ADVERTISEMENT

ಸಾಲು ಸಾಲು ರಜೆ: ಬಂಡೀಪುರದಲ್ಲಿ ಪ್ರವಾಸಿಗರ ದಟ್ಟಣೆ, ಸಫಾರಿಗೆ ಹೆಚ್ಚಿದ ಬೇಡಿಕೆ

ಮೂರು ದಿನಗಳಲ್ಲಿ ಮೂರು ಸಾವಿರಕ್ಕೂ ಅಧಿಕ ಪ್ರವಾಸಿಗರ ಭೇಟಿ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2019, 14:10 IST
Last Updated 20 ಏಪ್ರಿಲ್ 2019, 14:10 IST
ಬಂಡೀಪುರದಲ್ಲಿ ಶನಿವಾರ ಕಂಡು ಬಂದ ಪ್ರವಾಸಿಗರು‌
ಬಂಡೀಪುರದಲ್ಲಿ ಶನಿವಾರ ಕಂಡು ಬಂದ ಪ್ರವಾಸಿಗರು‌   

ಗುಂಡ್ಲುಪೇಟೆ: ಶಾಲಾ ಮಕ್ಕಳಿಗೆ ಬೇಸಿಗೆಯ ರಜೆ ಮತ್ತು 2–3 ದಿನಗಳಿಂದ ಸಾಲು ಸಾಲು ರಜೆಗಳಿರುವುದರಿಂದ ಬಂಡೀಪುರಕ್ಕೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸಫಾರಿಗಾಗಿ ಮುಗಿಬೀಳುತ್ತಿದ್ದಾರೆ. ಬಂಡೀಪುರ ನಿಲಯಗಳಲ್ಲದೆ ಬಂಡೀಪುರ ಸುತ್ತಮುತ್ತಲಿರುವ ಖಾಸಗಿ ರೆಸಾರ್ಟ್‍ಗಳಿಗೂ ಹೆಚ್ಚಿನ ಬೇಡಿಕೆ ಬಂದಿದೆ.

ಮೂರ್ನಾಲ್ಕು ದಿನಗಳಿಂದ ಈ ಭಾಗದಲ್ಲಿ ಉತ್ತಮ ಮಳೆಯಾಗಿರುವುದರಿಂದ ವಾತಾವರಣ ತಂಪಾಗಿದ್ದು, ಸಫಾರಿ ಸಮಯದಲ್ಲಿ ಪ್ರಾಣಿಗಳ ದರ್ಶನವಾಗುತ್ತಿದೆ.

‘ಹೆಚ್ಚು ಬಿಸಿಲು ಇದ್ದರೆ ಪ್ರಾಣಿಗಳು ಎದುರು ಕಾಣಿಸಿಕೊಳ್ಳುವುದಿಲ್ಲ. ನೆರಳಿರುವ ಕಡೆ ಇರುತ್ತವೆ. ವಾತಾವರಣ ತಂಪಾಗಿದ್ದರೆ ಪ್ರಾಣಿಗಳ ದರ್ಶನವಾಗುತ್ತವೆ. ವಾರದಿಂದೀಚೆಗೆ ಮಳೆಯಾಗುತ್ತಿರುವುದರಿಂದ ಪ್ರಾಣಿಗಳು ಹೆಚ್ಚಾಗಿ ಕಂಡು ಬರುತ್ತಿವೆ’ ಎಂದು ಸಫಾರಿ ವಾಹನದ ಚಾಲಕರೊಬ್ಬರು ತಿಳಿಸಿದರು.

ADVERTISEMENT

ಹೆಚ್ಚಿದ ಬೇಡಿಕೆ: ಸಫಾರಿಗಾಗಿ ಬರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.ಬರುವವರಿಗೆಲ್ಲ ಸಫಾರಿ ಟಿಕೆಟ್ ಸಿಗುವುದಿಲ್ಲ. ಟಿಕೆಟ್ ಸಿಗದವರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಜ್ಯದ ಗಡಿ ಭಾಗದವರೆಗೆ ಹೋಗಿ ಬರುತ್ತಾರೆ. ಇಲ್ಲೂ ಅನೇಕ ಪ್ರಾಣಿಗಳ ದರ್ಶನವಾಗುತ್ತಿದೆ.

