ADVERTISEMENT

ಚಾಮರಾಜನಗರ | ಇಬ್ಬರು ಮಹಿಳೆಯರ ಸಾವು, ಮೃತರ ಸಂಖ್ಯೆ 8ಕ್ಕೆ

700ರ ಗಡಿ ದಾಟಿದ ಕೋವಿಡ್‌; 39 ಮಂದಿಗೆ ಸೋಂಕು, 46 ಮಂದಿ ಗುಣಮುಖ,

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2020, 16:22 IST
Last Updated 1 ಆಗಸ್ಟ್ 2020, 16:22 IST
ಚಾಮರಾಜನಗರದ ಕೋವಿಡ್‌ ಆಸ್ಪತ್ರೆ
ಚಾಮರಾಜನಗರದ ಕೋವಿಡ್‌ ಆಸ್ಪತ್ರೆ   

ಚಾಮರಾಜನಗರ: ಕೋವಿಡ್‌–19ನಿಂದಾಗಿ ಜಿಲ್ಲೆಯಲ್ಲಿ ಮತ್ತಿಬ್ಬರು ಮೃತಪಟ್ಟಿದ್ದಾರೆ. ಈ ಮೂಲಕ, ಸೋಂಕಿನಿಂದಾಗಿ ಪ್ರಾಣಕಳೆದುಕೊಂಡವರ ಸಂಖ್ಯೆ ಎಂಟಕ್ಕೆ ಏರಿದೆ.

ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹನೂರು ತಾಲ್ಲೂಕಿನ ಕೌದಳ್ಳಿ ನಿವಾಸಿ 55 ಮಹಿಳೆಯೊಬ್ಬರು (ರೋಗಿ ಸಂಖ್ಯೆ 90,652) ಶನಿವಾರ ಮುಂಜಾನೆ ನಾಲ್ಕು ಗಂಟೆಗೆ ಮೃತ‍ಪಟ್ಟಿದ್ದಾರೆ. ಇವರು ಜುಲೈ 23ರಂದು ಆಸ್ಪತ್ರೆಗೆ ದಾಖಲಾಗಿದ್ದರು.

ಮೃತಪಟ್ಟ ಮತ್ತೊಬ್ಬರು ಚಾಮರಾಜನಗರದ ಮಹಿಳೆ (ರೋಗಿ ಸಂಖ್ಯೆ 1,35,175). 54 ವರ್ಷದ ಈ ಮಹಿಳೆಗೆ ಕೋವಿಡ್‌ ದೃಢಪಟ್ಟಿತ್ತು. ಆಸ್ಪತ್ರೆಗೆ ಕರೆದುಕೊಂಡು ಬರುವುದಕ್ಕೆ ಮೊದಲೇ ಶನಿವಾರ ಬೆಳಿಗ್ಗೆ 11.30ಕ್ಕೆ ಮನೆಯಲ್ಲೇ ಮೃತಪಟ್ಟಿದ್ದಾರೆ.

ADVERTISEMENT

ಇಬ್ಬರ ಅಂತ್ಯಸಂಸ್ಕಾರವನ್ನು ಸರ್ಕಾರದ ಶಿಷ್ಟಾಚಾರದಂತೆ ನೆರವೇರಿಸಲಾಗಿದೆ.

