
ಚಾಮರಾಜನಗರದ ಡಾ.ರಾಜಕುಮಾರ್ ಜಿಲ್ಲಾರಂಗಮಂದಿರದಲ್ಲಿ ದಲಿತ ಸಾಹಿತ್ಯ ಪರಿಷತ್ತು ವತಿಯಿಂದ ವಿಶ್ವಮಾನವ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಿಚಾರಗೋಷ್ಠಿ ಹಾಗೂ ಕವಿಗೋಷ್ಠಿಯನ್ನು ಸಂಸ್ಕೃತಿ ಚಿಂತಕ ಬಂಜಗೆರೆ ಜಯಪ್ರಕಾಶ್ ಉದ್ಘಾಟಿಸಿದರು
ಚಾಮರಾಜನಗರ: ‘ವಿಶ್ವಮಾನವ ಸಂದೇಶ ಎಲ್ಲೆಡೆ ಪಸರಿಸಬೇಕು, ಜನರು ಅರ್ಥೈಸಿಕೊಂಡು ಪಾಲಿಸಬೇಕು ಎಂಬುದು ರಾಷ್ಟ್ರಕವಿ ಕುವೆಂಪು ಅವರ ಮಹದಾಸೆಯಾಗಿತ್ತು, ಅವರ ಆಶಯಗಳನ್ನು ಈಡೇರಿಸಬೇಕಾಗಿರುವುದು ಸಮಾಜದ ಜವಾಬ್ದಾರಿ’ ಎಂದು ಸಂಸ್ಕೃತಿ ಚಿಂತಕ ಬಂಜಗೆರೆ ಜಯಪ್ರಕಾಶ್ ಹೇಳಿದರು.
ನಗರದ ಡಾ.ರಾಜಕುಮಾರ್ ಜಿಲ್ಲಾರಂಗಮಂದಿರದಲ್ಲಿ ದಲಿತ ಸಾಹಿತ್ಯ ಪರಿಷತ್ತು ವತಿಯಿಂದ ವಿಶ್ವಮಾನವ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಿಚಾರಗೋಷ್ಠಿ ಹಾಗೂ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ‘ನಾನು ರಚಿಸಿದ ಸಾಹಿತ್ಯ ಕೃತಿಗಳನ್ನು ಸಮಾಜ ಓದದಿದ್ದರೂ, ಒಪ್ಪದಿದ್ದರೂ ಅಭ್ಯಂತರವಿಲ್ಲ; ಆದರೆ, ವಿಶ್ವಮಾನವ ಸಂದೇಶಗಳ ಸಾರ ಎಲ್ಲರನ್ನು ತಲುಪಬೇಕು ಎಂದು ಕುವೆಂಪು ಸದಾ ಹೇಳುತ್ತಿದ್ದರು’ ಎಂದು ಸ್ಮರಿಸಿದರು.
‘ಕವಿ ಬರಹಗಳಲ್ಲಿ ಮನರಂಜನೆ ನೀಡುವುದು ಮಾತ್ರವಲ್ಲ, ಓದುಗರಿಗೆ ಕಾವ್ಯ ಸೌಂದರ್ಯ ಕೊಡಬೇಕು, ಭಾವಾನಂದ ಮೂಡಿಸಬೇಕು, ತಾತ್ವಿಕ ನೆಲೆಗಟ್ಟಿನ ದರ್ಶನ ಕೊಡಬೇಕು, ತತ್ವಗಳ ಚಿಂತನೆಗೆ ಹಚ್ಚಬೇಕು’ ಎಂದು ಸಲಹೆ ನೀಡಿದರು.
‘ಕುವೆಂಪು ಆಶಯದಂತೆ ವಿಚಾರ ಕ್ರಾಂತಿಯ ಮೂಲಕ ವಿಚಾರ ಸಂಪನ್ನನಾಗಬೇಕು. ಆಲೋಚನೆ ಮಾಡದ ಹೊರತು, ವಿಚಾರಮತಿಯಾಗದ ಹೊರತು ಬದುಕು ನಿಷ್ಪಲವಾದಂತೆ. ಸ್ವತಃ ಅರಿಯುವ ಮೂಲಕ ಮನೋ ಪೂಜೆಯಲ್ಲಿ ತೊಡಗಬೇಕು. ಇವೆಲ್ಲದರ ಹೊರತು ಕೇವಲ ಪೂಜೆ, ಧ್ಯಾನಗಳಿಂದ ಫಲವಿಲ್ಲ’ ಎಂದರು.
‘ವಿಚಾರ ಪ್ರವೃತ್ತಿ ಮನುಷ್ಯನಿಗೆ ಭೂಷಣವಿದ್ದಂತೆ, ಯಾವುದು ಒಳಿತು– ಕೆಡಕುಗಳ ಬಗ್ಗೆ ಅರಿವಿರಬೇಕು. ಜಾತಿ, ಮತ, ಸಂಪ್ರದಾಯಗಳ ಆಚರಣೆ ಮಾಡಿದರೂ ವಿಚಾರಮತಿಗಳಾಗುವುದು ಬಹಳ ಮುಖ್ಯ’ ಎಂದು ಬಂಜಗೆರೆ ಜಯಪ್ರಕಾಶ್ ಹೇಳಿದರು.
