ADVERTISEMENT

ನೀಲಗಿರಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಅಳಿವಿನಂಚಿನ ರಣಹದ್ದುಗಳ ಸಮೀಕ್ಷೆ

ಕರ್ನಾಟಕ, ತಮಿಳುನಾಡು, ಕೇರಳ ಅರಣ್ಯ ಇಲಾಖೆಗಳ ಜಂಟಿ ಪ್ರಯತ್ನ, ಎರಡು ದಿನಗಳ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2023, 16:42 IST
Last Updated 24 ಫೆಬ್ರುವರಿ 2023, 16:42 IST
ಬಂಡೀಪುರ ಹುಲಿ ಸಂರಕ್ಷಿತ ವ್ಯಾಪ್ತಿಯಲ್ಲಿ ನಡೆಯಲಿರುವ ಎರಡು ದಿನಗಳ ರಣಹದ್ದು ಸಮೀಕ್ಷೆಯಲ್ಲಿ ಭಾಗವಹಿಸಲಿರುವ  ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ವಯಂ ಸೇವಕರು
ಬಂಡೀಪುರ ಹುಲಿ ಸಂರಕ್ಷಿತ ವ್ಯಾಪ್ತಿಯಲ್ಲಿ ನಡೆಯಲಿರುವ ಎರಡು ದಿನಗಳ ರಣಹದ್ದು ಸಮೀಕ್ಷೆಯಲ್ಲಿ ಭಾಗವಹಿಸಲಿರುವ  ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ವಯಂ ಸೇವಕರು   

ಚಾಮರಾಜನಗರ: ಅಳಿವಿನಂಚಿನಲ್ಲಿರುವ ರಣಹದ್ದುಗಳ ಸಂಖ್ಯೆಯನ್ನು ಲೆಕ್ಕಹಾಕಿ, ಅವುಗಳ ಸಂತತಿ ಉಳಿಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ನಿರ್ಧಾರ ಕೈಗೊಳ್ಳುವುದಕ್ಕಾಗಿ ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಅರಣ್ಯ ಇಲಾಖೆಗಳು ನೀಲಗಿರಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ರಣಹದ್ದುಗಳ ಸಮೀಕ್ಷೆಗೆ ಮುಂದಾಗಿವೆ. ‌

ರಾಜ್ಯದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಕೇರಳದ ವಯನಾಡು ವನ್ಯಜೀವಿ ಧಾಮ ಹಾಗೂ ತಮಿಳುನಾಡಿನ ಮಧುಮಲೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಏಕ ಕಾಲಕ್ಕೆ ಶನಿವಾರ (ಫೆ.25) ಮತ್ತು ಭಾನುವಾರ (ಫೆ.26) ರಣಹದ್ದುಗಳ ಸಮೀಕ್ಷೆ ನಡೆಯಲಿದೆ.

ಬಂಡೀಪುರದಲ್ಲಿ ನಡೆಯಲಿರುವ ಸಮೀಕ್ಷೆಯಲ್ಲಿ ಅರಣ್ಯ ಇಲಾಖೆಯ 70 ಮಂದಿ ಸಿಬ್ಬಂದಿ ವನ್ಯಜೀವಿ ತಜ್ಞರು, ಪಕ್ಷಿ ಕುತೂಹಲಿಗಳು ಸೇರಿದಂತೆ 40 ಮಂದಿ ಸ್ವಯಂ ಸೇವಕರು ಸಮೀಕ್ಷೆಯಲ್ಲಿ ಭಾಗವಹಿಸಲಿದ್ದಾರೆ.

ADVERTISEMENT

ಸಮೀಕ್ಷೆ ನಡೆಸುವವರನ್ನು ವಿವಿಧ ತಂಡಗಳನ್ನಾಗಿ ವಿಂಗಡಿಸಲಾಗಿದ್ದು, ಬಂಡೀಪುರ ಹುಲಿ ಸಂರಕ್ಷಿತ ವ್ಯಾಪ್ತಿಯಲ್ಲಿ ಸಮೀಕ್ಷೆಗಾಗಿ 40 ಸ್ಥಳಗಳನ್ನು ಗುರುತಿಸಲಾಗಿದೆ. ನಾಲ್ಕು ಬಗೆಯ ರಣಹದ್ದುಗಳನ್ನು ಗುರುತಿಸುವ ಕೆಲಸವನ್ನು ಅವರು ಮಾಡಲಿದ್ದಾರೆ.

