ಗುಂಡ್ಲುಪೇಟೆ: ತಾಲ್ಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಕೆಲವು ದಿನಗಳಿಂದ ಆತಂಕ ಸೃಷ್ಟಿಸಿರುವ ಹುಲಿಯ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಹುಂಡೀಪುರ, ಶಿವಪುರ, ಚೌಡಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಶುಕ್ರವಾರ ಶೋಧ ಕಾರ್ಯಾಚರಣೆ ನಡೆಸಿದರು. ಆದರೆ, ಹುಲಿ ಪತ್ತೆಯಾಗಲಿಲ್ಲ.
ಹುಲಿ ಕಾಣಿಸಿಕೊಂಡಿರುವ ಬಗ್ಗೆ ಗ್ರಾಮಸ್ಥರು ನೀಡಿದ ಮಾಹಿತಿಗಳನ್ನು ಆಧರಿಸಿ ಆನೆಗಳ ಸಹಾಯದಿಂದ ಕಾರ್ಯಾಚರಣೆ ನಡೆಸಿ, ವ್ಯಾಘ್ರನ ಹೆಜ್ಜೆಗುರುತಿಗಾಗಿ ಹುಡುಕಾಡಿದರು.
ಬುಧವಾರ ಸಂಜೆಯಿಂದ ಗುರುವಾರ ಸಂಜೆಯವರೆಗೂ ಸಿಬ್ಬಂದಿ ತಂಡಗಳಗಾಗಿ ಹುಲಿ ಬರುವಿಕೆಗಾಗಿ ಕಾದು ಕುಳಿತಿದ್ದರು. ಹುಲಿಯನ್ನು ಸೆರೆ ಹಿಡಿಯಲು ಚಿಂತನೆ ನಡೆಸಿದ್ದರು.
ಶುಕ್ರವಾರ ಬೆಳಿಗ್ಗೆಯಿಂದ ಶೋಧ ಕಾರ್ಯಾಚರಣೆ ನಡೆಸಿದರೂ ಹುಲಿ ಪತ್ತೆಯಾಗಿಲ್ಲ. ಸಿಬ್ಬಂದಿ ಮೂರು ತಂಡಗಳಾಗಿ ವಿವಿಧ ಭಾಗಗಳಲ್ಲಿ ಹುಡುಕಾಟ ನಡೆಸಿದರು.
ರಾತ್ರಿ ಹೊತ್ತಿನಲ್ಲಿ ಹುಲಿ ಕಂಡು ಬರುವ ಸಾಧ್ಯತೆ ಇದೆ. ಗ್ರಾಮಸ್ಥರು ಕೂಡ ಇದೇ ಮಾತು ಹೇಳುತ್ತಿದ್ದಾರೆ. ಹಾಗಾಗಿ, ರಾತ್ರಿ ಇಲ್ಲೇ ಇದ್ದು ಕಾರ್ಯಾಚರಣೆ ನಡೆಸಲು ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ನವೀನ್ ಕುಮಾರ್ ತಿಳಿಸಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿಕುಮಾರ್, ವಲಯಾರಣ್ಯಾಧಿಕಾರಿ ನವೀನ್ ಕುಮಾರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದರು.
ಅವೈಜ್ಞಾನಿಕ ಕಾರ್ಯಚರಣೆ: ಈ ಮಧ್ಯೆ, ಅರಣ್ಯ ಇಲಾಖೆಯವರು ಅವೈಜ್ಞಾನಿಕವಾಗಿ ಕಾರ್ಯಾಚರಣೆ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
‘ಹುಲಿ ಕಾರ್ಯಾಚರಣೆ ಮಾಡಬೇಕಾದರೆಒಬ್ಬರು ಶಾರ್ಪ್ ಶೂಟರ್ ಇರಬೇಕು. ವೈದ್ಯರು ಇರಬೇಕು. ಇಲ್ಲಿ ಯಾರೂ ಇಲ್ಲ. ಕೇವಲ ಸಿಬ್ಬಂದಿ ಆನೆಗಳೊಂದಿಗೆ ಬಂದು ಒಂದು ಸುತ್ತು ಹಾಕಿ ಆನೆಯನ್ನು ಮೇಯಲು ಬಿಟ್ಟು ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಾರೆ. ಕೇವಲ ಜನರನ್ನು ಮರುಳು ಮಾಡಲು ಈ ಕೆಲಸ ಮಾಡುತ್ತಿದ್ದಾರೆ’ ಎಂದು ಹುಂಡೀಪುರ ಗ್ರಾಮದ ಮಂಜುನಾಥ್ ಆರೋಪಿಸಿದರು.
‘ದಸರಾದಂತೆ ಆನೆಗಳನ್ನು ಮೆರವಣಿಗೆ ಮಾಡುತ್ತಾರೆ. ಹುಲಿ ಹುಡುಕಾಟಕ್ಕೆ ಕಾರ್ಯಾಚರಣೆ ನಡೆಸುತ್ತಿಲ್ಲ. ವೈಜ್ಞಾನಿಕವಾಗಿ ಕಾರ್ಯಾಚರಣೆ ಮಾಡುವುದಾದರೆ ಮಾಡಲಿ. ಇಲ್ಲವಾದರೆ ತೆರಳಲಿ’ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.