
ಗುಂಡ್ಲುಪೇಟೆ: ಪಟ್ಟಣದಲ್ಲಿ ನಾಯಕ ಸಮುದಾಯದಿಂದ ತಾಲೂಕು ಮಟ್ಟದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ವಿಜೃಂಭಣೆಯಿಂದ ಶನಿವಾರ ನಡೆಯಿತು.
ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿ ವಾಲ್ಮೀಕಿ ಭಾವಚಿತ್ರ ಹೊತ್ತ ಬೆಳ್ಳಿ ರಥಕ್ಕೆ ರಾಜನಹಳ್ಳಿ ಗುರುಪೀಠದ ಪ್ರಸನ್ನನಂದಾಪುರಿ ಸ್ವಾಮೀಜಿ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ‘ಮಹಾನ್ ಗ್ರಂಥ ರಾಮಾಯಣವನ್ನು ಮಹರ್ಷಿ ವಾಲ್ಮೀಕಿ ರಚಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರಿದ್ದಾರೆ. ರಾಮಾಯಣದಲ್ಲಿ ಬರುವ ಪ್ರತಿಯೊಂದು ಪಾತ್ರವೂ ಜನರ ಮನಸ್ಸಿನಲ್ಲಿ ಉಳಿಯುವಂತೆ ಬರೆದಿದ್ದಾರೆ’ ಎಂದರು.
ಪ್ರಸ್ತುತ ವಾಲ್ಮೀಕಿ ಸಮುದಾಯದವರು ಆರ್ಥಿಕ, ಶೈಕ್ಷಣಿಕ. ರಾಜಕೀಯವಾಗಿ ಮುಂದೆ ಬರಲು ಸಂಘಟಿತರಾಗಬೇಕು. ಇದರಿಂದ ಮಾತ್ರ ಸಮಾಜದ ಬೆಳವಣಿಗೆ ಸಾಧ್ಯ. ಜೊತೆಗೆ ಪ್ರೇಕ್ಷಕರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿ ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.
ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದ ಶಾಸಕ ಎಚ್.ಎಂ.ಗಣೇಶಪ್ರಸಾದ್, ತಾಲ್ಲೂಕಿನಲ್ಲಿ ಬೃಹತ್ ಸಂಖ್ಯೆಯಲ್ಲಿರುವ ನಾಯಕ ಸಮುದಾಯದವರು ಒಗ್ಗೂಡಿ ವಾಲ್ಮೀಕಿ ಜಯಂತಿ ಆಚರಣೆ ಮಾಡುತ್ತಿರುವುದು ಸಂತಸದ ವಿಚಾರ. ಮಹರ್ಷಿ ವಾಲ್ಮೀಕಿಯ ತತ್ವ ಆದರ್ಶ ಎಲ್ಲರೂ ಪಾಲಿಸಿ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನಕುಮಾರ್ ಮಾತನಾಡಿ, ‘ವಾಲ್ಮೀಕಿ ಮಹರ್ಷಿಗಳು ಚರಿತ್ರೆಕಾರ, ಚಿಂತಕ, ತತ್ವಜ್ಞಾನಿಯಾಗಿ ಮಹಾನ್ ಕಾವ್ಯ ರಾಮಾಯಣ ರಚನೆ ಮಾಡಿದ್ದಾರೆ. ಕಾವ್ಯ ಸೃಷ್ಟಿ ವಿಷಯದಲ್ಲಿ ವಾಲ್ಮೀಕಿ ಅವರಿಗೆ ಸರಿಸಮಾನರು ಮತ್ತೊಬ್ಬರಿಲ್ಲ’ ಎಂದರು.
ಈ ಸಂದರ್ಭದಲ್ಲಿ ನಾಯಕ ಸಮುದಾಯದ ಮುಖಂಡರಾದ ಪಿ.ಗಿರೀಶ್, ಎನ್.ಮಲ್ಲೇಶ್, ಶ್ರೀನಿವಾಸ್ ಕಣ್ಣಪ್ಪ, ಎನ್.ಕುಮಾರ್, ಸುರೇಶ್ ಕಾರ್ಗಳ್ಳಿ, ರಂಗಸ್ವಾಮಿ ನಾಯಕ್, ಆಸ್ಪತ್ರೆ ರಾಮನಾಯಕ, ನಾಗೇಂದ್ರ, ಮಣಿನಾಯಕ ಗೋವಿನಾಯಕ್, ಪ್ರದೀಪ್, ಕ್ರೇಜಿ ನಾಗರಾಜು, ನಾಗೇಂದ್ರ, ಅವ್ವ ಕುಮಾರ್, ಎಂಡಿಎಸ್ ದೊಡ್ಡಸ್ವಾಮಿ, ರಾಜೇಂದ್ರ ವಿ.ನಾಯಕ್, ಸುರೇಶ್ ನಾಯಕ್, ಪುರಸಭಾ ಮಾಜಿ ಅಧ್ಯಕ್ಷ ಶಶಿಧರ್ ಪಿ.ದೀಪು, ಮಧುಸೂಧನ್ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ನಾಯಕ ಸಮುದಾಯದ ಮುಖಂಡರು, ಗಡಿ-ಕಟ್ಟೆ ಮನೆ ಯಜಮಾನರು, ಸಂಘ-ಸಂಸ್ಥೆ ಮುಖಂಡರು ಯುವಕರು ಹಾಜರಿದ್ದರು.
ಪ್ರಮುಖ ಸ್ಥಳಗಳಲ್ಲಿ ಮೆರವಣಿಗೆ
ಹಳೇ ಬಸ್ ನಿಲ್ದಾಣದಿಂದ ಆರಂಭವಾದ ಮೆರವಣಿಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿ ವೀರ ಮದಕರಿ ನಾಯಕ ವೃತ್ತ ಅರಳಿಕಟ್ಟೆ ಅಂಬೇಡ್ಕರ್ ಸರ್ಕಲ್ ಕೊತ್ವಾಲ್ ಚಾವಡಿ ಕೆ.ಆರ್.ಸಿ ರಸ್ತೆ ಮೂಲಕ ಪೇಟೆ ಬೀದಿಯಲ್ಲಿ ಅಂತ್ಯಗೊಂಡಿತು. ಅಲಂಕೃತಗೊಂಡ ವಾಲ್ಮೀಕಿ ಭಾವಚಿತ್ರ ಇರಿಸಿದ ಬೆಳ್ಳಿ ರಥಕ್ಕೆ ಮಾರ್ಗ ಮಧ್ಯದಲ್ಲಿ ಮಹಿಳೆಯರು ಪೂಜೆ ಸಲ್ಲಿಕೆ ಮಾಡಿದರು. ಮೆರಗು ತಂದ ಕಲಾತಂಡಗಳು: ಡೊಳ್ಳು ನಗಾರಿ ಮಾರಿ ಕುಣಿತ ಗಾರಡಿ ಗೊಂಬೆ ಕೇರಳ ವಾದ್ಯ ಮಂಗಳ ವಾದ್ಯ ಡಿ.ಜೆ ಸೇರಿದಂತೆ ಇನ್ನಿತರ ಕಲಾ ತಂಡಗಳು ಮೆರವಣಿಗೆಗೆ ಮೆರಗು ತಂದವು. ವಿವಿಧ ಮಾದರಿಯ ಪೇಟ ಧರಿಸಿ ಡಿ.ಜೆ ಸದ್ದಿಗೆ ಯಜಮಾನರು ವಯಸ್ಕರು ಹಾಗೂ ಯುವ ಸಮೂಹ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.