ADVERTISEMENT

ಇಬ್ಬರು ಸಾವು; ಮೃತರ ಸಂಖ್ಯೆ 33ಕ್ಕೆ

ಹೊಸ 118 ಪ್ರಕರಣ ದಾಖಲು, 36 ಮಂದಿ ಗುಣಮುಖ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2020, 13:49 IST
Last Updated 20 ಆಗಸ್ಟ್ 2020, 13:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್‌–19 ಕಾರಣದಿಂದ ಗುರುವಾರ ಇಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ಈವರೆಗೆ ಮೃತಪಟ್ಟ ಸೋಂಕಿತರ ಸಂಖ್ಯೆ 33ಕ್ಕೆ ಏರಿದೆ.

21 ಮಂದಿ ಕೋವಿಡ್‌ ಕಾರಣದಿಂದಲೇ ಮೃತಪಟ್ಟಿದ್ದರೆ, 12 ಮಂದಿ ಸೋಂಕು ಇದ್ದರೂ ಬೇರೆ ಅನಾರೋಗ್ಯದಿಂದಾಗಿ ಸಾವಿಗೀಡಾಗಿದ್ದಾರೆ.

ಗುಂಡ್ಲುಪೇಟೆಯ 65 ವರ್ಷದ ವೃದ್ಧರೊಬ್ಬರು (ರೋಗಿ ಸಂಖ್ಯೆ 2,21,706) ಅವರು 14ರಂದು ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ರಾತ್ರಿ 11 ಗಂಟೆಗೆ ಕೊನೆಯುಸಿರೆಳಿದ್ದಾರೆ.

ADVERTISEMENT

ಮೃತಪ‍ಟ್ಟ ಮತ್ತೊಬ್ಬರು ಚಾಮರಾಜನಗರದ 60 ವರ್ಷದ ಮಹಿಳೆ (ರೋಗಿ ಸಂಖ್ಯೆ 1,36,201). ಇವರು ಕೂಡ 14ರಂದೇ ಆಸ್ಪತ್ರೆಗೆ ದಾಖಲಾಗಿದ್ದರು. ಬುಧವಾರ ಸಂಜೆ 6.30ಕ್ಕೆ ನಿಧನರಾಗಿದ್ದಾರೆ.ಶಿಷ್ಟಾಚಾರದಂತೆ ಇಬ್ಬರ ಅಂತ್ಯಕ್ರಿಗಳನ್ನೂ ನಡೆಸಲಾಗಿದೆ.

1,905ಕ್ಕೆ ಏರಿಕೆ: ಗುರುವಾರ ಸತತ ಎರಡನೇ ದಿನವೂ ಹೊಸ ಪ್ರಕರಣಗಳ ಸಂಖ್ಯೆ ನೂರರ ಗಡಿ ದಾಟಿದ್ದು, 118 ಮಂದಿಗೆ ಸೋಂಕು ದೃಢಪಟ್ಟಿದೆ. ನಾಲ್ಕು ಪ್ರಕರಣಗಳು ಮೈಸೂರಿನಲ್ಲಿ ಖಚಿತವಾಗಿವೆ. 36 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 1,905 ಪ್ರಕರಣಗಳು ವರದಿಯಾಗಿದ್ದು, ಸೋಂಕು ಮುಕ್ತರ ಸಂಖ್ಯೆ 1,403ಕ್ಕೆ ಏರಿದೆ.

ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದ್ದು, ಸದ್ಯ ಜಿಲ್ಲೆಯಲ್ಲಿ 469 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 181 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದು, ಉಳಿದವರು ಕೋವಿಡ್‌ ಆಸ್ಪತ್ರೆ/ಕೇರ್‌ ಕೇಂದ್ರಗಳಲ್ಲಿದ್ದಾರೆ. 36 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗುರುವಾರ ಜಿಲ್ಲೆಯಲ್ಲಿ 841 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷೆಗಳನ್ನು ನಡೆಸಲಾಗಿದೆ. ಆರ್‌ಟಿಪಿಸಿಆರ್‌ನಲ್ಲಿ 503, ರ‍್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆ 285 ಮತ್ತು ಟ್ರು ನಾಟ್‌ ವಿಧಾನದಲ್ಲಿ 53 ಪರೀಕ್ಷೆಗಳನ್ನು ನಡೆಸಲಾಗಿದೆ. 727 ಮಂದಿಯ ವರದಿ ನೆಗೆಟಿವ್‌ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.