ಜಿಲ್ಲಾಸ್ಪತ್ರೆಯ ಸರ್ಜನ್‌ ಒಬ್ಬರು ಸೇರಿದಂತೆ 39 ಮಂದಿಗೆ ಕೋವಿಡ್‌–19 ಇರುವುದು ಶನಿವಾರ ದೃಢಪಟ್ಟಿದೆ. 46 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ ವರದಿಯಾದ ಪ್ರಕರಣಗಳ ಸಂಖ್ಯೆ 700ರ ಗಡಿ ದಾಟಿದೆ. ಒಟ್ಟು 708 ಮಂದಿಗೆ ಸೋಂಕು ತಗುಲಿದೆ. ಸೋಂಕು ಮುಕ್ತರಾದವರ ಸಂಖ್ಯೆ 463ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳಿವೆ. ಆರು ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶನಿವಾರ ಜಿಲ್ಲೆಯಲ್ಲಿ 593 ಪರೀಕ್ಷೆಗಳನ್ನು ನಡೆಸಲಾಗಿದ್ದು, 204 ಗಂಟಲು ದ್ರವದ ಮಾದರಿಗಳನ್ನು ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಪಡಿಸಲಾಗಿದೆ. ರ‍್ಯಾಪಿಡ್‌ ಆ್ಯಂಟಿಜೆನ್‌ ಕಿಟ್‌ ಮೂಲಕ 389 ಪರೀಕ್ಷೆಗಳನ್ನು ನಡೆಸಲಾಗಿದೆ. ಆರ್‌ಟಿಪಿಸಿಆರ್‌ ಪರೀಕ್ಷೆಯಲ್ಲಿ 26 ಮಂದಿಗೆ ಸೋಂಕು ತಗುಲಿದೆ. ರ‍್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆಯಲ್ಲಿ 13 ಮಂದಿಗೆ ಕೋವಿಡ್‌–19 ದೃಢಪಟ್ಟಿದೆ. 554 ಮಂದಿಯ ವರದಿ ನೆಗೆಟಿವ್‌ ಬಂದಿದೆ.

ದೃಢಪಟ್ಟ 39 ಪ್ರಕರಣಗಳಲ್ಲಿ ಪೈಕಿ ಕೊಳ್ಳೇಗಾಲ ತಾಲ್ಲೂಕಿನಲ್ಲಿ 13, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಒಂಬತ್ತು, ಚಾಮರಾಜನಗರ ತಾಲ್ಲೂಕಿನಲ್ಲಿ ಎಂಟು, ಯಳಂದೂರು ತಾಲ್ಲೂಕಿನಲ್ಲಿ ಏಳು ಹಾಗೂ ಹನೂರು ತಾಲ್ಲೂಕಿನಲ್ಲಿ ಎರಡು ಪ್ರಕರಣಗಳು ವರದಿಯಾಗಿವೆ.

ಗುಣಮುಖರಾದವರ ಪೈಕಿ ಕೊಳ್ಳೇಗಾಲ ತಾಲ್ಲೂಕಿನ 17 ಮಂದಿ, ಚಾಮರಾಜನಗರ ತಾಲ್ಲೂಕಿನ 15, ಗುಂಡ್ಲುಪೇಟೆ ತಾಲ್ಲೂಕಿನ ಆರು, ಹನೂರು ತಾಲ್ಲೂಕಿನ ಒಬ್ಬರು ಇದ್ದಾರೆ. ಹೊರ ಜಿಲ್ಲೆಗಳ ಆರು ಏಳು ಮಂದಿ ಸೋಂಕು ಮುಕ್ತರಾಗಿದ್ದಾರೆ.

ಅಂತ್ಯಕ್ರಿಯೆ ಬಳಿಕ ಕೋವಿಡ್ ದೃಢ, ಭಯದಲ್ಲಿ ಜನ

ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯಳಂದೂರಿನ ವೃದ್ಧರೊಬ್ಬರು ಶನಿವಾರ ಬೆಳಿಗ್ಗೆ ಮೃತಪಟ್ಟಿದ್ದು, ಮಧ್ಯಾಹ್ನ ಕುಟುಂಬದ ಸದಸ್ಯರು ಅಂತ್ಯಸಂಸ್ಕಾರ ನಡೆಸಿದ ನಂತರ ಕೋವಿಡ್‌–19 ಪರೀಕ್ಷೆಯ ವರದಿ ಬಂದಿದ್ದು, ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಕುಟುಂಬಸ್ಥರು, ಸಂಬಂಧಿಕರು ಹಾಗೂ ಸುತ್ತಮುತ್ತಲಿನವರು ಸೇರಿದಂತೆ 150ಕ್ಕೂ ಹೆಚ್ಚು ಜನರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದು, ಈಗ ಅವರೆಲ್ಲರೂ, ಕ್ವಾರಂಟೈನ್‌ಗೆ ಒಳಗಾಗಿ ಕೋವಿಡ್‌ ಪರೀಕ್ಷೆಗೆ ಒಳಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಯಳಂದೂರು ಪ‍ಟ್ಟಣದ ಬಳೇಪೇಟೆಯ ನಿವಾಸಿ 65 ವರ್ಷದ ವೃದ್ಧರೊಬ್ಬರು ತೀವ್ರವಾದ ಮಧುಮೇಹ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಕಾಲಿನಲ್ಲಿ ಕೀವು ತುಂಬಿತ್ತು. ಇದಕ್ಕೆ ಚಿಕಿತ್ಸೆ ಪಡೆಯುವುದಕ್ಕಾಗಿ ಜುಲೈ 27ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆಗ ನಡೆಸಿರುವ ಆ್ಯಂಟಿಜೆನ್‌ ಪರೀಕ್ಷೆಯಲ್ಲಿ ಕೋವಿಡ್‌ ವರದಿ ನೆಗೆಟಿವ್‌ ಬಂದಿತ್ತು. ಹಾಗಾಗಿ, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಅವರ ಆರೋಗ್ಯ ಸ್ಥಿತಿಯನ್ನು ನೋಡಿದ ಬಳಿಕ ಆರ್‌ಟಿಪಿಸಿಆರ್ ಪರೀಕ್ಷೆಗಾಗಿ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿ ಇನ್ನೂ ಬಂದಿರಲಿಲ್ಲ. ಶನಿವಾರ ಬೆಳಿಗ್ಗೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ.

