ಚಾಮರಾಜನಗರ: ನಗರದಲ್ಲಿ ಅ.7ರಂದು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಪರಿಶಿಷ್ಟ ವರ್ಗಗಳ ಹಾಗೂ ಇತರೆ ಸಮಾಜಗಳ ಮುಖಂಡರು ಹಾಗೂ ಸಂಘಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಸಂಬಂಧ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ, ಮೆರವಣಿಗೆಯಲ್ಲಿ ಹೆಚ್ಚಿನ ಕಲಾತಂಡಗಳು ಭಾಗವಹಿಸಬೇಕು, ಆಕರ್ಷಣೀಯವಾಗಿ ಕಾರ್ಯಕ್ರಮ ರೂಪಿಸಬೇಕು.
ವಾಲ್ಮೀಕಿ ಹೆಸರಿನಲ್ಲಿ ನೀಡಲಾಗುವವ ರಾಜ್ಯ ಹಾಗೂ ಜಿಲ್ಲಾಮಟ್ಟದ ಪ್ರಶಸ್ತಿಗೆ ಸಮುದಾಯದ ಅರ್ಹ ವ್ಯಕ್ತಿಗಳನ್ನು ಗುರುತಿಸಿ ಶಿಫಾರಸು ಮಾಡಬೇಕು. ವಾಲ್ಮೀಕಿ ಅವರ ಕುರಿತು ಅಧ್ಯಯನ ಮಾಡಿರುವ ಸಂಪನ್ಮೂಲ ವ್ಯಕ್ತಿಯ ಉಪನ್ಯಾಸ ಆಯೋಜಿಸಬೇಕು, ಮೆರವಣಿಗೆ ಸಾಗುವ ಬೀದಿಯನ್ನು ಸ್ವಚ್ಚಗೊಳಿಸಿ, ತಳಿರು-ತೋರಣಗಳಿಂದ ಅಲಂಕಾರ ಮಾಡಬೇಕು ಎಂದರು.
ಎಸ್.ಎಸ್.ಎಲ್.ಸಿ, ಪಿ.ಯು.ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಮುದಾಯದ ವಿದ್ಯಾರ್ಥಿಗಳು ಹಾಗೂ ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಗೌರವಿಸಬೇಕು. ಜನಪ್ರತಿನಿಧಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು, ಸಿಬ್ಬಂದಿ ಕಾರ್ಯಕ್ರಮದಲ್ಲಿ ಹಾಜರಿರಬೇಕು ಎಂದು ಸೂಚಿಸಿದರು.
ಸಮುದಾಯದ ಮುಖಂಡರು ಮಾತನಾಡಿ, ಸರ್ಕಾರಿ ಕಚೇರಿಗಳಲ್ಲಿ ವಾಲ್ಮೀಕಿ ಭಾವಚಿತ್ರ ಇಲ್ಲವಾದರೆ ಅಳವಡಿಸಬೇಕು, ಮುಂದಿನ ಜಯಂತಿಯ ಹೊತ್ತಿಗೆ ವಾಲ್ಮೀಕಿ ಪ್ರತಿಮೆ ಜಿಲ್ಲಾಡಳಿತ ಭವನದ ಅವರಣದಲ್ಲಿ ಪ್ರತಿಷ್ಠಾಪನೆಯಾಗಲು ಅಗತ್ಯ ಕ್ರಮ ಕೈಗೊಳ್ಳಬೇಕು, ವಾಲ್ಮೀಕಿ ಜಯಂತಿಯಂದು ನಗರದಲ್ಲಿ ಮದ್ಯಪಾನ ನಿಷೇಧಿಸಬೇಕು ಎಂದು ಸಲಹೆ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಮಾತನಾಡಿ, ಜಯಂತಿಯಂದು ಬೆಳಿಗ್ಗೆ ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆ ಹೊರಡಲಿದ್ದು ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಭುವನೇಶ್ವರಿ ವೃತ್ತದ ಪೇಟೆ ಪ್ರೈಮರಿ ಶಾಲೆಯಲ್ಲಿ ಸಮಾಪನಗೊಳ್ಳಲಿದೆ. ಬಳಿಕ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದರು.
ಮೆರವಣಿಗೆಯಲ್ಲಿ ಬೆಳ್ಳಿರಥದಲ್ಲಿ ವಾಲ್ಮೀಕಿ ಭಾವಚಿತ್ರ ಇರಿಸಿ, ಡೊಳ್ಳು ಕುಣಿತ, ನಗಾರಿ, ಪೂಜಾಕುಣಿತ, ಗೊರವರ ಕುಣಿತ, ನಾದಸ್ವರ, ಬೀಸು ಕಂಸಾಳೆ ಸಹಿತ ಹಲವು ಕಲಾತಂಡಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಬೇಕು. ಕಾರ್ಯಕ್ರಮದ ಆಹ್ವಾನ ಪತ್ರಿಕೆಗಳನ್ನು ಶಿಷ್ಠಾಚಾರದ ಪ್ರಕಾರ ಜನಪ್ರತಿನಿಧಿಗಳಿಗೆ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ವಿತರಿಸಿ ಆಹ್ವಾನಿಸಲಾಗುವುದು ಎಂದರು.
ನಗರಸಭೆ ಅಧ್ಯಕ್ಷ ಎಸ್.ಸುರೇಶ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ಹೆಚ್ಚುವರಿ ಎಸ್‌ಪಿ ಎಂ.ಎನ್. ಶಶಿಧರ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಡಿ.ಸಿ.ಶೃತಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಚ್.ಎಸ್. ಬಿಂದ್ಯಾ, ಕೇಂದ್ರ ಬರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಮುಖಂಡರಾದ ಸುರೇಶ್ ನಾಯಕ, ಕೆಲ್ಲಂಬಳ್ಳಿ ಸೋಮನಾಯಕ, ಅರಕಲವಾಡಿ ಸೋಮನಾಯಕ, ವಿರಾಟ್ ಶಿವು, ಚಾ.ಸಿ.ಸೋಮನಾಯಕ, ಬದನಗುಪ್ಪೆ ಶಿವರಾಮು, ಸಿ.ಎಂ.ಕೃಷ್ಣಮೂರ್ತಿ, ನಾಗೇಂದ್ರ ಸೇರಿದಂತೆ ಹಲವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.