ADVERTISEMENT

ಚಾಮರಾಜನಗರ | ಅರಣ್ಯ ಹಕ್ಕು ಕಾಯ್ದೆಯಡಿ ಸೌಲಭ್ಯ ಮರೀಚಿಕೆ: ಡಾ.ಸಿ.ಮಾದೇಗೌಡ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 8:11 IST
Last Updated 27 ಡಿಸೆಂಬರ್ 2025, 8:11 IST
ಚಾಮರಾಜನಗರದ ಲ್ಯಾಂಪ್ಸ್‌ ಸಮುದಾಯ ಭವನದಲ್ಲಿ ಈಚೆಗೆ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಸಭೆ ನಡೆಯಿತು
ಚಾಮರಾಜನಗರದ ಲ್ಯಾಂಪ್ಸ್‌ ಸಮುದಾಯ ಭವನದಲ್ಲಿ ಈಚೆಗೆ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಸಭೆ ನಡೆಯಿತು   

ಚಾಮರಾಜನಗರ: ಅರಣ್ಯ ಹಕ್ಕು ಕಾಯ್ದೆಯ ಅನುಷ್ಠಾನ ಸಂಬಂಧ ಎರಡು ವರ್ಷಗಳಿಂದ ನಿರಂತವಾಗಿ ಶ್ರಮಿಸಲಾಗುತ್ತಿದ್ದರೂ ನಿರೀಕ್ಷಿತ ಪ್ರಗತಿ ಕಂಡಿಲ್ಲ ಎಂದು ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಡಾ.ಸಿ.ಮಾದೇಗೌಡ ತಿಳಿಸಿದರು.

ನಗರದ ಲ್ಯಾಂಪ್ಸ್‌ ಸಮುದಾಯಭವನದಲ್ಲಿ ಈಚೆಗೆ ಸಂಘದ ಅಧ್ಯಕ್ಷ ಯು. ರಂಗೇಗೌಡ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, 34 ಅರಣ್ಯ ಹಕ್ಕು ಸಮಿತಿಗಳ ಅರ್ಜಿಗಳು ಉಪವಿಭಾಗಮಟ್ಟದ ಅರಣ್ಯ ಹಕ್ಕು ಸಮಿತಿಯಲ್ಲಿ ಚರ್ಚೆಯಾಗಿ ಗ್ರಾಮ ಪಂಚಾಯಿತಿಗಳಿಗೆ ರವಾನೆಯಾಗಿದ್ದರೂ ಆದಿವಾಸಿಗಳಿಗೆ ನಿವೇಶನದ ಹಕ್ಕು, ಸಮುದಾಯದ ಹಕ್ಕು, 3(1) ಎಂ ವಿವಾದಿತ ಜಮೀನಿನ ಹಕ್ಕು, ಮೂಲಸೌಲಭ್ಯಗಳ ಹಕ್ಕು, ಸಮುದಾಯ ಆಧಾರಿತ ಸಂಪನ್ಮೂಲ ಅಭಿವೃದ್ಧಿ ಹಕ್ಕುಗಳು ದೊರೆತಿಲ್ಲ. ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದರು.

ಈ ನಿಟ್ಟಿನಲ್ಲಿ ಆದಿವಾಸಿಗಳು ಹಕ್ಕುಗಳನ್ನು ಪಡೆದುಕೊಳ್ಳಲು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುವುದು ಅಗತ್ಯವಾಗಿದೆ. 19 ಪೋಡುಗಳಲ್ಲಿ ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ಸೌಲಭ್ಯ, ರಸ್ತೆ ನಿರ್ಮಾಣ ಕಾಮಗಾರಿಗಳು ಸ್ಥಗಿತಗೊಂಡಿವೆ. ಕೇಂದ್ರ ಸರ್ಕಾರದ ಅನುಮತಿ ಪಡೆಯದ ಹೊರತು ಕಾಮಗಾರಿ ನಡೆಸಲು ಅನುಮತಿ ಇರುವುದಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಸಿ.ಮಾದೇಗೌಡ ಹೇಳಿದರು.

ADVERTISEMENT

ಆದಿವಾಸಿಗಳು ನೆಲೆಸಿರುವ ಹಾಡಿ ಪೋಡುಗಳಿಗೆ ಕನಿಷ್ಠ ಮೂಲಸೌಲಭ್ಯಗಳನ್ನು ನೀಡಬೇಕು. ಈ ನಿಟ್ಟಿನಲ್ಲಿ ಸಮುದಾಯ ಸಂಘಟಿತವಾಗಿ ರಾಜ್ಯ ಸರ್ಕಾರವನ್ನು ಒತ್ತಾಯ ಮಾಡಬೇಕಿದೆ. 2025-2026ನೇ ಸಾಲಿನ ಬಜೆಟ್‌ನಲ್ಲಿ ಜಿಲ್ಲೆಯ ಆದಿವಾಸಿಗಳ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸಿ ಘೋಷಿಸಬೇಕು. ಆದಿವಾಸಿಗಳಿಗೆ ಗುಣಮಟ್ಟದ ಪೌಷ್ಟಿಕ ಆಹಾರ ಸರಬರಾಜು ಮಾಡಬೇಕು ಎಂದರು.

ಜಿಲ್ಲಾಮಟ್ಟದ ಅತಿ ಹಿಂದುಳಿದ ಅರಣ್ಯಾಧಾರಿತ ಬುಡಕಟ್ಟು ಜನಾಂಗದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸಮುದಾಯದ ಯುವಕರು ಹಾಗೂ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಹನೂರು ತಾಲ್ಲೂಕು ಸೋಲಿಗ ಅಭಿವೃದ್ಧಿ ಸಂಘದ ವತಿಯಿಂದ ಡಿ.31 ಹಾಗೂ 31ರಂದು ಬಿರ್ಸಾ ಮುಂಡ ಜಯಂತಿಯನ್ನು ಆಚರಿಸಲು ನಿರ್ಧರಿಸಲಾಯಿತು.

ಬೆಂಗಳೂರಿನ ಐಪಿಎಚ್‌ ಸಂಸ್ಥೆಯ ನಿರ್ದೇಶಕ ಡಾ.ಪ್ರಶಾಂತ್ ಎನ್.ಎಸ್, ಡಾ.ತಾನ್ಯ ಆದಿವಾಸಿಗಳ ಆರೋಗ್ಯದ ಸಮಸ್ಯೆ ಹಾಗೂ ಪರಿಹಾರ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಸಭೆಯಲ್ಲಿ ಮುಖಂಡರಾದ ಯು.ರಂಗೇಗೌಡ, ವಿ.ಮುತ್ತಯ್ಯ, ಸಿ.ಮಹದೇವು, ಸಿ.ಕೋಣುರೇಗೌಡ, ಮಹದೇವಯ್ಯ, ನಂಜೇಗೌಡ, ಸಿದ್ದೇಗೌಡ, ಶಿವಣ್ಣ, ಕಮಲಾಕರ್, ಹಾಲಮ್ಮ, ಭಾಗ್ಯಲಕ್ಷ್ಮಿ, ಪುಟ್ಟಮ್ಮ, ನಾಗಮ್ಮ, ಪ್ರಭು, ರಾಜೇಂದ್ರ, ಮುದ್ದಣ್ಣ, ಮಹದೇವಯ್ಯ, ಹುಚ್ಚಯ್ಯ, ಮಾದೇಸ್ವಾಮಿ, ಬಸವರಾಜು, ಮಹೇಶ್, ಲಕ್ಷ್ಮಿ, ರಾಜಪ್ಪ, ಚಂದ್ರಪ್ಪ ಹಾಗೂ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.