ಆಸ್ಪತ್ರೆಯ ಆಡಳಿತ, ಆರ್‌ಟಿಪಿಸಿಆರ್‌ ಪರೀಕ್ಷೆಯ ವರದಿ ಬರುವ ಮೊದಲೇ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದೆ.

‘ಕಾಲಿನಲ್ಲಿ ಕೀವು ತುಂಬಿದ್ದ ಯಳಂದೂರು ವ್ಯಕ್ತಿಯು 21ರಂದು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದರು. ಆಸ್ಪತ್ರೆಗೆ ದಾಖಲಾಗಬೇಕು ಎಂದು ವೈದ್ಯರು ಸೂಚಿಸಿದ್ದರು. 27ಕ್ಕೆ ದಾಖಲಾಗಲು ಬಂದಿದ್ದರು. ಅವರಿಗೆ ತೀವ್ರ ಮಧುಮೇಹ, ರಕ್ತದೊತ್ತಡ ಇತ್ತು. ಕಿಡ್ನಿಗೂ ಹಾನಿಯಾಗಿದ್ದವು. ಅಂದು ಆ್ಯಂಟಿಜೆನ್‌ ಕಿಟ್‌ ಮೂಲಕ ಪರೀಕ್ಷೆ ನಡೆಸಿದಾಗ ವರದಿ ನೆಗೆಟಿವ್‌ ಬಂದಿತ್ತು. ಎರಡು ದಿನಗಳ ಬಳಿಕ ಆರ್‌ಟಿಪಿಸಿಆರ್ ಪರೀಕ್ಷೆಗಾಗಿ ಗಂಟಲು ದ್ರವ ಸಂಗ್ರಹಿಸಲಾಗಿತ್ತು. ವರದಿ ಇನ್ನೂ ಬಂದಿರಲಿಲ್ಲ. ಶನಿವಾರ ಮಧ್ಯಾಹ್ನ ವರದಿ ಬಂದಿದೆ. ಅಷ್ಟರಲ್ಲಿ ಅವರ ಕುಟುಂಬದವರು ಅಂತ್ಯಸಂಸ್ಕಾರ ನಡೆಸಿದ್ದಾರೆ. ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದವರ ಪರೀಕ್ಷೆಯನ್ನೂ ನಡೆಸಬೇಕಾಗಿದೆ’ ಎಂದು ಜಿಲ್ಲಾ ಸರ್ಜನ್‌ ಡಾ.ಕೃಷ್ಣಪ್ರಸಾದ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಇದು ಕೋವಿಡ್‌ನಿಂದ ಸಂಭವಿಸಿದ ಸಾವು ಎಂದು ಹೇಳಲು ಸಾಧ್ಯವಿಲ್ಲ. ಅವರು ಆರೋಗ್ಯ ಸ್ಥಿತಿ ಪೂರ್ಣವಾಗಿ ಹದಗೆಟ್ಟಿತ್ತು’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.