ADVERTISEMENT

ಹದಗೆಟ್ಟ ರಸ್ತೆ; ಕೇಳುವವರಿಲ್ಲ ಜನರ ಅವಸ್ಥೆ

ಬಂಡೀಪುರದಿಂದ ಎಲಚೆಟ್ಟಿ ಗ್ರಾಮಕ್ಕೆ ಹೋಗುವ ರಸ್ತೆ ಹಾಳು; ದಶಕದಿಂದ ಕಂಡಿಲ್ಲ ಡಾಂಬರು

​ಪ್ರಜಾವಾಣಿ ವಾರ್ತೆ
Published 23 ಮೇ 2023, 16:26 IST
Last Updated 23 ಮೇ 2023, 16:26 IST
ಬಂಡೀಪುರದಿಂದ ಎಲಚೆಟ್ಟಿ ಗ್ರಾಮಕ್ಕೆ ಸಂಪರ್ಕ ರಸ್ತೆ ಹಾಳಾಗಿರುವುದು
ಬಂಡೀಪುರದಿಂದ ಎಲಚೆಟ್ಟಿ ಗ್ರಾಮಕ್ಕೆ ಸಂಪರ್ಕ ರಸ್ತೆ ಹಾಳಾಗಿರುವುದು   

ಮಲ್ಲೇಶ ಎಂ.

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಒಳಗಡೆ ಇರುವ ಕಂದಾಯ ಗ್ರಾಮಗಳಿಗೆ ಹಾದು ಹೋಗಿರುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಕಾಡಂಚಿನ ಭಾಗದ ಜನರು ಸಂಚಾರಕ್ಕೆ ಪ್ರಯಾಸ ಪಡುವಂತಾಗಿದೆ. 

ಬಂಡೀಪುರದಿಂದ ಎಲಚೆಟ್ಟಿವರೆಗೆ 12ರಿಂದ 15 ಕಿ.ಮೀ ರಸ್ತೆಯು ಡಾಂಬರು ಕಾಣದೇ ದಶಕವೇ ಕಳೆದಿದೆ. ರಸ್ತೆ ಸಮಸ್ಯೆಯಿಂದಾಗಿ ಗ್ರಾಮಗಳು ಅನೇಕ ಮೂಲ ಸೌಕರ್ಯ ವಂಚಿತವಾಗಿವೆ. ‌ಇದೇ ಕಾರಣಕ್ಕೆ ಈ ಭಾಗದ ಕೊನೆಯ ಗ್ರಾಮವಾದ ಚಿಕ್ಕಎಲಚೆಟ್ಟಿ ನಿವಾಸಿಗಳು ಈ ಬಾರಿ ಚುನಾವಣೆ‌ಯಲ್ಲಿ ಮತದಾನ ಮಾಡುವುದಿಲ್ಲ ಎಂದು ಬಹಿಷ್ಕಾರ ಮಾಡಿದ್ದರು. ಮತದಾನದ ದಿನ ಜಿಲ್ಲಾಧಿಕಾರಿಯೇ ಗ್ರಾಮಕ್ಕೆ ಭೇಟಿ ನೀಡಿ ಜನರ ಮನವೊಲಿಸಬೇಕಾಯಿತು. 

ADVERTISEMENT

ಹಲವು ವರ್ಷಗಳಿಂದ ಈ ರಸ್ತೆ ಡಾಂಬರು ಕಂಡಿಲ್ಲ. ವರ್ಷದಿಂದ ವರ್ಷಕ್ಕೆ ರಸ್ತೆ ಹಾಳಾಗಿ ಈ ಭಾಗದ ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ.

ಮಂಗಲ ಗ್ರಾಮ ಪಂಚಾಯತಿ ಕೇಂದ್ರ ಸೇರಿದಂತೆ ಜಕ್ಕಹಳ್ಳಿ, ಎಲಚೆಟ್ಟಿ, ಕಣಿಪುರ ಕಾಲೊನಿ ಸೇರಿದಂತೆ ಈ ಭಾಗದಲ್ಲಿ ಹತ್ತಾರು ಬುಡಕಟ್ಟು ಕಾಲೊನಿಗಳಿದ್ದು 2 ಸಾವಿರಕ್ಕೂ ಹೆಚ್ಚು ಜನರು ವಾಸವಾಗಿದ್ದಾರೆ.

ರಸ್ತೆ ಹಾಳಾದ ಕಾರಣ ತುರ್ತು ಪರಿಸ್ಥಿತಿ ಎದುರಾದರೂ ಸಕಾಲದಲ್ಲಿ ಚಿಕಿತ್ಸೆ ದೊರೆಯುವುದಿಲ್ಲ. ಕೆಲ ಗ್ರಾಮಗಳಿಗೆ ಸರ್ಕಾರಿ ಬಸ್‌ಗಳು ಸೇರಿದಂತೆ ವಾಹನಗಳೇ ಹೋಗುವುದಿಲ್ಲ. ಇದರಿಂದಾಗಿ ಅನೇಕ ಮಕ್ಕಳು ಶಾಲೆಯನ್ನು ಬಿಟ್ಟಿದ್ದಾರೆ.

