ADVERTISEMENT

ಕೆರೆಗಳಿಗೆ ನೀರು ತುಂಬಿಸಿ, ಬೀಜ, ಗೊಬ್ಬರ ಪೂರೈಸಿ

ತಾಲ್ಲೂಕು ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಶಾಸಕ ಪುಟ್ಟರಂಗಶೆಟ್ಟಿ ಸೂಚನೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 6:49 IST
Last Updated 11 ಜುಲೈ 2025, 6:49 IST
ಚಾಮರಾಜನಗರ ನಗರದ ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಚಾಮರಾಜನಗರ ತಾಲ್ಲೂಕು ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು
ಚಾಮರಾಜನಗರ ನಗರದ ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಚಾಮರಾಜನಗರ ತಾಲ್ಲೂಕು ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು   

ಚಾಮರಾಜನಗರ: ಕೃಷಿ ಚಟುವಟಿಕೆಗಳಿಗೆ ಅನುಕುಲವಾಗುವಂತೆ ಹಾಗೂ ಅಂತರ್ಜಲ ಅಭಿವೃದ್ಧಿಗೆ ಪೂರಕವಾಗಿ ತಾಲ್ಲೂಕಿನ ಎಲ್ಲ ಕೆರೆಗಳನ್ನೂ ಸಕಾಲದಲ್ಲಿ ತುಂಬಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕ ಸಿ. ಪುಟ್ಟರಂಗಶೆಟ್ಟಿ ಸೂಚನೆ ನೀಡಿದರು.

ನಗರದ ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಚಾಮರಾಜನಗರ ತಾಲ್ಲೂಕು ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಸಚಿವರು ಕೆರೆಗಳನ್ನು ಆದ್ಯತೆ ಮೇಲೆ ತುಂಬಿಸುವ ಕೆಲಸ ಮಾಡಬೇಕು. ಚಿಕ್ಕಹೊಳೆಗೆ ನೀರು ತುಂಬಿಸುವ ಯೋಜನೆ ಪ್ರಗತಿಯಾಗಬೇಕು ಎಂದು ಸೂಚಿಸಿದರು.

ಕರೆಗಳಿಗೆ ನೀರು ತುಂಬಿಸುವ ಯೋಜನೆಯ ಬಗ್ಗೆ ಸಭೆಗೆ ಮಾಹಿತಿ ನೀಡಿದ ಕಾವೇರಿ ನೀರಾವರಿ ನಿಗಮದ ಸಹಾಯಕ ಎಂಜಿನಿಯರ್ ಮಹೇಶ್, ತಾಲ್ಲೂಕಿನಲ್ಲಿ 4ನೇ ಹಂತದಲ್ಲಿ ಸುವರ್ಣ ನಗರ ಕೆರೆ, ಅರಕಲವಾಡಿ ಕೆರೆ ತುಂಬಿಸಲಾಗುತ್ತಿದೆ. ಮೊದಲ, ಎರಡನೇ ಹಾಗೂ ಮೂರನೇ ಹಂತದ ಕೆರೆಗಳನ್ನು ತುಂಬಿಸಲಾಗುವುದು ಎಂದರು.

ನೀರು ಪೋಲಾಗದಂತೆ, ಸರಾಗವಾಗಿ ರೈತರ ಜಮೀನುಗಳಿಗೆ ಹರಿಯತೆ ಕೆರೆಗಳ ಏರಿಗಳನ್ನು ಸುಸ್ಥಿತಿಯಲ್ಲಿ ಇರಿಸಬೇಕು, ತೂಬುಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು ಎಂದು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಸಚಿವರು ಸುವರ್ಣಾವತಿ ಎಡದಂಡೆ ಬಲದಂಡೆ ಅಭಿವೃದ್ಧಿಗೆ ₹ 30 ಕೋಟಿ ಬಿಡುಗಡೆಯಾಗಿದ್ದು ಶೀಘ್ರ ಟೆಂಡರ್ ಕರೆಯಲಾಗುವುದು ಎಂದರು.

ADVERTISEMENT

ಪ್ರಸ್ತುತ ಸಾಲಿನಲ್ಲಿ 703 ಕ್ವಿಂಟಾಲ್ ಬಿತ್ತನೆ ಬೀಜ, 4,547 ಟನ್ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗಿದೆ. ಬಿತ್ತನೆಗೆ ಮುನ್ನ ಮಣ್ಣಿನ ಫಲವತ್ತತೆ ಹೆಚ್ಚಿಸಿಕೊಳ್ಳಲು ಅಗತ್ಯವಿರುವ ಚೆಂಬೆ, ಸೆಣಬು ಬೀಜಗಳನ್ನು ತರಿಸಿ ರೈತರಿಗೆ ವಿತರಿಸಲಾಗುವುದ. ಒಂದೆರಡು ದಿನಗಳಲ್ಲಿ ಬೀಜಗಳು ಇಲಾಖೆಗೆ ಬರಲಿದೆ ಎಂದು ಕೃಷಿ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು.

