ADVERTISEMENT

ಕಳಚುತ್ತಿರುವ ಸಾಮರಸ್ಯದ ಕೊಂಡಿ; ವನ್ಯಜೀವಿ ಪ್ರಾಣಕ್ಕೆ ಕುತ್ತು

ಅರಣ್ಯ ಇಲಾಖೆ ಹಾಗೂ ಕಾಡಂಚಿನ ನಿವಾಸಿಗಳ ನಡುವೆ ನಿರ್ಮಾಣವಾದ ಕಂದಕ

​ಪ್ರಜಾವಾಣಿ ವಾರ್ತೆ
ಬಿ.ಬಸವರಾಜು
Published 8 ಅಕ್ಟೋಬರ್ 2025, 5:49 IST
Last Updated 8 ಅಕ್ಟೋಬರ್ 2025, 5:49 IST
ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಧಾಮದ ನೋಟ
ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಧಾಮದ ನೋಟ   

ಹನೂರು: ಮಲೆಮಹದೇಶ್ವರ ವನ್ಯಜೀವಿಧಾಮದಲ್ಲಿ ಹುಲಿಗಳ ಸರಣಿ ಹತ್ಯೆ ನಡೆಯುತ್ತಿರುವುದು ಕಾನನದೊಳಗೆ ವನ್ಯಜೀವಿಗಳಿಗೆ ಸೂಕ್ತ ರಕ್ಷಣೆ ಇಲ್ಲ ಎಂಬ ಆತಂಕ ವ್ಯಕ್ತವಾಗಿದೆ. ಅರಣ್ಯ ಇಲಾಖೆ ಹಾಗೂ ಕಾಡಂಚಿನ ಜನರ ನಡುವೆ ನಿರ್ಮಾಣವಾಗಿರುವ ಕಂದಕ ಪ್ರಾಣಿಗಳ ಜೀವಕ್ಕೆ ಕುತ್ತಾಗುತ್ತಿದೆ, ಅರಣ್ಯ ಸಂಪತ್ತು ಹಾಗೂ ವನ್ಯಜೀವಿಗಳ ರಕ್ಷಣೆಯೂ ಸವಾಲಾಗಿ ಪರಿಣಮಿಸು‌ತ್ತಿದೆ ಎನ್ನುತ್ತಾರೆ ಪ್ರಾಣಿಪ್ರಿಯರು.

906 ಚ.ಕಿ.ಮೀ ಮೀಸಲು ಅರಣ್ಯ ಪ್ರದೇಶವನ್ನು ಹೊಂದಿರುವ ಮಲೆ ಮಹದೇಶ್ವರ ಕಾನನವನ್ನು 2013ರಲ್ಲಿ ಕೇಂದ್ರ ಸರ್ಕಾರ ವನ್ಯಧಾಮವಾಗಿ ಘೋಷಣೆ ಮಾಡಿದ್ದು ಅಸಂಖ್ಯಾತ ಸಸ್ಯಹಾರಿ, ಮಾಂಸಹಾರಿ ಪ್ರಾಣಿಗಳು ಹಾಗೂ ಜೀವ ವೈವಿಧ್ಯಗಳಿಗೆ ಆಶ್ರಯತಾಣವಾಗಿದೆ.

ವನ್ಯಧಾಮ ಘೋಷಣೆಯಾದ ಬಳಿಕ ಮಲೆ ಮಹದೇಶ್ವರ ಅರಣ್ಯದಲ್ಲಿ ಹುಲಿಗಳ ಸಂತತಿ ಗಣನೀಯವಾಗಿ ಏರಿಕೆಯಾಗುತ್ತಿದೆ. 2018ರಲ್ಲಿ ನಡೆದ ಹುಲಿ ಗಣತಿಯ ಸಂದರ್ಭ ಅಲ್ಲಲ್ಲಿ ತಾಯಿ ಹುಲಿ ಹಾಗೂ ಮರಿಗಳು ಕಾಣಿಸಿಕೊಂಡು ಹುಲಿಗಳ ಸಂತತಿ ಹೆಚ್ಚಾಗುತ್ತಿರುವ ಸ್ಪಷ್ಟವಾದ ಮುನ್ಸೂಚನೆ ದೊರೆತಿದೆ. ಕಳೆದ ಏಳು ವರ್ಷಗಳಿಂದ ಹುಲಿ ಗಣತಿ ನಡೆದಿಲ್ಲವಾದರೂ ಹುಲಿಗಳು ಸೇರಿದಂತೆ ಬಲಿಪ್ರಾಣಿಗಳ ಸಂಖ್ಯೆ ಹೆಚ್ಚಾಗಿವೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ADVERTISEMENT

ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶ, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಿಂದಲೂ ಹುಲಿಗಳು ಆವಾಸಸ್ಥಾನ ಹುಡುಕಿಕೊಂಡು ಮಲೆಮಹದೇಶ್ವರ ವನ್ಯಧಾಮದಲ್ಲಿ ನೆಲೆ ಕಂಡುಕೊಳ್ಳುತ್ತಿವೆ. ಹುಲಿಗಳ ಸಂತತಿ ಹೆಚ್ಚುತ್ತಿರುವ ಹೊತ್ತಿನಲ್ಲೇ ಹುಲಿಗಳಿಗೆ ಸಂಕಷ್ಟ ಎದುರಾಗಿದ್ದು, ದಟ್ಟಾರಣ್ಯದಲ್ಲಿ ಸ್ವಚ್ಛಂದವಾಗಿ ಓಡಾಡಿಕೊಂಡಿದ್ದ ಹುಲಿಗಳು ಮಾನವನ ಸೇಡಿಗೆ ಬಲಿಯಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ ಪ್ರಾಣಿಪ್ರಿಯರು.

ಅರಣ್ಯ ಇಲಾಖೆ ಹಾಗೂ ಸ್ಥಳೀಯರ ನಡುವಿನ ‌ತಿಕ್ಕಾಟ, ವೈಮನಸ್ಸಿನಿಂದ ಹುಲಿಗಳು ಪ್ರಾಣ ಕಳೆದುಕೊಳ್ಳುತ್ತಿವೆ. ಹಸುವನ್ನು ಹುಲಿ ಕೊಂದು ಹಾಕಿದೆ ಎಂಬ ಕಾರಣಕ್ಕೆ ಕಾಡಂಚಿನ ನಿವಾಸಿಗಳು ಹುಲಿಗಳನ್ನು ಕೊಂದು ಹಾಕುತ್ತಿರುವುದು ಭವಿಷ್ಯದಲ್ಲಿ ಹುಲಿಗಳ ಸಂತತಿಯೇ ನಾಶವಾಗುವ ಆತಂಕವನ್ನು ತಂದೊಡ್ಡಿದೆ. 

ಮನುಷ್ಯನ ದ್ವೇಷ ಹಾಗೂ ಕೌರ್ಯಕ್ಕೆ ಜುಲೈ 26ರಂದು ಐದು ಹುಲಿಗಳು ಮೃತಪಟ್ಟರೆ, ಅ.1ರಂದು  ಒಂದು ಹುಲಿ ಬಲಿಯಾಗಿದೆ. ಆರೂ ಹುಲಿಗಳು ದ್ವೇಷದ ಕಿಚ್ಚಿಗೆ ಬಲಿಯಾಗಿರುವುದು ದುರಂತ ಎನ್ನುತ್ತಾರೆ ಪ್ರಾಣಿಪ್ರಿಯರಾದ ಮಾದೇಶ್‌.

ಸಾಮರಸ್ಯದ ಕೊರತೆ: ಅರಣ್ಯ ಇಲಾಖೆ ಹಾಗೂ ಹಾಗೂ ಸ್ಥಳೀಯರ ನಡುವೆ ಸಾಮರಸ್ಯದ ಕೊರತೆ ಕಾಡುತ್ತಿರುವುದು ಮಾನವ ಹಾಗೂ ಪ್ರಾಣಿ ಸಂಘರ್ಷ ಉಲ್ಭಣವಾಗಲು ಕಾರಣ. ಕಾಡುಪ್ರಾಣಿಗಳಿಂದ ಜಾನುವಾರು ಮೃತಪಟ್ಟರೆ ಸಕಾಲಕ್ಕೆ ಪರಿಹಾರ ದೊರೆಯದಿರುವುದು, ಪ್ರಾಣಿಗಳಿಂದ ಉಂಟಾಗುವ ಬೆಳೆ ನಾಶಕ್ಕೆ ಬಿಡಿಗಾಸು ಪರಿಹಾರ ನಿಗದಿ ಮಾಡಿರುವುದು, ಪರಿಹಾರ ಪಡೆಯಲು ಕಚೇರಿಗಳಿಗೆ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ಸ್ಥಳೀಯರು ಹಾಗೂ ಅರಣ್ಯ ಇಲಾಖೆಯ ನಡುವೆ ಬಿರುಕು ಹೆಚ್ಚಾಗಲು ಕಾರಣವಾಗಿದೆ ಎನ್ನುತ್ತಾರೆ ಆದಿವಾಸಿ ಸಮುದಾಯದ ಮುಖಂಡರಾದ ಸಿ.ಮಾದೇಗೌಡ.

ಈಚೆಗೆ ಮಾನವ ಮತ್ತು ವನ್ಯಜೀವಿ ಸಂಘರ್ಷ ನಿರಂತರವಾಗಿ ನಡೆಯುತ್ತಿದ್ದು ತಡೆಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ. ಬಿಗಿಯಾದ ಕಾನೂನು, ನಿಯಮಗಳನ್ನು ಮುಂದಿಟ್ಟು ಅರಣ್ಯದಂಚಿನ ನಿವಾಸಿಗಳಲ್ಲಿ ಭಯ ಹುಟ್ಟಿಸುತ್ತಿದ್ದಾರೆ. ಇದೆಲ್ಲದರ ಪರಿಣಾಮ ಹುಲಿಯ ಹತ್ಯೆಯಂತಹ ಕೃತ್ಯಗಳು ನಡೆಯಲು ಕಾರಣವಾಗುತ್ತಿವೆ ಎನ್ನುತ್ತಾರೆ ಮುಖಂಡರು.

