ADVERTISEMENT

ಎಡೆಯಾರಳ್ಳಿ ಕಾರಿಡಾರ್‌ ದಾಟಿದ ಹುಲಿ; ವಿಡಿಯೊದಲ್ಲಿ ಸೆರೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2022, 8:35 IST
Last Updated 1 ನವೆಂಬರ್ 2022, 8:35 IST
ಎಡೆಯಾರಳ್ಳಿ ಕಾರಿಡಾರ್‌ನಲ್ಲಿ ರಸ್ತೆ ದಾಟಿದ ಹುಲಿ (ವಿಡಿಯೊ ಚಿತ್ರ)
ಎಡೆಯಾರಳ್ಳಿ ಕಾರಿಡಾರ್‌ನಲ್ಲಿ ರಸ್ತೆ ದಾಟಿದ ಹುಲಿ (ವಿಡಿಯೊ ಚಿತ್ರ)   

ಹನೂರು: ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಮಲೆ ಮಹದೇಶ್ವರ ವನ್ಯಧಾಮದ ನಡುವೆ ಸಂಪರ್ಕ ಕಲ್ಪಿಸುವ ತಾಲ್ಲೂಕಿನ ಎಡೆಯಾರಳ್ಳಿ ಕಾರಿಡಾರ್‌ನಲ್ಲಿ ಹುಲಿಯೊಂದು ರಸ್ತೆ ದಾಟುತ್ತಿರುವ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

1.6 ಕಿ.ಮೀ ಉದ್ದದ ಎಡೆಯಾರಳ್ಳಿ ಕಾರಿಡಾರ್ ಎರಡೂ ಅರಣ್ಯಗಳ ನಡುವೆ ಪ್ರಾಣಿಗಳ ಓಡಾಟಕ್ಕೆ ಇರುವ ಏಕೈಕ ಕೊಂಡಿ. ಎರಡೂ ಅರಣ್ಯಗಳ ನಡುವೆ ಸಂಚರಿಸಲು ವನ್ಯಪ್ರಾಣಿಗಳು ಇದೇ ಕಾರಿಡಾರ್‌ ಬಳಸುತ್ತವೆ.  

ಹುಲಿಗಳು ಇಲ್ಲಿ ರಸ್ತೆ ದಾಟುತ್ತಿವೆಯಾದರೂ, ವಿಡಿಯೊದಲ್ಲಿ ಇದುವರೆಗೆ ಸೆರೆಯಾಗಿರಲಿಲ್ಲ. ಭಾನುವಾರ ಈ ರಸ್ತೆಯಲ್ಲಿ ವಾಹನದಲ್ಲಿ ಹೋಗುತ್ತಿದ್ದವರಿಗೆ ವ್ಯಾಘ್ರವೊಂದು ಬಿಆರ್‌ಟಿ ಅರಣ್ಯದಿಂದ ಮಲೆಮಹದೇಶ್ವರ ವನ್ಯಧಾಮಕ್ಕೆ ಹೋಗುತ್ತಿರುವುದು ಕಂಡು ಬಂದಿದೆ. ಅದನ್ನು ಅವರು ವಿಡಿಯೊ ಮಾಡಿದ್ದಾರೆ. 

ADVERTISEMENT

ಈ ಬಗ್ಗೆ ಪ್ರತಿಕ್ರಿಯಿಸಿದ ಮಲೆಮಹದೇಶ್ವರ  ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ  ಡಾ.ಜಿ.ಸಂತೋಷ್ ಕುಮಾರ್, ‘ಕಾರಿಡಾರ್‌ನಲ್ಲಿ ವನ್ಯಪ್ರಾಣಿಗಳು ಓಡಾಡುವುದು ಸಹಜ. ಇದುವರೆಗೂ ಸಾಕಷ್ಟು ವನ್ಯಪ್ರಾಣಿಗಳು ರಸ್ತೆ ದಾಟಿವೆ. ಸಾರ್ವಜನಿಕರ ಕಣ್ಣಿಗೆ ಕಾಣಿಸಿಕೊಂಡಿರಲಿಲ್ಲ. ಹುಲಿ ರಸ್ತೆ ದಾಟುತ್ತಿರುವುದು ಕಂಡು ಬಂದಿದೆ ಎಂದು ಜನರು ಭಯಬೀತರಾಗುವ ಅವಶ್ಯಕತೆಯಿಲ್ಲ. ಪ್ರತಿಯೊಂದು ಹುಲಿಯೂ ತನ್ನದೇ ಆವಾಸ ಸ್ಥಾನ ಹುಡುಕಿಕೊಂಡಿರುತ್ತವೆ. ಮತ್ತೊಂದು ಹುಲಿ ಅಲ್ಲಿಗೆ ಬಂದಾಗ ಹೀಗೆ ಬೇರೊಂದು ಆವಾಸಸ್ಥಾನ ಹುಡುಕಿಕೊಂಡು ಬರುತ್ತವೆ. ಇದರಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆಯಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.