‘ಸಫಾರಿಗೆ 8 ಬಸ್ ಹಾಗೂ ನಾಲ್ಕು ಜಿಪ್ಸಿಗಳನ್ನು ಬಳಸಲಾಗುತ್ತಿದೆ. ಜಿಪ್ಸಿಗಳು ಅನ್‍ಲೈನ್ ಮೂಲಕ ಬುಕ್ಕಿಂಗ್ ಆಗಿರುತ್ತವೆ ಅಥವಾ ಬಂಡೀಪುರ ವಸತಿಗೃಹದಲ್ಲಿ ವಾಸ್ತವ್ಯ ಹೂಡುವವರಿಗೆ ಮೀಸಲಿಡಲಾಗಿರುತ್ತದೆ. ಸಫಾರಿಗೆಂದೇ ಬರುವವರು ಬಸ್‍ನಲ್ಲಿ ತೆರಳಬೇಕಾಗುತ್ತದೆ. ಹೆಚ್ಚು ಪ್ರವಾಸಿಗರು ಬಂದರೆಕೆಲವೊಂದು ಬಾರಿ ಟಿಕೆಟ್ ಸಿಗುವುದಿಲ್ಲ, ಮೂರು ದಿನಗಳಿಂದ ಮೂರು ಸಾವಿರಕ್ಕೂ ಹೆಚ್ಚಿನ ಪ್ರವಾಸಿಗರು ಭೇಟಿ ನೀಡಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಮೇ ಅಂತ್ಯದವರಗೆ ಬಂಡೀಪುರಕ್ಕೆ ಹೆಚ್ಚಿನ ಪ್ರವಾಸಿಗರು ಬರುತ್ತಾರೆ. ಅವರಿಗೆ ಅನುಕೂಲವಾಗುವಂತೆ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಜೊತೆಗೆ ಬರುವವರಿಗೆ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಬೇಡಿ, ತಿಂಡಿಗಳನ್ನು ಪ್ರಾಣಿಗಳಿಗೆ ಕೊಡಬಾರದು, ಪ್ರಾಣಿಗಳಿಗೆ ತೊಂದರೆ ಮಾಡಬಾರದು ಎಂದು ತಿಳಿಹೇಳುತ್ತಿರುತ್ತೇವೆ’ ಎಂದು ಬಂಡೀಪುರ ವಲಯ ಅರಣ್ಯಾಧಿಕಾರಿ ಶ್ರೀನಿವಾಸ್ ಪ್ರಜಾವಾಣಿ’ಗೆ ತಿಳಿಸಿದರು.

ಗೋಪಾಲಸ್ವಾಮಿ ಬೆಟ್ಟಕ್ಕೂ ಹೆಚ್ಚಿದ ಭಕ್ತರು

ಎರಡು ಮೂರು ದಿನಗಳಿಂದ ತಾಲ್ಲೂಕಿನ ಹಿಮವದ್‌ ಗೋಪಾಲಸ್ವಾಮಿ ಬೆಟ್ಟಕ್ಕೂ ಭೇಟಿ ನೀಡುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.ಬಂಡೀಪುರಕ್ಕೆ ಬಂದವರು ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಿ ಇಲ್ಲಿನ ಪರಿಸರವನ್ನು ನೋಡಿ ಹೋಗುತ್ತಿದ್ದಾರೆ.

‘ವಾರಾಂತ್ಯದಲ್ಲಿ ಹೆಚ್ಚಿನ ಜನರು ದೇವಸ್ಥಾನಕ್ಕೆ ಬರುತ್ತಾರೆ. ಅನ್ಯಧರ್ಮದವರು ಸಹ ಇಲ್ಲಿನ ಪರಿಸರವನ್ನು ನೋಡಲು ಬರುತ್ತಾರೆ’ ಎಂದು ಇಲ್ಲಿನ ಸಿಬ್ಬಂದಿ ವಾಸು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.