ADVERTISEMENT

ಹುಲಿಸಂರಕ್ಷಿತ ಪ್ರದೇಶವಾದರೆ ಸ್ಥಳೀಯರಿಗೆ ತೊಂದರೆಯಿಲ್ಲ: ಡಿಸಿಎಫ್

ಮಲೆ ಮಹದೇಶ್ವರ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶ: ಸಾಧಕ, ಬಾಧಕಗಳ ಚರ್ಚೆ

​ಪ್ರಜಾವಾಣಿ ವಾರ್ತೆ
Published 28 ಮೇ 2022, 16:24 IST
Last Updated 28 ಮೇ 2022, 16:24 IST
ಹನೂರು ತಾಲ್ಲೂಕಿನ ಮಹದೇಶ್ವರ ಬೆಟ್ಟದ ಸಾಲೂರು ಮಠದಲ್ಲಿ ಮಲೆಮಹದೇಶ್ವರ ವನ್ಯಧಾಮವನ್ನು ಹುಲಿ ಸಂರಕ್ಷಿತ ಘೋಷಣೆ ಸಂಬಂಧ ಶನಿವಾರ ನಡೆದ ಸಭೆಯಲ್ಲಿ ಡಿಸಿಎಫ್ ಏಡುಕುಂಡಲು ಮಾತನಾಡಿದರು.
ಹನೂರು ತಾಲ್ಲೂಕಿನ ಮಹದೇಶ್ವರ ಬೆಟ್ಟದ ಸಾಲೂರು ಮಠದಲ್ಲಿ ಮಲೆಮಹದೇಶ್ವರ ವನ್ಯಧಾಮವನ್ನು ಹುಲಿ ಸಂರಕ್ಷಿತ ಘೋಷಣೆ ಸಂಬಂಧ ಶನಿವಾರ ನಡೆದ ಸಭೆಯಲ್ಲಿ ಡಿಸಿಎಫ್ ಏಡುಕುಂಡಲು ಮಾತನಾಡಿದರು.   

ಹನೂರು: ಮಲೆಮಹದೇಶ್ವರ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಮಾಡುವ ಸಂಬಂಧ ಚರ್ಚಿಸಲು ತಾಲ್ಲೂಕಿನ ಮಹದೇಶ್ವರ ಬೆಟ್ಟದ ಸಾಲೂರು ಮಠದಲ್ಲಿ ಶನಿವಾರ ಸಭೆ ನಡೆಯಿತು.

ಮಹದೇಶ್ವರ ಬೆಟ್ಟ, ಪೊನ್ನಾಚಿ ಗ್ರಾಮಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಇಂಡಿಗನತ್ತ ಗ್ರಾಮದ ಬೇರ್ಪುಟ್ಟ ತಂಬಡಿ‌ ಮಾತನಾಡಿ, ‘ಬೆಟ್ಟದ ಸುತ್ತಮುತ್ತ 33 ಗ್ರಾಮಗಳ‌ ಜನರು ಜಾನುವಾರು ಸಾಕಾಣಿಕೆಯನ್ನೇ ಮುಖ್ಯ ಕಸುಬನ್ನಾಗಿ ಮಾಡಿಕೊಂಡಿದ್ದಾರೆ. ಬೆಟ್ಟದ ವ್ಯಾಪ್ತಿ ಹುಲಿ ಸಂರಕ್ಷಿತ ಪ್ರದೇಶವಾದರೆ ತಮ್ಮ ಕಸುಬನ್ನು ಬಿಟ್ಟು ಕೂಲಿ ಕೆಲಸಕ್ಕೆ ತಮಿಳುನಾಡಿಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ’ ಎಂದರು.

ADVERTISEMENT

ದೊಡ್ಡಾಣೆ ಗ್ರಾಮ ಮಾದೇವ ಮಾತನಾಡಿ, ‘ಮಹದೇಶ್ವರರಿಗೆ ಸಂಬಂಧಿಸಿದ ಸಣ್ಣ ಸಣ್ಣ ದೇವಾಲಯಗಳು ಅರಣ್ಯದೊಳಗೆ ಸಾಕಷ್ಟಿವೆ. ಹುಲಿ ಸಂರಕ್ಷಿತ ಪ್ರದೇಶವಾದರೆ ನಾವು ಪೂಜೆ ಮಾಡುವ ಅವಕಾಶ ಇರುವುದಿಲ್ಲ, ಅಧಿಕಾರಿಗಳು ಇದರ ಬಗ್ಗೆ ಸೂಕ್ಷ್ಮವಾಗಿ ಪರಿಶೀಲಿಸಬೇಕು ’ಎಂದು ಆಗ್ರಹಿಸಿದರು.

