ADVERTISEMENT

ಬಿಜೆಪಿಗೆ ಓಟು ಹಾಕುತ್ತಿರಿ, ವರ್ಷ ವರ್ಷ ನಿವೇಶನ ಹಂಚಿಕೆ ಮಾಡುತ್ತೇವೆ: ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2023, 13:20 IST
Last Updated 25 ಫೆಬ್ರುವರಿ 2023, 13:20 IST
   

ಗುಂಡ್ಲುಪೇಟೆ (ಚಾಮರಾಜನಗರ): ಇನ್ನುಮುಂದೆ ಬಿಜೆಪಿ ಓಟು ಹಾಕುತ್ತಲೇ ಇರಿ. ನಾವು ವರ್ಷ ವರ್ಷವೂ ನಿಮಗೆ ನಿವೇಶನ ಹಂಚಿಕೆ ಮಾಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಶನಿವಾರ ಹೇಳಿದರು.

ವಸತಿ ಇಲಾಖೆಯ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಹಾಗೂ ಗುಂಡ್ಲುಪೇಟೆ ಪುರಸಭೆ ಹಮ್ಮಿಕೊಂಡಿದ್ದ ಫಲಾನುಭವಿಗಳಿಗೆ ನಿವೇಶನ ಹಕ್ಕು ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗುಂಡ್ಲುಪೇಟೆಯಲ್ಲಿ 30 ವರ್ಷಗಳಿಂದ ಯಾರಿಗೂ ನಿವೇಶನ ಹಂಚಿಕೆ ಮಾಡಿರಲಿಲ್ಲ. ಬಡತನ ಆ ಜನ್ಮ ಹಕ್ಕಲ್ಲ. ಅವರು ಕೂಡ ಮುಖ್ಯವಾಹಿನಿಗೆ ಬರಬೇಕು. ಬಡತನಕ್ಕೆ ಜಾತಿ, ಕುಲ, ಪಕ್ಷ ಎಂಬುದಿಲ್ಲ. ಅರ್ಹ ಬಡವರಿಗೆಲ್ಲರಿಗೂ ನಿವೇಶನ ಹಂಚಿಕೆ ಮಾಡಲು ಸರ್ಕಾರ ಮುಂದಾಗಿದೆ’ ಎಂದರು.

ADVERTISEMENT

‘ಬೆಂಗಳೂರಿನಲ್ಲಿ ಒಂದು ಲಕ್ಷ ಮನೆ ನಿರ್ಮಿಸಲು ಪ್ರಧಾನಿ ಮೋದಿಯವರು ₹600 ಕೋಟಿ ಕೊಟ್ಟಿದ್ದರು. ಆದರೆ, ಅಂದಿನ ಸರ್ಕಾರ ಅದಕ್ಕೆ ಬೇಕಾದ ಜಾಗವನ್ನು ‌ಹುಡುಕಲಿಲ್ಲ. ನಾನು ಸಚಿವನಾದ ಮೇಲೆ ಜಾಗ ಹುಡುಕಿ ಬೆಂಗಳೂರಿನಲ್ಲಿ 52 ಸಾವಿರ ಮನೆ ನಿರ್ಮಾಣ ಮಾಡಲಾಗಿದೆ. ಈಗಾಗಲೇ 5000 ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಿದ್ದೇವೆ’ ಎಂದು ಸೋಮಣ್ಣ ಹೇಳಿದರು.

ಒಂದು ದಿನ ವಿದಾಯ ಹೇಳಲೇಬೇಕು: ಯಡಿಯೂರಪ್ಪ ಅವರು ವಿಧಾನಸಭೆ, ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳಿರುವ ಬಗ್ಗೆ ಚಾಮರಾಜನಗರದಲ್ಲಿ ಪ್ರತಿಕ್ರಿಯಿಸಿದ ಸೋಮಣ್ಣ, ‘ಎಲ್ಲರೂ ಒಂದು ದಿನ ವಿದಾಯ ಹೇಳಲೇಬೇಕಲ್ಲವೇ? ವಯಸ್ಸಾದ ನಂತರ ಹೋಗಲೇಬೇಕಲ್ಲವೇ? ದೇಶದಲ್ಲಿ ಬಹುತೇಕ ಮಂದಿ ಈ ರೀತಿ ಬಂದು ಹೋಗಿದ್ದಾರೆ. ನಾನೂ ಮುಂದೊಂದಿನ ವಿದಾಯ ಹೇಳಲೇಬೇಕು. ಯಡಿಯೂರಪ್ಪ ತಮ್ಮ ವಯಸ್ಸಿನ ಇತಿಮಿತಿ ಅರ್ಥಮಾಡಿಕೊಂಡು ತೀರ್ಮಾನ ಮಾಡಿದ್ದಾರೆ. ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದುವುದು ಒಳ್ಳೆಯದು ಅನಿಸಿರಬೇಕು, ಹಾಗಾಗಿ ವಿದಾಯ ಹೇಳಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.