ಅರಣ್ಯ ಸಂರಕ್ಷಣೆಯಾಗುತ್ತಿರುವುದೇ ಕಾಡಂಚಿನ ನಿವಾಸಿಗಳಿಂದ ಎಂಬ ಸತ್ಯವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಅರಿಯಬೇಕು. ವನ್ಯಜೀವಿ ಕಾಯ್ದೆ ಹಾಗೂ ಕಾನೂನುಗಳ ಬಗ್ಗೆ ಕಾಡಂಚಿನ ನಿವಾಸಿಗಳಲ್ಲಿ ಅರಿವಿನ ಕೊರತೆ ಇದ್ದು ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕು. ಪ್ರಾಣಿಗಳ ಬೇಟೆ ಮಾಡಿದರೆ ಶಿಕ್ಷೆ, ದಂಡ ಹಾಗೂ ಎದುರಿಸಬೇಕಾದ ಸಮಸ್ಯೆಗಳ ಕುರಿತು ತಿಳಿ ಹೇಳಬೇಕು. 

ಪ್ರಾಣಿಗಳಿಂದ ಜಾನುವಾರುಗಳು ಮೃತಪಟ್ಟರೆ ಕಚೇರಿಗೆ ಅಲೆದಾಡಿಸದೆ ತುರ್ತು ಪರಿಹಾರ ನೀಡುವುದರ ಜೊತೆಗೆ ನೈತಿಕ ಸ್ಥೈರ್ಯ ತುಂಬುವ ಕೆಲಸ ಮಾಡಬೇಕು. ಅರಣ್ಯ ಇಲಾಖೆ ಅಧಿಕಾರಿಗಳು ಬ್ರಿಟಿಷ್‌ ಆಡಳಿತ ವ್ಯವಸ್ಥೆಯ ಮನಸ್ಥಿತಿಯಿಂದ ಹೊರಬರಬೇಕು ಎಂದು ಅಭಿಪ್ರಾಯಪಡುತ್ತಾರೆ ಮುಖಂಡ ಮಾದೇಗೌಡ.

ಕಾಡಿನೊಳಗೆ ಹುಲಿ ದಾಳಿಯಿಂದ ಜಾನುವಾರು ಮೃತಪಟ್ಟರೆ ಪರಿಹಾರ ಸಿಗುವುದಿಲ್ಲ. ಅರಣ್ಯದೊಳಗಿರುವ ಗ್ರಾಮಗಳಲ್ಲಿ ಹುಲಿ ದಾಳಿಯಿಂದ ಮೃತಪಟ್ಟರೆ ಮಾತ್ರ ಪರಿಹಾರ ಸಿಗಲಿದೆ. ಈ ಕುರಿತು ಅರಣ್ಯ ಸಚಿವರು ಶೀಘ್ರ ಆದೇಶ ಹೊರಡಿಸಲಿದ್ದಾರೆ
–ಭಾಸ್ಕರ್ ಡಿಸಿಎಫ್ ಮಲೆಮಹದೇಶ್ವರ ವನ್ಯಧಾಮ

ಶೇ 60ರಷ್ಟು ಅರಣ್ಯ ಹನೂರು

ತಾಲ್ಲೂಕಿನಲ್ಲಿ ಕಾವೇರಿ ಹಾಗೂ ಮಲೆ ಮಹದೇಶ್ವರ ವನ್ಯಧಾಮಗಳಿದ್ದು ಒಟ್ಟು ಭೂಪ್ರದೇಶದ ಶೇ 60ರಷ್ಟು ಅರಣ್ಯದಿಂದಲೇ ಕೂಡಿದೆ. ಅರಣ್ಯದೊಳಗೆ ಹಾಗೂ ಅಂಚಿನಲ್ಲಿ ಹಲವು ಗ್ರಾಮಗಳಿದ್ದು ಇಂದಿಗೂ ಕೃಷಿ ಹಾಗೂ ಹೈನುಗಾರಿಕೆಯನ್ನೇ ನೆಚ್ಚಿ ಬದುಕು ಕಟ್ಟಿಕೊಂಡಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಕಾಡಂಚಿನ ನಿವಾಸಿಗಳ ಮಧ್ಯೆ ಸಾಮರಸ್ಯದ ಅಗತ್ಯವಿದೆ ಎನ್ನುತ್ತಾರೆ ಮುಖಂಡರಾದ ಮಾದೇಗೌಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.