ADVERTISEMENT

ಸಕಲಕಲಾವಲ್ಲಭನಾಗಿದ್ದ ಕಾಡುಗಳ್ಳ ವೀರಪ್ಪನ್ ಸಹಚರ ಬಿಲ್ವೇಂದ್ರನ್‌!

ಪಾಲಾರ್‌ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ, 27 ವರ್ಷಗಳಿಂದ ಜೈಲುವಾಸಿ

ಬಿ.ಬಸವರಾಜು
Published 20 ಆಗಸ್ಟ್ 2020, 11:53 IST
Last Updated 20 ಆಗಸ್ಟ್ 2020, 11:53 IST
ಮಾರ್ಟಳ್ಳಿಯಲ್ಲಿ ಬಿಲ್ವೇಂದ್ರನ್‌ ವಾಸವಿದ್ದ ಮನೆ
ಮಾರ್ಟಳ್ಳಿಯಲ್ಲಿ ಬಿಲ್ವೇಂದ್ರನ್‌ ವಾಸವಿದ್ದ ಮನೆ   

ಹನೂರು: ಕಾಡುಗಳ್ಳ ವೀರಪ್ಪನ್‌ನೊಂದಿಗೆ ಗುರುತಿಸಿಕೊಂಡು, 1993ರ ಏಪ್ರಿಲ್‌ 3ರಂದು ತಾಲ್ಲೂಕಿನ ಗಡಿಭಾಗದ ಪಾಲಾರ್‌ನ ಸಮೀಪದ ಸೋರೆಕಾಯಿಮಡು ಎಂಬಲ್ಲಿ ಸಂಭವಿಸಿ‌ದ್ದ ನೆಲಬಾಂಬ್‌ ಸ್ಫೋಟ ಪ್ರಕರಣದ ಅಪರಾಧಿಗಳಲ್ಲಿ ಒಬ್ಬನಾಗಿದ್ದ ಬಿಲ್ವೇಂದ್ರನ್‌, 27 ವರ್ಷಗಳಿಂದ ಜೈಲುವಾಸಿಯಾಗಿದ್ದ.

ಅನಾರೋಗ್ಯದಿಂದ ಬುಧವಾರ ರಾತ್ರಿ ಮೈಸೂರಿನ ಕೆ.ಆರ್‌.ಆಸ್ಪತ್ರೆಯಲ್ಲಿ ಸಾವಿಗೀಡಾಗಿರುವ ಬಿಲ್ವೇಂದ್ರನ್‌ ಮೂಲತಃ ತಾಲ್ಲೂಕಿನ ಮಾರ್ಟಳ್ಳಿಯವನು. ಆತನ ಪತ್ನಿ, ಇಬ್ಬರು ಹೆಣ್ಣುಮಕ್ಕಳು ಅಲ್ಲಿಯೇ ನೆಲೆಸಿದ್ದಾರೆ. ನಿಧನ ಸುದ್ದಿ ತಿಳಿಯುತ್ತಿದ್ದಂತೆಯೇ ಕುಟುಂಬದವರಲ್ಲಿ ಶೋಕ ಮಡುಗಟ್ಟಿದೆ.

ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದ ಬಿಲ್ವೇಂದ್ರನ್‌ ಗ್ರಾಮದಲ್ಲಿ ಸಕಲಕಲಾವಲ್ಲಭ ಎಂದೇ ಗುರುತಿಸಿಕೊಂಡಿದ್ದ ಎಂದು ನೆನಪಿಕೊಳ್ಳುತ್ತಾರೆ ಮಾರ್ಟಳ್ಳಿ ಗ್ರಾಮದ ಹಿರಿಯರು. 35 ವರ್ಷಗಳ ಹಿಂದೆ ಮಾರ್ಟಳ್ಳಿ ವ್ಯಾಪ್ತಿಯಲ್ಲಿ ಇಬ್ಬರ ಬಳಿ ಬೈಕ್‌ ಇತ್ತು. ಒಬ್ಬರು ಸ್ಥಳೀಯ ಚರ್ಚ್‌ನ ಧರ್ಮಗುರು. ಹಾಗೂ ಇನ್ನೊಬ್ಬರು ಗ್ರಾಮದ ಮೊರೀಸ್‌ ಗೌಂಡರ್‌ ಅವರ ಮಗನಾದ ಬಿಲ್ವೇಂದ್ರನ್‌. ವ್ಯವಸಾಯದಿಂದ ಹಿಡಿದು ವಿದ್ಯುತ್‌ ಉಪಕರಣಗಳ ರಿಪೇರಿವರೆಗೆ ಎಲ್ಲ ಕೆಲಸಗಳನ್ನು ಬಿಲ್ವೇಂದ್ರನ್‌ ಮಾಡುತ್ತಿದ್ದ. ಎಲೆಕ್ಟ್ರೀಷಿಯನ್‌ ಆಗಿಯೇ ಹೆಚ್ಚು ಗುರುತಿಸಿಕೊಂಡಿದ್ದ.

ADVERTISEMENT

1991–92ರ ಅವಧಿಯಲ್ಲಿ ಆಕಸ್ಮಿಕವಾಗಿ ವೀರಪ್ಪನ್‌ ಗುಂಪಿನೊಂದಿಗೆ ಸೇರಿಕೊಂಡ ಎಂದು ಹೇಳುತ್ತಾರೆ ಊರಿನ ಹಿರಿಯರು.