ತರಬೇತಿ: ಎರಡು ದಿನಗಳ ಸಮೀಕ್ಷೆಯಲ್ಲಿ ಭಾಗವಹಿಸುವವರಿಗಾಗಿ ಶುಕ್ರವಾರ ಬಂಡೀಪುರದಲ್ಲಿ ತರಬೇತಿ ನೀಡಲಾಯಿತು. ಸಮೀಕ್ಷಾ ವಿಧಾನಗಳನ್ನು ಅಧಿಕಾರಿಗಳು ಹಾಗೂ ತಜ್ಞರು ವಿವರಿಸಿದ್ದಾರೆ.

ಸಮೀಕ್ಷೆ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಪಿ.ರಮೇಶ್‌ಕುಮಾರ್‌, ‘ದಕ್ಷಿಣ ಭಾರತದ ಮೂರು ರಾಜ್ಯಗಳು ಏಕಕಾಲಕ್ಕೆ ಒಟ್ಟಾಗಿ ಸಮೀಕ್ಷೆ ನಡೆಸಲಿವೆ. ಇಂತಹ ಪ್ರಯತ್ನ ಇದೇ ಮೊದಲು. ಬಂಡೀಪುರದಲ್ಲಿ ಎಷ್ಟು ರಣಹದ್ದುಗಳಿವೆ ಎಂಬ ಮಾಹಿತಿ ಇಲ್ಲ. ಸಮೀಕ್ಷೆಯಿಂದ ಇದು ತಿಳಿಯಲಿದೆ’ ಎಂದರು.

ಇಲಾಖೆ ಸಿಬ್ಬಂದಿಯಲ್ಲದೆ, ಸ್ವಯಂ ಸೇವಕರೂ ಕೂಡ ಸಮೀಕ್ಷೆಯಲ್ಲಿ ಭಾಗವಹಿಸಲಿದ್ದು, ಶುಕ್ರವಾರ ಎಲ್ಲರಿಗೂ ತರಬೇತಿ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಪರಿಸರ ಸಮತೋಲನಕ್ಕೆ ಮುಖ್ಯ

ಬಿಳಿ ಬೆನ್ನಿನ ರಣಹದ್ದು, ಕೆಂಪು ಕತ್ತಿನ ರಣಹದ್ದು ಮತ್ತು ಭಾರತೀಯ ರಣಹದ್ದುಗಳು ಅರಣ್ಯ ಭಾಗದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಈಜಿಪ್ಟಿಯನ್‌ ರಣಹದ್ದುಗಳು, ಕಾಡಿನ ಹೊರಭಾಗದಲ್ಲೂ ಕಾಣಸಿಗುತ್ತವೆ.

ಕೆಲವು ದಶಕಗಳ ಹಿಂದಿನವರೆಗೂ ಸಾಕಷ್ಟು ಸಂಖ್ಯೆಯಲ್ಲಿದ್ದ ರಣಹದ್ದುಗಳು, ಪರಿಸರದ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಇವುಗಳ ಸಂಖ್ಯೆ ಕಡಿಮೆಯಾಗುತ್ತಿವೆ. ಕಡಿಮೆಯಾಗುತ್ತಿವೆ. ಅಳಿವಿನಂಚಿನಲ್ಲಿರುವ ರಣಹದ್ದುಗಳ ಸಂತತಿಯನ್ನು ಉಳಿಸುವುದಕ್ಕಾಗಿ ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವಾಲಯ ‘ರಣಹದ್ದುಗಳ ಸಂರಕ್ಷಣಾ ಕ್ರಿಯಾ ಯೋಜನೆ– 2020-25’ ರೂಪಿಸಿದೆ. ಅದರ ಭಾಗವಾಗಿ ಈ ಸಮೀಕ್ಷೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.