ) ಮತ್ತು 498ರ (ಗಾಯಗೊಳಿಸುವುದು/ಪ್ರಾಣಾಪಾಯ ಉಂಟುಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಬೆಳ್ಳಮ್ಮ ಒಂದನೇ, ರಮೇಶ್‌ ಎರಡನೇ, ರಂಗಸ್ವಾಮಿ ಮೂರನೇ, ಚಿಕ್ಕ ಮಾದಶೆಟ್ಟಿ ನಾಲ್ಕನೇ ಮತ್ತು ದೊಡ್ಡಮ್ಮ ಅವರನ್ನು ಐದನೇ ಆರೋಪಿಗಳನ್ನಾಗಿ ಗುರುತಿಸಲಾಗಿತ್ತು.

ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮಂಜುಳ ಅವರು ಮೈಸೂರಿನ ತಹಶೀಲ್ದಾರ್‌ ಹಾಗೂ ಪೊಲೀಸರ ಮುಂದೆ ಮರಣಪೂರ್ವ ಹೇಳಿಕೆ ನೀಡಿದ್ದರು. ನಡೆದಿದ್ದ ಘಟನೆಯನ್ನು ವಿವರಿಸಿದ್ದರು.ಪೊಲೀಸರು ನಡೆಸಿರುವ ತನಿಖೆಯಲ್ಲಿ ಆರೋಪಗಳು ಸಾಬೀತಾಗಿದ್ದವು. ವಿಚಾರಣೆಯ ಸಂದರ್ಭದಲ್ಲಿ 27 ಮಂದಿ ಸಾಕ್ಷಿ ನುಡಿದಿದ್ದರು.

ಸಂತ್ರಸ್ತೆಯ ಮರಣಪೂರ್ವ ಹೇಳಿಕೆಗಳು ಹಾಗೂ ಮಾಡಿರುವ ಆರೋಪಗಳು ಸಾಬೀತಾಗಿರುವುದರಿಂದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಡಿ.ವಿನಯ್‌ ಅವರು ಮೂವರು ಆರೋಪಿಗಳನ್ನು ಅಪರಾಧಿಗಳು ಎಂದು ಘೋಷಿಸಿ, ಜೀವಾವಧಿ ಶಿಕ್ಷೆ‌ವಿಧಿಸಿದ್ದಾರೆ.ಶಿಕ್ಷೆಯ ಜೊತೆಗೆ ಮೂವರಿಗೂ ತಲಾ ₹ 15 ಸಾವಿರ ದಂಡವನ್ನೂ ವಿಧಿಸಿದ್ದಾರೆ.

ಪ್ರಾಸಿಕ್ಯೂಷನ್‌ ಪರವಾಗಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಉಷಾ ಅವರು ವಾದ ಮಂಡಿಸಿದ್ದರು. ಗ್ರಾಮಾಂತರ ವಿಭಾಗದ ಸರ್ಕಲ್‌ ಇನ್‌ಸ್ಪೆಕ್ಟರ್‌ ಆಗಿದ್ದ ಎಚ್‌.ಎಂ.ಮಹದೇವಪ್ಪ ಅವರು ತನಿಖಾಧಿಕಾರಿಯಾಗಿದ್ದರು.

2013ರಲ್ಲಿ ನಡೆದಿದ್ದ ಪ್ರಕರಣ

ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನ ಕನ್ನಹಳ್ಳಿ ಗ್ರಾಮದ ಸಿದ್ದರಾಜು ಎಂಬುವವರ ಪುತ್ರಿ ಮಂಜುಳ ಅವರನ್ನು 2006ರಲ್ಲಿ ಚಾಮರಾಜನಗರ ತಾಲ್ಲೂಕಿನ ಬೆಂಡರವಾಡಿ ಗ್ರಾಮದ ಚಿಕ್ಕಮಾದಶೆಟ್ಟಿ ಅವರ ಮಗ ಮಹೇಶ ಎಂಬುವವರಿಗೆ ಮದುವೆ ಮಾಡಿಕೊಡಲಾಗಿತ್ತು. ಮಹೇಶ ಅವರು ತಮ್ಮ ತಂದೆ, ತಾಯಿ, ಅಣ್ಣ, ಅತ್ತಿಗೆ ಮತ್ತು ತಮ್ಮನೊಂದಿಗೆ ವಾಸವಿದ್ದರು.

ಮದುವೆಯಾಗಿ ಏಳು ವರ್ಷವಾಗಿದ್ದರೂ ಮಹೇಶ, ಮಂಜುಳ ದಂಪತಿಗೆ ಮಕ್ಕಳಾಗಿರಲಿಲ್ಲ. ರಂಗಸ್ವಾಮಿ–ದೊಡ್ಡಮ್ಮ ದಂಪತಿಗೆ ಮದುವೆಯಾದ ಎರಡು ವರ್ಷಕ್ಕೆ ಮಗುವಾಗಿತ್ತು.

ಮಕ್ಕಳಾಗದೆ ಇದ್ದುದರಿಂದ ಮಹೇಶ ಅವರನ್ನು ಬಿಟ್ಟು ಉಳಿದವರೆಲ್ಲರೂ ಮಂಜುಳಗೆ ಕಿರುಕುಳ ನೀಡುತ್ತಿದ್ದರು. ಏಳು ವರ್ಷಗಳಾದರೂ ಮಕ್ಕಳಾಗಿಲ್ಲ, ಬಂಜೆ ಎಂದು ಪ್ರತಿ ದಿನ 22 ವರ್ಷದ ಮಂಜುಳಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರು. ಮಹೇಶನಿಗೆ ಬೇರೆ ಮದುವೆ ಮಾಡುವುದಾಗಿಯೂ ಹೇಳುತ್ತಿದ್ದರು.

2013ರ ನವೆಂಬರ್‌ 21ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಂಜುಳ ಮನೆಯಲ್ಲಿದ್ದಾಗ ಇದೇ ವಿಚಾರವಾಗಿ ಕುಟುಂಬದ ಸದಸ್ಯರು ಜಗಳ ತೆಗೆದಿದ್ದರು. ಬದುಕುವುದಕ್ಕಿಂತ ಸತ್ತರೆ ಮಹೇಶನಿಗೆ ಇನ್ನೊಂದು ಮದುವೆ ಮಾಡುವುದಾಗಿ ಹೇಳುತ್ತಾ, ಮಂಜುಳ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು. ವಿಷಯ ಗೊತ್ತಾಗುತ್ತಿದ್ದಂತೆಯೇ ಸ್ಥಳೀಯರು ಬಂದಾಗ ಎಲ್ಲರೂ ಅಲ್ಲಿಂದ ಓಡಿ ಹೋಗಿದ್ದರು.

ತೀವ್ರ ಸುಟ್ಟ ಗಾಯಗಳಿಂದ ನರಳುತ್ತಿದ್ದ ಮಂಜುಳ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್‌.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಮಂಜುಳ ಅವರು 2013ರ ಡಿಸೆಂಬರ್‌ 16ರಂದು ಕೊನೆಯುಸಿರೆಳೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.