ADVERTISEMENT

ನಕಲಿ ನಾಗಮಣಿ ಮಾರಿ ₹30 ಲಕ್ಷ ವಂಚನೆ

ಹನೂರು ಪೊಲೀಸರಿಂದ ಇಬ್ಬರ ಬಂಧನ, ತಲೆಮರೆಸಿಕೊಂಡ ಒಬ್ಬ ಆರೋಪಿ

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 16:07 IST
Last Updated 27 ಜುಲೈ 2021, 16:07 IST
ನಕಲಿ ನಾಗಮಣಿ ಮಾರಾಟ ಮಾಡಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವುದು
ನಕಲಿ ನಾಗಮಣಿ ಮಾರಾಟ ಮಾಡಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವುದು   

ಹನೂರು: ಹೊಳೆಯುವ ಹರಳನ್ನು ನಾಗಮಣಿ ಎಂದು ನಂಬಿಸಿ ಬೆಂಗಳೂರಿನ ವ್ಯಕ್ತಿಗೆ ₹30 ಲಕ್ಷಕ್ಕೆ ಮಾರಾಟ ಮಾಡಿ ವಂಚಿಸಿದ್ದ ಇಬ್ಬರನ್ನು ರಾಮಾಪುರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ತಾಲ್ಲೂಕಿನ ಹೂಗ್ಯಂ ಸಮೀಪದ ಯರಂಬಾಡಿ ಗ್ರಾಮದ ಸಣ್ಣಪ್ಪಗೌಡ ಹಾಗೂ ಕೂಡಲೂರು ಗ್ರಾಮದ ತಂಗವೇಲು ಬಂಧಿತ ಆರೋಪಿಗಳು.ಪ್ರಕರಣದ ಮುಖ್ಯ ಆರೋಪಿ ಕೊಳ್ಳೇಗಾಲ ತಾಲ್ಲೂಕಿನ ಸರಗೂರು ಗ್ರಾಮದ ರಾಜು ತಲೆಮರೆಸಿಕೊಂಡಿದ್ದಾರೆ.

ರಾಜು ಅವರು ತಿಂಗಳ ಹಿಂದೆ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಬೆಂಗಳೂರಿನ ಮನೇಶ್ ಎಂಬುವವರಿಗೆ ನಕಲಿ ನಾಗಮಣಿ ಮಾರಾಟ ಮಾಡಿದ್ದರು. ಚಾರ್ಜರ್ ಲೈಟ್ ಅಳವಡಿಸಿದ್ದ ಸಣ್ಣ ಮರದ ಪೆಟ್ಟಿಗೆಯ ಒಳಗೆ ಹತ್ತಿ ತುಂಬಿ ಅದರೊಳಗೆ ಹೊಳೆಯುವ ಹರಳು ಇಟ್ಟು ನಾಗಮಣಿ ಎಂದು ನಂಬಿಸಿದ್ದರು. ಅಲ್ಲದೇ ಮನೇಶ್‌ ಅವರಿಂದ ₹30 ಲಕ್ಷ ಹಣವನ್ನೂ ಪಡೆದಿದ್ದರು. ಕೆಲವು ದಿನಗಳ ಬಳಿಕ ಮನೇಶ್‌ಗೆ ತಾನು ಮೋಸ ಹೋಗಿದ್ದು ಗೊತ್ತಾಗಿ, ಇದೇ 26ರಂದು ರಾಮಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ADVERTISEMENT

ಕಾರ್ಯಾಚರಣೆ ಆರಂಭಿಸಿದ್ದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ರಾಜು ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

ಮನೆಯಲ್ಲಿ ನಾಗಮಣಿ ಇಟ್ಟರೆ ಹಣ, ಐಶ್ವರ್ಯ ಹೆಚ್ಚುತ್ತದೆ ಎಂಬ ನಂಬಿಕೆಯಿಂದ ಅದನ್ನು ಖರೀದಿಸಿದ್ದಾಗಿ ಮನೇಶ್‌ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೈಲು ಸೇರಿದರೂ ಬಿಡದ ಚಾಳಿ: ಬಂಧಿತರಲ್ಲಿ ಒಬ್ಬರಾಗಿರುವ ಸಣ್ಣಪ್ಪಗೌಡ ಹಾಗೂ ತಲೆಮರೆಸುಕೊಂಡಿರುವ ರಾಜು ಅವರು ಈ ಹಿಂದೆಯೂ ನಕಲಿ ನಾಗಮಣಿ ಮಾರಿ ವಂಚನೆ ಮಾಡಿದ್ದರು. 2006–07ರಲ್ಲಿ ಬೆಂಗಳೂರಿನ ಗಂಗಾಧರ್‌ ಎಂಬುವವರಿಗೆ ಹೊಳೆಯುವ ಹರಳನ್ನು ನಾಗಮಣಿ ಎಂದು ಕೊಟ್ಟು ಲಕ್ಷಾಂತರ ಹಣ ಪಡೆದಿದ್ದರು. ಬಳಿಕ ಅದು ಮೋಸ ಎಂದು ತಿಳಿದ ಮೇಲೆ ಗಂಗಾಧರ್ ಎಂಬುವವರು ಇಬ್ಬರ ವಿರುದ್ಧ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣದಲ್ಲಿ ಇಬ್ಬರೂ ಜೈಲು ಶಿಕ್ಷೆ ಅನುಭವಿಸಿದ್ದರೂ, ಹಳೆಯ ಚಾಳಿಯನ್ನು ಬಿಟ್ಟಿಲ್ಲ.

ಕಾರ್ಯಾಚರಣೆಯಲ್ಲಿ ಇನ್‌ಸ್ಪೆಕ್ಟರ್‌ ನಂಜುಂಡಸ್ವಾಮಿ, ಎಸ್ಐ ಮಂಜುನಾಥ್ ಪ್ರಸಾದ್ ಹಾಗೂ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.