ಹನೂರು ತಾಲ್ಲೂಕಿನ ಮಾರ್ಟಳ್ಳಿ ಸಮೀಪದ ಹಾಲೇರಿ ಕೆರೆಯನ್ನು ಶಾಸಕ ಎಂ.ಆರ್. ಮಂಜುನಾಥ್ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು
ಹನೂರು: ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಶಾಸಕ ಎಂ.ಆರ್. ಮಂಜುನಾಥ್ ಹಾಗೂ ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್ ಅವರು ಭೇಟಿ ನೀಡಿ ಪರಿಶೀಲಿಸಿ, ಕುಡಿಯುವ ನೀರಿನ ಸಮಸ್ಯೆಯನ್ನು ಪರಿಶೀಲಿಸಿದರು.
ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಲೇರಿ ಕೆರೆ, ಕಿರಪತಿ ಡ್ಯಾಮ್ ಹಾಗೂ ಪಾನಕೋಬೆ ಕೆರೆ ನಾಲ್ ರೋಡ್ ಬಳಿಯ ಚೆಕ್‌ಡ್ಯಾಂ ಸೇರಿ ವಿವಿಧಡೆ ಕೆರೆಗಳನ್ನು ಶಾಸಕ ವೀಕ್ಷಣೆ ಮಾಡಿ, ನೀರಿನ ಲಭ್ಯತೆ ಬಗ್ಗೆ ಅವಲೋಕನ ನಡೆಸಿದರು.
ಕೆರೆಗಳ ಅಭಿವೃದ್ಧಿ ಕೈಗೊಳ್ಳುವ ನಿಟ್ಟಿನಲ್ಲಿ ನೀರಾವರಿ ಯೋಜನೆಗಳ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಶಾಸಕ ಸೂಚನೆ ನೀಡಿದರು.
ಅರಣ್ಯದಂಚಿನ ವಿವಿಧ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿರುವ ಕಾರಣ, ಮಾನವ ಪ್ರಾಣಿ ಸಂಘರ್ಷ ಉದ್ಭವಿಸುವ ಸಾಧ್ಯತೆ ಇರುವುದರಿಂದ ತಾಲ್ಲೂಕಿನ ವಿವಿಧ ಗ್ರಾಮಗಳ ಕೆರೆಗಳನ್ನು ವೀಕ್ಷಣೆ ಮಾಡಿದರು. ಅರಣ್ಯ ಇಲಾಖೆ ವತಿಯಿಂದ ತಮ್ಮ ವ್ಯಾಪ್ತಿಯಲ್ಲಿ ಬರುವ ಕೆರೆಗಳನ್ನು ಅಭಿವೃದ್ಧಿಪಡಿಸಲು, ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಬೇಕು. ಇದಕ್ಕೆ ಎಲ್ಲ ರೀತಿಯಲ್ಲೂ ಸಹಕಾರ ನೀಡಲಾಗುವುದು ಎಂದರು.
ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಲಯವನ್ನು ಹುಲಿ ಸಂರಕ್ಷಿತ ಅರಣ್ಯ ಪ್ರದೇಶವನ್ನಾಗಿ ಘೋಷಣೆ ಮಾಡುವ ಮುನ್ನ ಅರಣ್ಯದಂಚಿನ ಗ್ರಾಮಗಳಲ್ಲಿ ವಾಸಿಸುತ್ತಿರುವ ಜನರ ಮತ್ತು ರೈತರ ಸಂರಕ್ಷಣೆ ಆಗಬೇಕು. ಮಾನವ –ವನ್ಯಜೀವಿ ಸಂಘರ್ಷ ತಪ್ಪಿಸಲು ಬೇಕಾದ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಹೇಳಿದರು.
ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್ ಮಾತನಾಡಿ, ಉನ್ನತ ಅಧಿಕಾರಿಗಳ ಜೊತೆ ಸಭೆ ನಡೆಸಿ ಗ್ರಾಮಸ್ಥರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಡಿಸಿಎಫ್ ಭಾಸ್ಕರ್, ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಪ್ರಫುಲ್ಲ, ವಲಯ ಅರಣ್ಯಾಧಿಕಾರಿ ರಾಜಶೇಖರ್ ಮೂರ್ತಿ, ಸಣ್ಣ ನೀರಾವರಿ ಇಲಾಖೆ ಎಇಇ ಅಭಿಲಾಶ್, ಕಾವೇರಿ ನೀರಾವರಿ ನಿಗಮದ ಎಇಇ ಕರುಣಮಯಿ,ಲೋಕೋಪಯೋಗಿ ಇಲಾಖೆ ಎಇಇ ಚಿನ್ನಣ್ಣ, ಕಾರ್ಯನಿರ್ವಹಣಾಧಿಕಾರಿ ಉಮೇಶ್, ರಾಮಪುರ ರಾಜಸ್ವ ನಿರೀಕ್ಷಕ ಶಿವಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.