ಮಾರ್ಟಳ್ಳಿ ಭಾಗದ ಅರಣ್ಯ ಪ್ರದೇಶಕ್ಕೆ ವೀರಪ್ಪನ್‌ ಬಂದಿದ್ದಾಗ, ಬಿಲ್ವೇಂದ್ರನ್‌ ದಂತಚೋರನನ್ನು ಭೇಟಿಯಾಗಿದ್ದ. ಅವನ ಮಾತಿಗೆ ಮರುಳಾಗಿ ಆತನ ಗುಂಪು ಸೇರಿದ್ದ. ಆ ಬಳಿಕ ವೀರಪ್ಪನ್‌ ಎಸಗಿದ್ದ ಪೈಶಾಚಿಕ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂಬ ಮಾತುಗಳೂ ಇವೆ.

1993ರ ಏಪ್ರಿಲ್‌ 9ರಂದು ಪಾಲಾರ್‌ ಬಳಿ ಬರುತ್ತಿದ್ದ ಎಸ್‌ಟಿಎಫ್‌ ತಂಡವನ್ನು ಗುರಿಯಾಗಿಸಿಕೊಂಡು ವೀರಪ್ಪನ್‌ ನೆಲಬಾಂಬ್‌ ಸ್ಪೋಟಿಸಿದ್ದ. ಇದರಲ್ಲಿ ಪೊಲೀಸರು, ಅರಣ್ಯ ಸಿಬ್ಬಂದಿ ಸೇರಿದಂತೆ 22 ಮಂದಿ ಮೃತಪಟ್ಟಿದ್ದರು. ಹಲವರು ಗಾಯಗೊಂಡಿದ್ದರು.

ಸಂದನಪಾಳ್ಯ ಗ್ರಾಮದ ಜ್ಞಾನಪ್ರಕಾಶ್‌, ವಡ್ಡರದೊಡ್ಡಿ ಗ್ರಾಮದ ಸೈಮನ್‌, ಮಾರ್ಟಳ್ಳಿಯ ಬಿಲ್ವೇಂದ್ರನ್‌ ಮತ್ತು ಗೋಪಿನಾಥಂ ಬಳಿಯ ತದೂರು ಗ್ರಾಮದ ಮೀಸೆಕಾರಮಾದಯ್ಯ ಅವರು ಭಾಗಿಯಾಗಿದ್ದರು ಎಂದು ಆರೋಪಿಸಲಾಗಿತ್ತು.

ಮರಣದಂಡನೆಯಿಂದ ಜೀವಾವಧಿ ಶಿಕ್ಷೆಗೆ: ಮಹದೇಶ್ವರ ಬೆಟ್ಟದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 1993ರ ಮೇ ತಿಂಗಳಲ್ಲಿ ಬಿಲ್ವೇಂದ್ರನ್‌, ಸೈಮನ್‌ ಸೇರಿದಂತೆ ಇತರರನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿ 124 ಆರೋಪಿಗಳನ್ನು ಹೆಸರಿಸಲಾಗಿತ್ತು.ಎಂಟು ವರ್ಷಗಳ ವಿಚಾರಣೆಯ ಬಳಿಕ ಮೈಸೂರಿನ ಟಾಡಾ ನ್ಯಾಯಾಲಯ ಈ ನಾಲ್ವರು ಸೇರಿದಂತೆ 16 ಮಂದಿಗೆ ಜೀವಮಾನ ಪೂರ್ಣ ಶಿಕ್ಷೆ ವಿಧಿಸಿ ಆದೇಶಿಸಿತ್ತು.

ಈ ಆದೇಶವನ್ನುಜ್ಞಾನಪ್ರಕಾಶ್, ಸೈಮನ್‌, ಬಿಲ್ವೇಂದ್ರನ್‌ ಮತ್ತು ಮೀಸೆಕಾರಮಾದಯ್ಯ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಹೈಕೋರ್ಟ್‌ ಜೀವಾವಧಿ ಶಿಕ್ಷೆಯನ್ನು ಮರಣದಂಡನೆಗೆ ಪರಿವರ್ತಿಸಿ ತೀರ್ಪು ನೀಡಿತ್ತು. ಕ್ಷಮಾದಾನಕ್ಕಾಗಿ ರಾಷ್ಟ್ರಪತಿ ಅವರಿಗೆ ಅರ್ಜಿ ಸಲ್ಲಿಸಿದ್ದರು. 2013ರ ಫೆಬ್ರುವರಿಯಲ್ಲಿ ಅಂದಿನ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಅರ್ಜಿಗಳನ್ನು ತಿರಸ್ಕರಿಸಿದ್ದರು. ನಂತರ ಇವರು ಸುಪ್ರೀಂ ಕೋರ್ಟ್‌ನ ಕದ ತಟ್ಟಿದ್ದರು. ಸುಪ್ರೀಂ ಕೋರ್ಟ್‌, ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿತ್ತು.

ಇದೇ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಸೈಮನ್‌,ವರ್ಷದ ಹಿಂದೆ ಕಿಡ್ನಿ ವೈಫಲ್ಯದಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದ.

ಬಿಲ್ವೇಂದ್ರನ್‌ಗೆ ಒಬ್ಬ ಪುತ್ರ ಹಾಗೂ ಇಬ್ಬರು ಪುತ್ರಿಯರು. ಐದು ವರ್ಷಗಳ ಹಿಂದೆ ಮಗನ ಮದುವೆಗಾಗಿ ಪೆರೋಲ್‌ ಮೇಲೆ ಬಿಡುಗಡೆಯಾಗಿ ಬಂದಿದ್ದ. ಈ ವರ್ಷದ ಮಾರ್ಚ್‌ ತಿಂಗಳಲ್ಲಿ ಮಗ ಮೃತಪಟ್ಟಿದ್ದಾಗಲೂ ಪೆರೋಲ್‌ ಮೇಲೆ ಬಂದಿದ್ದ. ಆತನ ಪತ್ನಿ ಹಾಗೂ ಒಬ್ಬ ಮಗಳು ಜೊತೆಗೆ ವಾಸಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.