‘ಈ ಭಾಗದಲ್ಲಿ ಗ್ರಾಮಗಳು ಅರಣ್ಯದೊಳಗಿರುವುದರಿಂದ ಸಮರ್ಪಕ ರಸ್ತೆಗಳಿಲ್ಲ, ವಿದ್ಯುತ್ ಸೌಲಭ್ಯವಿಲ್ಲ ಇಂದಿಗೂ ಜನರು ರಾತ್ರಿಯಾದರೆ ಕಗ್ಗತ್ತಲಿನಲ್ಲೇ ಕಳೆಯುವಂತಾಗಿದೆ’ ಎಂದು ಇಂಡಿಗನತ್ತ ಗ್ರಾಮದ ಜಗದೀಶ್ ಆರೋಪಿಸಿದರು.

ಬೇಡಗಂಪಣ ಸಮುದಾಯದ ಅಧ್ಯಕ್ಷ ಪುಟ್ಟಣ್ಣ ಮಾತನಾಡಿ,‘ಮೀಸಲು ಅರಣ್ಯ ಪ್ರದೇಶವಾಗಿದ್ದ ಮಲೆಮಹದೇಶ್ವರ ಅರಣ್ಯ ವನ್ಯಧಾಮವಾದ ಇಲ್ಲಿನ ಜನರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ, ಹುಲಿ ಸಂರಕ್ಷಿತ ಪ್ರದೇಶವಾದರೆ ಜನರು ಮತ್ತಷ್ಟು ತೊಂದರೆಗೆ ಸಿಲುಕುತ್ತಾರೆ’ ಎಂದರು.

ಮಲೆಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ಮಾತನಾಡಿ, ‘ವನ್ಯಧಾಮ ಹುಲಿ ಸಂರಕ್ಷಿತ ಪ್ರದೇಶವಾಗಿರುವುದರಿಂದ ಸ್ಥಳೀಯರಿಗೆ ಯಾವುದೇ ತೊಂದರೆಯಾಗುವುದಿಲ್ಲ. ರಾತ್ರಿ ಸಂಚಾರ ಹಾಗೂ ಬಾಗಿಲುಗಳನ್ನು ನಿರ್ಮಿಸುವುದಾಗಲಿ ಮತ್ತು ಪಾದಯಾತ್ರಗೆ ಬರುವ ಭಕ್ತರಿಗೆ ಯಾವುದೇ ನಿರ್ಬಂಧ ವಿಧಿಸುವುದಿಲ್ಲ. ಮಹದೇಶ್ವರ ಬೆಟ್ಟ ಸುತ್ತಮುತ್ತಲಿನ ಗ್ರಾಮಗಳು, ಸ್ಥಿತಿಗತಿಗಳ ಬಗ್ಗೆ ಮಾಹಿತಿ ಇರುವುದರಿಂದ ಸ್ಥಳೀಯ ರೈತರಿಗೆ ತೊಂದರೆ ನೀಡುವ ಯಾವುದೇ ಉದ್ದೇಶವಿಲ್ಲ.

ವನ್ಯಧಾಮ ಹುಲಿ ಸಂರಕ್ಷಿತ ಪ್ರದೇಶವಾಗುವುದರಿಂದ ಬರುವ ಅನುದಾನವನ್ನು ಬಳಸಿ ಅರಣ್ಯದೊಳಗಿರುವ ಗ್ರಾಮಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಮಾನವ ಮತ್ತು ವನ್ಯಜೀವಿ ಸಂಘರ್ಷ ತಪ್ಪಲಿದೆ. ಇದರ ಜತೆಗೆ ಸ್ಥಳೀಯರಿಗೆ ಉದ್ಯೋಗ ಸಿಗಲಿದೆ. ಅರಣ್ಯದೊಳಗಿರುವ ಗ್ರಾಮಗಳಿಗೆ ಕಚ್ಚಾ ರಸ್ತೆ ನಿರ್ಮಾಣಕ್ಕೂ ಕ್ರಮ ವಹಿಸಲಾಗುವುದು’ ಎಂದರು.

ಸಾಲೂರು ಮಠದ ಶಾಂತಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ‘ವನ್ಯಧಾಮ ಹಾಗೂ ಹುಲಿ ಸಂರಕ್ಷಿತ ಪ್ರದೇಶಗಳಿಗೆ ಪ್ರತ್ಯೇಕ ನಿಯಮಗಳಿರುವುದಿಲ್ಲ. ಆದ್ದರಿಂದ ಅರಣ್ಯದೊಳಗಿನ ಜನರು ಯಾವುದೇ ಭಯ ಪಡುವ ಅಗತ್ಯವಿಲ್ಲ. ಗ್ರಾಮಗಳಿಗೆ ರಸ್ತೆ ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸಲು ಅರಣ್ಯ ಇಲಾಖೆ ಮುಂದಾಗಬೇಕು’ ಎಂದರು.

ಈ ಸಂದರ್ಭದಲ್ಲಿ ಮಹದೇಶ್ವರ ಬೆಟ್ಟ ಗ್ರಾಮಪಂಚಾಯಿತಿ ಅಧ್ಯಕ್ಷ ಕುಮಾರ್, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್, ಪೊನ್ನಾಚಿ ಮಹಾದೇವಸ್ವಾಮಿ, ವಲಯ ಅರಣ್ಯಾಧಿಕಾರಿಗಳಾದ ಬಸವರಾಜು, ಭಾರತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.