ಈ ಭಾಗದ ವಿದ್ಯಾರ್ಥಿಗಳು ಶಾಲಾ–ಕಾಲೇಜಿಗೆ ಬರಬೇಕಾದರೆ ಹಂಗಳ, ಗುಂಡ್ಲುಪೇಟೆ ಪಟ್ಟಣಕ್ಕೆ ಬರಬೇಕು. ಕಾಡಿನಲ್ಲಿ ಹತ್ತಾರು ಕಿಲೋಮೀಟರ್ ಸಂಚಾರ ಮಾಡಬೇಕಿರುವುದರಿಂದ ಸಕಾಲದಲ್ಲಿ ಶಾಲೆ–ಕಾಲೇಜಿಗೆ ಹೋಗಲು ತೊಂದರೆಯಾಗುತ್ತದೆ.

‘ನಮ್ಮ ಮಕ್ಕಳು ಕಾಡಿನ ಮಧ್ಯೆ ಶಾಲಾ–ಕಾಲೇಜುಗಳಿಗೆ ಹೋಗಿ ಬರಬೇಕಾದರೆ ಎಷ್ಟು ಕಷ್ಟ ಅನುಭವಿಸುತ್ತಾರೆ ಎಂಬುದು ಈ ಭಾಗದ ಜನರಿಗಷ್ಟೇ ಗೊತ್ತು. ಈ ಭಾಗದ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಗಮನ ಹರಿಸಿಲ್ಲ. ಕಳೆದ ವರ್ಷ ಆಗಿನ ಶಾಸಕ ಸಿ.ಎಸ್.ನಿರಂಜನಕುಮಾರ್ ಮತ್ತು ಜಿಲ್ಲಾಧಿಕಾರಿ ಆಗಿದ್ದ ಚಾರುಲತಾ ಸೋಮಲ್ ಅವರು ಜಿಲ್ಲಾಧಿಕಾರಿ ನಡೆ ಗ್ರಾಮದ ಕಡೆಗೆ ಕಾರ್ಯಕ್ರಮದಲ್ಲಿ ರಸ್ತೆ ಸರಿ ಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ ವರ್ಷ ಕಳೆದು ಶಾಸಕರು ಹಾಗೂ ಜಿಲ್ಲಾಧಿಕಾರಿ ಬದಲಾದರೇ ವಿನಾಃ ರಸ್ತೆಯ ಸ್ಥಿತಿ ಹಾಗೆಯೇ ಇದೆ’ ಎಂದು ಮಂಗಲ ಗ್ರಾಮದ ಮುಖಂಡ ಉಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಸರ್ಕಾರ ವೇಗ ಪಡೆದುಕೊಳ್ಳುತ್ತಿದ್ದಂತೆ ನಾನೇ ಖುದ್ದು ಭೇಟಿ ಮಾಡಿ ಆ ಭಾಗದ ಗ್ರಾಮಗಳು ಎದುರಿಸುತ್ತಿರುವ ಸಮಸ್ಯೆ ಸರಿಪಡಿಸುತ್ತೇನೆ
ಎಚ್.ಎಂ.ಗಣೇಶ್ ಪ್ರಸಾದ್ ಶಾಸಕ
10ರಿಂದ 13 ಕಿ.ಮೀಗಳಷ್ಟು ರಸ್ತೆ ಡಾಂಬರು ಕಾಣದೆ ದಶಕವೇ ಉರುಳಿದೆ

ಕಾಡು ಪ್ರಾಣಿಗಳ ಹಾವಳಿ

ಕಾಡು ಕಾಡಂಚಿನ ಗ್ರಾಮಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಇರುವುದರಿಂದ ಜನರು ಅದರಲ್ಲೂ ವಿದ್ಯಾರ್ಥಿಗಳು ಓಡಾಡಲು ಭಯ ಪಡುವಂತಾಗಿದೆ.  ‘ಬೆಳಿಗ್ಗೆ–ಸಂಜೆ ಸಮಯದಲ್ಲಿ ಶಾಲೆ–ಕಾಲೇಜಿಗೆ ಬೇಗನೆ ಹೋಗಬೇಕಾದರೆ ಕಾಡು ಪ್ರಾಣಿಗಳ ಭಯ ಇರುತ್ತದೆ. ದ್ವಿಚಕ್ರ ವಾಹನದಲ್ಲಿ ಸಂಚಾರ ಮಾಡುವುದೂ ಕಷ್ಟವಾಗಿದೆ. ಶೀಘ್ರವಾಗಿ ರಸ್ತೆ ಸರಿಪಡಿಸಿದರೆ ಈ ಭಾಗದ ಜನರ ಜೀವನ ಶೈಲಿ ಬದಲಾಗುತ್ತದೆ’ ಎನ್ನುತ್ತಾರೆ ಇಲ್ಲಿನ ಯುವ ಜನರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.