ADVERTISEMENT

ದಲಿತರ ಸ್ಮಶಾನ ಒತ್ತುವರಿ: ರುದ್ರಭೂಮಿಯಲ್ಲೇ ಗ್ರಾಮಸ್ಥರ ಪ್ರತಿಭಟನೆ

ಉತ್ತಂಬಳ್ಳಿಯಲ್ಲಿ ದಲಿತರ ಸ್ಮಶಾನಭೂಮಿ ಅತಿಕ್ರಮಣ: ಆರೋಪ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 19:45 IST
Last Updated 1 ಡಿಸೆಂಬರ್ 2019, 19:45 IST
ದಲಿತರ ಸ್ಮಶಾನವನ್ನು ಒತ್ತುವರಿ ಮಾಡಿಕೊಂಡಿದ್ದಾಗಿ ಆರೋಪಿಸಿ ಉತ್ತಂಬಳ್ಳಿ ಗ್ರಾಮದ ಗ್ರಾಮಸ್ಥರು ರುದ್ರಭೂಮಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು
ದಲಿತರ ಸ್ಮಶಾನವನ್ನು ಒತ್ತುವರಿ ಮಾಡಿಕೊಂಡಿದ್ದಾಗಿ ಆರೋಪಿಸಿ ಉತ್ತಂಬಳ್ಳಿ ಗ್ರಾಮದ ಗ್ರಾಮಸ್ಥರು ರುದ್ರಭೂಮಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು   

ಕೊಳ್ಳೇಗಾಲ: ದಲಿತರ ಸ್ಮಶಾನವನ್ನು ಒತ್ತುವರಿ ಮಾಡಿಕೊಂಡಿದ್ದಾಗಿ ಆರೋಪಿಸಿ ತಾಲ್ಲೂಕಿನ ಉತ್ತಂಬಳ್ಳಿ ಗ್ರಾಮಸ್ಥರು ರುದ್ರಭೂಮಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.

ಗ್ರಾಮದ ಹೊರವಲಯದಲ್ಲಿರುವ ದಲಿತ ಜನಾಂಗಕ್ಕೆ ಸೇರಿದ ಸುಮಾರು 25 ಸೆಂಟ್ ಜಾಗವನ್ನು ಬಿಲ್ವಾ ಕನ್‌ಸ್ಟ್ರಕ್ಷನ್‌ದವರು ಒತ್ತುವರಿ ಮಾಡಿಕೊಂಡು ಲೇಔಟ್ ನಿರ್ಮಾಣ ಮಾಡುತ್ತಿದ್ದಾರೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.

‘ಸುಮಾರು 50 ವರ್ಷಗಳಿಂದ ಗ್ರಾಮದಲ್ಲಿ ದಲಿತರು ಯಾರಾದರೂ ಮೃತಪಟ್ಟರೇ ಶವವನ್ನು ಈ ಜಾಗದಲ್ಲಿ ಹೂಳುತ್ತಿದರು. ಸ್ಮಶಾನದ ಸುಮಾರು 25 ಸೆಂಟ್ ಜಾಗವನ್ನು ಖಾಸಗಿ ಕಂಪನಿ ಬಿಲ್ವಾ ಕನ್‌ಸ್ಟ್ರಕ್ಷನ್‌ದವರು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಇದರಿಂದಾಗಿ ದಲಿತರಿಗೆ ಜಾಗ ಇಲ್ಲದಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಮಶಾನ ಜಾಗವನ್ನು ತೆರವು ಮಾಡಿಕೊಡಬೇಕು ಇಲ್ಲವಾದಲ್ಲಿ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಲಾಗುವುದು’ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.

ADVERTISEMENT

ಬಸವರಾಜು ಮಾತನಾಡಿ, ‘ಲೇಔಟ್ ಮಾಡುವ ಸಲುವಾಗಿ ದನಕರುಗಳನ್ನು ಮೇಯಿಸಲು ಹಾಗೂ ಹೊನ್ನಹೊಳೆಗೆ ಹೋಗುತ್ತಿದ್ದ ರಸ್ತೆಯನ್ನು ಸಹ ಒತ್ತುವರಿ ಮಾಡಿಕೊಂಡಿದ್ದಾರೆ. ದಲಿತರ ಸ್ಮಶಾನ ಜಾಗವನ್ನು ಖಾಸಗಿ ಕಂಪನಿಯವರು ಹಣಕೊಟ್ಟು ಪತ್ರಗಳನ್ನು ತಮ್ಮಂತೆ ಮಾಡಿಸಿ ಕೊಂಡಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಮೂಲ ದಾಖಲಾತಿಗಳನ್ನು ನೋಡಿ ನಮ್ಮ ಸ್ಮಶಾನದ ಜಾಗವನ್ನು ನಮಗೆ ದೊರಕಿಸಿ ಕೊಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ವಿಷಯ ತಿಳಿದು ಸ್ಥಳಕ್ಕೆ ಬಂದ ತಹಶೀಲ್ದಾರ್ ಕುನಾಲ್, ‘ಸ್ಥಳವನ್ನು ಸರ್ವೆ ಮಾಡುವವರಿಗೂ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಕಂಪನಿಯವರಿಗೆ ತಾಕೀತು ಮಾಡಿದರು. ಸೋಮವಾರ ಭೂಮಾಪನ ಇಲಾಖೆಯವರನ್ನು ಕಳುಹಿಸಿ ಸ್ಮಶಾನ ಜಾಗವನ್ನು ಗುರುತಿಸಲಾಗುವುದು’ ಎಂದು ಹೇಳಿದರು. ಬಳಿಕ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟರು.

ಪ್ರತಿಭಟನೆಯಲ್ಲಿ ಲಿಂಗಯ್ಯ, ರಾಜು, ಮಲ್ಲರಾಜು, ಸಿದ್ದರಾಜು, ರಾಚಯ್ಯ, ರಂಗಸ್ವಾಮಿ, ಪ್ರಸಾದ್, ಸಿದ್ದರಾಜು, ಕುಮಾರ್, ಮಹದೇವಮ್ಮ, ಗಿರಿಜಮ್ಮ, ಪುಟ್ಟಮ್ಮ, ಚಂದ್ರಮ್ಮ, ಲಕ್ಷಮ್ಮ, ರಾಚಮ್ಮ ಸೇರಿದಂತೆ ಇನ್ನೂ ಅನೇಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.