ಹನೂರು: ತಾಲ್ಲೂಕಿನ ಮಲೆಮಹದೇಶ್ವರ ವನ್ಯಧಾಮದಲ್ಲಿ ಹುಲಿಯನ್ನು ಹತ್ಯೆಮಾಡಿ ಮೂರು ಭಾಗಗಳಾಗಿ ತುಂಡರಿಸಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದ ಪ್ರಕರಣದಲ್ಲಿ ಮತ್ತಿಬ್ಬರು ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಹುಲಿ ದಾಳಿಯಿಂದ ಮೃತಪಟ್ಟಿದ್ದ ಹಸುವಿನ ಮಾಲೀಕ ಚಂದು ಹಾಗೂ ಅಭಿಷೇಕ್ ಬಂಧಿತರು. ಈ ಮೂಲಕ ಪ್ರಕರಣದಲ್ಲಿ ಇದುವರೆಗೂ 6 ಆರೋಪಿಗಳ ಬಂಧನವಾಗಿದೆ.
ಮತ್ತೊಬ್ಬ ಆರೋಪಿಗೆ ಶೋಧ: ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಗೋವಿಂದನ ಬಂಧನಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ. ಆರೋಪಿಯು ವೃತ್ತಿಪರ ಬೇಟೆಗಾರನಾಗಿದ್ದು ಹಿಂದೆಯೂ ಕಳ್ಳಬೇಟೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆ ವೇಳೆ ತಿಳಿದುಬಂದಿದೆ.
ಕಾಡಿನಲ್ಲಿ ಜಿಂಕೆಯನ್ನು ಬೇಟೆಯಾಡಿ ಮಾಂಸವನ್ನು ಬೆಂಗಳೂರು, ಮೈಸೂರು ಸೇರಿದಂತೆ ಹಲವು ಕಡೆಗಳಿಗೆ ಮಾರಾಟ ಮಾಡುತ್ತಿದ್ದ. ಬೇಟೆಯಾಡುವಾಗ ಇಲಾಖೆಯ ಸಿಬ್ಬಂದಿಯ ಮೇಲೆಯೇ ದಾಳಿ ನಡೆಸಿ ಪರಾರಿಯಾಗಿದ್ದ. ತಲೆಮರೆಸಿಕೊಂಡ ಆರೋಪಿ ಸೆರೆಗೆ ತೀವ್ರ ಕಾರ್ಯಾಚರಣೆ ನಡೆಸಲಾಗುತ್ತಿದ್ದು ಶೀಘ್ರ ಬಂಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ವಿವರ: ಮಲೆಮಹದೇಶ್ವರ ವನ್ಯಧಾಮದ ಹನೂರು ಬಫರ್ ವಲಯದ ಪಚ್ಚೆದೊಡ್ಡಿ ಗಸ್ತಿನ ಬಳಿ ಹಸುವಿನ ಮೇಲೆ ದಾಳಿ ಮಾಡಿದಕ್ಕೆ ಪ್ರತೀಕಾರವಾಗಿ ಮೃತ ಜಾನುವಾರು ಕಳೆಬರಕ್ಕೆ ವಿಷಹಾಕಿ ಹುಲಿಯನ್ನು ಹತ್ಯೆ ಮಾಡಲಾಗಿತ್ತು. ಬಳಿಕ ಸಾಕ್ಷ್ಯ ನಾಶಪಡಿಸಲು ಹುಲಿಯನ್ನು ಮೂರು ಭಾಗಗಳಾಗಿ ತುಂಡರಿಸಿ ಅದರೊಳಗಿದ್ದ ಕರುಳು ಹಾಗೂ ಯಕೃತ್ ಭಾಗಗಳನ್ನು ಯಾರಿಗೂ ಸಿಗದಂತೆ ಬಿಸಾಡಲಾಗಿತ್ತು.
ಹುಲಿ ಹತ್ಯೆ ಪ್ರಕರಣ ಸಂಬಂಧ ಏಳು ಜನರ ಮೇಲೆ ಪ್ರಕರಣ ದಾಖಲಾಗಿದ್ದು ಅ.4 ರಂದು ಪಚ್ಚೆದೊಡ್ಡಿ ಗ್ರಾಮದ ಪಚ್ಚೆಮಲ್ಲು, ಗಣೇಶ್ ಹಾಗೂ ಶಂಪು ಎಂಬಾತನನ್ನು ಬಂಧಿಸಲಾಗಿತ್ತು. ಅ.9ರಂದು ಮತ್ತೊಬ್ಬ ಆರೋಪಿ ಸಿದ್ದರಾಜನನ್ನು ಕುಟುಂಬ ಸದಸ್ಯರೇ ಅರಣ್ಯಾಧಿಕಾರಿಗಳಿಗೆ ತಂದೊಪ್ಪಿಸಿದ್ದರು. ಈಗ ಚಂದು ಹಾಗೂ ಅಭಿಷೇಕ್ ಬಂಧನವಾಗಿದೆ.
ಹತ್ಯೆಗೆ ಕಾರಣ:
ಅ.1ರಂದು ರಾತ್ರಿ ಅಭಿಷೇಕ್ ಎಂಬಾತ ಅರಣ್ಯಕ್ಕೆ ಹೋಗಿದ್ದಾಗ ಮಾರ್ಗಮಧ್ಯೆ ಹುಲಿ ಸತ್ತು ಬಿದ್ದಿರುವುದನ್ನು ನೋಡಿ ಹಸುವಿನ ಮಾಲೀಕ ಚಂದುಗೆ ಕರೆ ಮಾಡಿ ಸುದ್ದಿ ಮುಟ್ಟಿಸಿದ್ದಾನೆ. ಅ.2 ರಂದು ಚಂದು, ಶಂಪು ಹಾಗೂ ಸಿದ್ದರಾಜು ಸೇರಿ ಹುಲಿಯ ಕಳೆಬರವನ್ನು ಮೂರು ತುಂಡುಗಳನ್ನಾಗಿ ಕತ್ತರಿಸಿ ಮುಂಭಾಗವನ್ನು ಮಣ್ಣಿನಲ್ಲಿ ಹೂತಿಟ್ಟು, ಮತ್ತೆರಡು ಭಾಗಗಳನ್ನು ಕಾಡಿನ ಅಲ್ಲಲ್ಲಿ ಬಿಸಾಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಹುಲಿ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಏಳು ಆರೋಪಿಗಳ ಪೈಕಿ 6 ಜನರನ್ನು ಬಂಧಿಸಲಾಗಿದ್ದು ಉಳಿದ ಒಬ್ಬ ಆರೋಪಿ ಬಂಧನಕ್ಕೆ ಶೋಧ ನಡೆಯುತ್ತಿದೆಭಾಸ್ಕರ್ ಡಿಸಿಎಫ್ ಮಲೆಮಹದೇಶ್ವರ ವನ್ಯಧಾಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.