ADVERTISEMENT

ವರವ ಕೊಡುವ ಮಾತೆ, ಮದ್ದೂರು ವರಮಹಾಲಕ್ಷ್ಮೀ

ಯಳಂದೂರು: ಜಿಲ್ಲೆಯ ಏಕೈಕ ದೇವಿ ದೇವಳಕ್ಕೆ ಮೂರು ಶತಮಾನಗಳ ಚರಿತ್ರೆ

ನಾ.ಮಂಜುನಾಥ ಸ್ವಾಮಿ
Published 30 ಜುಲೈ 2020, 16:39 IST
Last Updated 30 ಜುಲೈ 2020, 16:39 IST
ಯಳಂದೂರು ತಾಲ್ಲೂಕಿನ ಮದ್ದೂರು ಬಳಿಯಲ್ಲಿರುವ ಜಿಲ್ಲೆಯ ಏಕೈಕ ಸರ್ವಾಲಂಕೃತ ವರಮಹಾಲಕ್ಷ್ಮೀ ದೇವಿ
ಯಳಂದೂರು ತಾಲ್ಲೂಕಿನ ಮದ್ದೂರು ಬಳಿಯಲ್ಲಿರುವ ಜಿಲ್ಲೆಯ ಏಕೈಕ ಸರ್ವಾಲಂಕೃತ ವರಮಹಾಲಕ್ಷ್ಮೀ ದೇವಿ   

ಯಳಂದೂರು: ತಾಲ್ಲೂಕಿನ ಮದ್ದೂರು ಸುವರ್ಣಾವತಿ ನದಿಯ ಎಡ ಭಾಗದಲ್ಲಿರುವ ದೇವಿಯ ದೇವಾಲಯ, ಜಿಲ್ಲೆಯ ಏಕೈಕವರಮಹಾಲಕ್ಷ್ಮೀ ದೇವಾಲಯ.

ಬಲ ಭಾಗದಲ್ಲಿ ಲಕ್ಷ್ಮೀಯ ಸೇವೆಗೆ ನಿಂತ ಈಶ್ವರ. ಸುತ್ತಮುತ್ತ ಅಷ್ಟಲಕ್ಷ್ಮಿಯ ಸಾನಿಧ್ಯ.ಇಂತಹ ಹಲವು ವಿಶೇಷತೆಗಳ ಸಿರಿದೇವಿ ನೆಲೆಸಿರುವ ಸುಂದರ ತಾಣವನ್ನುಮೈಸೂರು ಅರಸರ ಕಾಲದಿಂದ ಪೂಜಿಸಿಕೊಂಡು ಬರಲಾಗಿದೆ. ಈ ದೇವಾಲಯಕ್ಕೆ ಈಗ ಮುನ್ನೂರು ವರ್ಷಗಳ ಸಂಭ್ರಮ.

ಸುತ್ತಮುತ್ತಲ ಭಕ್ತರಿಗೆ ಪವಿತ್ರ ಕ್ಷೇತ್ರ. ವಾರದ ದಿನಗಳಲ್ಲಿ ಬಹುತೇಕ ಯುವತಿಯರು ಮತ್ತು ಸುಮಂಗಲಿಯರು ದರ್ಶನಪಡೆಯಲು ಬರುತ್ತಾರೆ.

ADVERTISEMENT

‘ಕ್ಷೇತ್ರದಲ್ಲಿ ಮಂಗಳವಾರ ಮತ್ತು ಶುಕ್ರವಾರ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಹಬ್ಬದಂದು ಮನೆ–ಮನೆಗಳಲ್ಲಿ ಸಂಜೆ ತನಕ ಉಪವಾಸ ಇದ್ದು, ದೇವಿಯನ್ನು ಕಲಶ ಮತ್ತು ವಿಗ್ರಹಗಳಲ್ಲಿ ಆವಾಹನೆ ಮಾಡಿ ಅರ್ಚನೆ ಮಾಡುತ್ತಾರೆ. ವಿವಿಧಬಗೆಯ ಹಣ್ಣು, ಕಲಶದಲ್ಲಿ ಅಕ್ಕಿ, ಖರ್ಜೂರ, ಗೋಡಂಬಿ, ದ್ರಾಕ್ಷಿ, ಬದಾಮಿ,ಕಲ್ಲುಸಕ್ಕರೆ ಇಟ್ಟು ನೈವೇದ್ಯ ಮಾಡಲಾಗುತ್ತದೆ ’ ಎಂದು ಅರ್ಚಕ ನಾಗಶಯನ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ದೇವರ ಮನೆಯಲ್ಲಿ ಶುಕ್ರವಾರ ಚಿನ್ನ ಇಲ್ಲವೇ ಬೆಳ್ಳಿಯ ಲಕ್ಷ್ಮಿ ದೇವಿಯ ಮುಖವಾಡಇರಿಸಲಾಗುತ್ತದೆ. ತೆಂಗಿನಕಾಯಿಗೆ ಮೂಗು ಕಣ್ಣು, ಕಿವಿ ರೂಪಿಸಿ, ಒಡವೆಗಳಿಂದಅಲಂಕರಿಸಲಾಗುತ್ತದೆ. ಇದಕ್ಕೆ ಸೀರೆ ಉಡಿಸಿ ಸರ್ವಾಲಂಕೃತ ಉಡುಗೆ ತೊಡುಗೆಗಳಿಂದ ಸಿಂಗರಿಸಲಾಗುತ್ತದೆ. ದೇವಿಯ ಪಕ್ಕದಲ್ಲಿ ದೀಪಗಳನ್ನು ಹಚ್ಚಿ ಪ್ರಾರ್ಥಿಸಲಾಗುತ್ತದೆ’ಎಂದು ಪಟ್ಟಣದ ಗೃಹಿಣಿ ಶೋಭಾ ಆಚರಣೆ ವಿಧಾನಗಳನ್ನು ತಿಳಿಸಿದರು.