‘ಕುವೆಂಪು ಅವರ ಸಾಹಿತ್ಯದಲ್ಲಿ ವಿಶ್ವಮಾನವ ಪರಿಕಲ್ಪನೆಗಳು’ ವಿಷಯ ಕುರಿತು ಮಾತನಾಡಿದ ಪ್ರಾಧ್ಯಾಪಕ ಕೆ.ಸಿ.ಶಿವಾರೆಡ್ಡಿ ‘ಕುವೆಂಪು ಅವರ ವಿಶ್ವಮಾನವ ತತ್ವಗಳಿಗೆ ವಿರುದ್ಧವಾಗಿ ಸಮಾಜ ನಡೆದುಕೊಳ್ಳುತ್ತಿರುವುದು ಬೇಸರದ ಸಂಗತಿ. ಜ್ಞಾನದಿಂದ ಮಾತ್ರ ಅಂತರಂಗದ ವಿಕಾಸ ಸಾಧ್ಯ’ ಎಂದರು.
‘ಜಾತಿ, ಧರ್ಮ, ದ್ವೇಷ ಎಂಬ ಮನೆಗಳನ್ನು ಕಟ್ಟಿಕೊಂಡು ಬದುಕಬೇಡ ಎಂದು ಕವಿ ಕುವೆಂಪು ‘ಮನೆಯನೆಂದು ಕಟ್ಟದಿರು’ ಎಂದು ಸೂಚ್ಯವಾಗಿ ಹೇಳಿದ್ದಾರೆಯೇ ಹೊರತು ಮನೆ ಕಟ್ಟಬೇಡ ಎಂದು ಹೇಳಿಲ್ಲ. ಕುವೆಂಪು ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಕೂಡಿ ಬದುಕುವ ನವ ಮಾನವೀಯತೆಯನ್ನು ಸಮಾಜ ಮೈಗೂಡಿಸಿಕೊಳ್ಳಬೇಕು’ ಎಂದರು.
‘ಪ್ರಪಂಚದ ಹಿರಿಯ–ಕಿರಿಯ ರಾಷ್ಟ್ರಗಳ ಇತಿಹಾಸ ಪುಟಗಳನ್ನು ತಿರುವು ಹಾಕಿದರೆ ಸೇಡು, ಹಿಂಸೆಯನ್ನೊಳಗೊಂಡು ರಕ್ತಸಿಕ್ತ ಅಧ್ಯಾಯಗಳು ಕಾಣುತ್ತವೆ. ಬುದ್ಧ, ಬಸವ, ಪಂಪ, ಕುವೆಂಪು, ಬೇಂದ್ರೆಯ ಕೃತಿಗಳು ಸಮಾಜ ಒಟ್ಟಾಗಿ ಬದುಕುವುದನ್ನು ಹೇಳಿಕೊಟ್ಟಿವೆ. ಜಾತೀಯತೆ, ಅಸ್ಪೃಷ್ಯತೆ, ಬೇಧ–ಭಾವಕ್ಕೆ ಮಹನೀಯರ ಬರಹಗಳು ಮದ್ದಾಗಬಲ್ಲವು’ ಎಂದರು.
ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿಎಂ ಕೃಷ್ಣಮೂರ್ತಿ ಮಾತನಾಡಿ, ‘ಫೆ.8ರಂದು ಗುಂಡ್ಲುಪೇಟೆಯಲ್ಲಿ ದಲಿತ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಧರಿಸಿದ್ದು, ಡಾ.ಲಕ್ಷ್ಮೀ ಪ್ರೇಮಕುಮಾರ್ ಅವರನ್ನು ಸರ್ವಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಈ ಕುರಿತು ಶೀಘ್ರ ತುರ್ತು ಸಭೆ ಕರೆದು ಚರ್ಚಿಸಲಾಗುವುದು’ ಎಂದರು.
ನಂತರ ವಿಶ್ವಮಾನವ ಕವಿಗೋಷ್ಠಿ ನಡೆಯಿತು. ಪ್ರಾಧ್ಯಾಪಕ ನಾಗರಾಜ್ ಕುಮಾರ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷೆ ಡಾ.ಸಿ.ಎನ್. ರೇಣುಕಾದೇವಿ, ದಲಿತ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಶಿವಕುಮಾರ ಸರಗೂರು ಇದ್ದರು. ಶಿಕ್ಷಕಿ ವಿಶಾಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಅಭ್ಯಾಸಿ ಟ್ರಸ್ಟ್ ಅಧ್ಯಕ್ಷ ಕಿರಣ್ ಗಿರ್ಗಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.