ರೈತರು ಹೆಚ್ಚಿನ ಪ್ರಮಾಣದಲ್ಲಿ ಹೆಸರು, ಅಲಸಂದೆ, ಉದ್ದು ಬಿತ್ತನೆ ಮಾಡಿದ್ದು ಪ್ರಸ್ತುತ ಮೆಕ್ಕಜೋಳ ಬಿತ್ತನೆ ಮಾಡುತ್ತಿದ್ದಾರೆ, ಬಿತ್ತನೆ ಬೀಜ ರಸಗೊಬ್ಬರದ ಕೊರತೆ ಎದುರಾಗಿಲ್ಲ. ಕೃಷಿ ಭಾಗ್ಯ ಯೋಜನೆಯಡಿ 41.36 ಲಕ್ಷ ಅನುದಾನ ಬಿಡುಗಡೆಯಾಗಿದ್ದು 29 ಫಲಾನುಭವಿಗಳನದನು ಕೃಷಿ ಹೊಂಡ ಯೋಜನೆಗೆ ಆಯ್ಕೆ ಮಾಡಲಾಗಿದೆ ಎಂದರು.

ಫಲಾನುಭವಿಗಳ ಆಯ್ಕೆಯಲ್ಲಿ ಅನುಸರಿಸಿರುವ ಮಾನದಂಡಗಳ ಬಗ್ಗೆ ಪ್ರಶ್ನಿಸಿದ ಶಾಸಕರು ಫಲಾನುಭವಿಗಳ ಪಟ್ಟಿ ನೀಡುವಂತೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ ಮೊದಲು ಅರ್ಜಿ ಸಲ್ಲಿಸಿದವರಿಗೆ ಮೊದಲ ಆದ್ಯತೆ ನೀಡಲಾಗಿದ್ದು ಇಲಾಖೆಯ ನಿಯಮ, ಮೀಸಲಾತಿ ಪಾಲಿಸಿ ಫಲಾನುಭವಿಗಳ ಆಯ್ಕೆ ನಡೆಸಲಾಗಿದೆ ಎಂದರು.

ಬಿತ್ತನೆ ಕಾರ್ಯಕ್ಕೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಸೂಚನೆ ನೀಡಿದರು.

ಸಣ್ಣ ನೀರಾವರಿ ಇಲಾಖೆಯ ಎಇಇ ಮಾತನಾಡಿ, ಜ್ಯೋತಿಗೌಡನಪುರ, ತಾವರೆಕಟ್ಟೆಯಲ್ಲಿ ಸೇತುವೆ ನಿರ್ಮಾಣ ಮಾಡಲಾಗಿದ್ದು ದೊಡ್ಡರಾಯಪೇಟೆ ಕೆರೆ ಬಳಿ ದುರಸ್ತಿ ಕಾರ್ಯ ನಡೆಯುತ್ತಿದೆ ಎಂದರು.

ಸಭೆಯಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸೋಮೇಶ್ವರ್, ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿ ದೀಪಾ, ತಾಲ್ಲೂಕು ಪಂಚಾಯಿತಿ ಇಒ ಶ್ರೀಕಂಠರಾಜೇ ಅರಸ್ ಹಾಗೂ ಹಲವು ಇಲಾಖೆಗಳ ಅಧಿಕಾರಿಗಳು ಇದ್ದರು.


ಶಾಸಕರು ಗರಂ

ಕೆಡಿಪಿ ಸಭೆಗೆ ಮಾಹಿತಿ ಸಲ್ಲಿಸದ ಹಾಗೂ ಸಭೆಗೆ ಹಾಜರಾಗದೆ ಕಿರಿಯ ಅಧಿಕಾರಿಗಳನ್ನು ಕಳುಹಿಸಿದ ಹಿರಿಯ ಅಧಿಕಾರಿಗಳ ವಿರುದ್ಧ ಶಾಸಕ ಪುಟ್ಟರಂಗ ಶೆಟ್ಟಿ ಗರಂ ಆದರು. ಸೆಸ್ಕ್ ಅಧಿಕಾರಿಯೊಬ್ಬರು ಸಭೆಯಲ್ಲಿ ಮೊಬೈಲ್ ಮೂಲಕ ಅಂಕಿ ಅಂಶಗಳನ್ನು ಪಡೆಯುತ್ತಿದ್ದಾಗ ಗದರಿದ ಶಾಸಕರು ಸಭೆಗೆ ಹಾಜರಾಗುವ ಮುನ್ನ ಮಾಹಿತಿ ಪಡೆಯಬೇಕು ಸಭೆಯಲ್ಲಿ ಕುಳಿತು ಮೊಬೈಲ್‌ನಲ್ಲಿ ಮಾಹಿತಿ ಪಡೆಯುವ ಛಾಳಿ ಬಿಡಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.