ಹತ್ತಾರು ಹೆಸರು:ದೇವಿಯ ಮೂರ್ತಿಗೆ ಅರಿಸಿನ, ಕುಂಕುಮ, ಹೂವು, ಪತ್ರೆ ಮತ್ತು ಅಕ್ಷತೆಯಿಂದ ಪೂಜೆಯನ್ನು ಸಲ್ಲಿಸಲಾಗುತ್ತದೆ. ನೈವೇದ್ಯದಲ್ಲಿ ಅಲಂಕರಿಸಿ ಅರಿಸಿನ ದಾರವನ್ನು ಹೆಣ್ಣುಮಕ್ಕಳುಹೂವನ್ನು ಕಟ್ಟಿ, ಹಿರಿಯರಿಂದ ಕಂಕಣದಂತೆ ಬಲಗೈಗೆ ಕಟ್ಟಿಸಿಕೊಳ್ಳುವ ವಾಡಿಕೆ ಇದೆ.

‘ಇಲ್ಲಿನ ವರಮಹಾಲಕ್ಷ್ಮೀಯನ್ನು ಹಲವಾರು ಹೆಸರಿನಿಂದ ಪೂಜಿಸಲಾಗುತ್ತದೆ. ರಮೆ,ಸರ್ವಮಂಗಳೆ, ಕಮಲವಾಸಿನಿ, ಮನ್ಮಥಜನನಿ, ವಿಷ್ಣುವಲ್ಲಭೆ, ಕ್ಷೀರಾಬ್ಧಿಕನ್ನಿಕೆ,ಲೋಕಮಾತೆ, ಭಾರ್ಗವಿ, ಪದ್ಮಹಸ್ತೆ, ಪುಷ್ಪೆ ಮೊದಲಾದ ನಾಮಗಳಿಂದ ಸ್ತೋತ್ರ, ಪಠಣನೆರವೇರಿಸಲಾಗುತ್ತದೆ’ ಎನ್ನುತ್ತಾರೆ ಅರ್ಚಕರು.

ಸರಳವಾಗಿ ಆಚರಿಸೋಣ: ‘ಕೋವಿಡ್‌–19 ಕಾರಣದಿಂದ ದೇವಾಲಯದಲ್ಲಿ ವಿಶೇಷ ಪೂಜೆ ಇರುವುದಿಲ್ಲ. ಈ ವರ್ಷ ಸರಳವಾಗಿ ಮನೆಗಳಲ್ಲಿ ಇದ್ದು ವರ ಮಹಾಲಕ್ಷ್ಮೀಯನ್ನು ಆರಾಧಿಸಿ, ಸೋಂಕು ನಿರ್ಮೂಲನೆಗಾಗಿ ಎಲ್ಲರೂ ಪ್ರಾರ್ಥಿಸೋಣ’ ಎಂಬುದು ಅರ್ಚಕ ನಾಗಶಯನ ಅವರ ಮನವಿ.

ವರಮಹಾಲಕ್ಷ್ಮೀ ಹಬ್ಬದ ವಿಶೇಷ

ಧನ, ಧಾನ್ಯ, ಸುಖ, ನೆಮ್ಮದಿಯನ್ನು ಅಪೇಕ್ಷಿಸಿ ಸುಮಂಗಲಿಯರು ಮಾಡುವ ವ್ರತವೇವರಮಹಾಲಕ್ಷ್ಮೀ ಪೂಜೆ. ಶ್ರಾವಣ ಮಾಸದ ಹುಣ್ಣಿಮೆಯ ಹಿಂದಿನ ಶುಕ್ರವಾರ ಇದನ್ನುಆಚರಿಸುತ್ತಾರೆ. ಒಂದೊಮ್ಮೆ ಶುಕ್ರವಾರದ ದಿನವೇ ಪೌರ್ಣಮಿ ಬಂದರೆ ಅಂದೇಆಚರಿಸಬೇಕು.

ಚಾರುಮತಿ ಎಂಬ ಗೃಹಿಣಿ ಈ ವ್ರತವನ್ನು ಆಚರಿಸಿ ಅಷ್ಟಲಕ್ಷ್ಮಿಯರನ್ನು ಒಲಿಸಿಕೊಂಡು ಸಕಲ ಐಶ್ವರ್ಯವನ್ನು ಪಡೆದಳೆಂದು ಪುರಾಣ ಹೇಳುತ್ತದೆ.

ಈಗ ಹಬ್ಬದ ವ್ಯಾಪ್ತಿ ವಿಸ್ತರಿಸಿದ್ದು, ವ್ರತವಾಗಿ ಮಾತ್ರವಲ್ಲದೆ, ವ್ಯಾಪಾರ ವ್ಯವಹಾರಗಳಲ್ಲಿಯೂ ಇದಕ್ಕೆ ಮಹತ್ವ ದೊರೆಕಿದೆ. ಒಳ್ಳೆಯ ಕೆಲಸಗಳನ್ನು ಈ ದಿನ ಆರಂಭಿಸಿದರೆ ಶುಭವಾಗುವಾಗುತ್ತದೆ ಎಂಬ ನಂಬಿಕೆಯೂ ಜನರಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.