ಚಾಮರಾಜನಗರ: ಚಳಿರಾಯ ನಿಧಾನವಾಗಿ ಗಡಿ ಜಿಲ್ಲೆಗೆ ಕಾಲಿಟ್ಟಿದ್ದಾನೆ. ವಾರದಿಂದೀಚೆಗೆ ಇಳಿ ಸಂಜೆಯಿಂದ ಬೆಳಗ್ಗಿನವರೆಗೆ ಶೀತ ವಾತಾವರಣ ಕಂಡು ಬರುತ್ತಿದ್ದು, ಉಷ್ಣಾಂಶ ದಿನೇ ದಿನೇ ಕುಸಿಯಲು ಆರಂಭಿಸಿದೆ.
ಕಳೆದ ವಾರದವರೆಗೂ 21–20 ಡಿಗ್ರಿ ಸೆಲ್ಸಿಯಸ್‌ನ ಆಸುಪಾಸಿನಲ್ಲಿದ್ದ ಕನಿಷ್ಠ ಉಷ್ಣಾಂಶ ಎರಡು ದಿನಗಳಿಂದ 17–16 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಗರಿಷ್ಠ ಉಷ್ಣಾಂಶ 27–28 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗುತ್ತಿದೆ.
ಮೂರ್ನಾಲ್ಕು ದಿನಗಳಿಗೆ ಹೋಲಿಸಿದರೆ, ಜಿಲ್ಲಾ ಕೇಂದ್ರ ಚಾಮರಾಜನಗರದ ಮಂದಿಗೆ ಶುಕ್ರವಾರ ಬೆಳಿಗ್ಗೆ ಹೆಚ್ಚಿನ ಚಳಿಯ ಅನುಭವವಾಗಿದೆ. ಬೆಳಿಗ್ಗೆ 9 ಗಂಟೆಯವರೆಗೂ ಶೀತ ವಾತಾವರಣ ಇತ್ತು. ಸೂರ್ಯನ ಕಿರಣಗಳು ಸರಿಯಾಗಿ ಭೂಮಿಗೆ ಬಿದ್ದ ನಂತರವಷ್ಟೇ ವಾತಾವರಣ ಸ್ವಲ್ಪ ಬಿಸಿಯಾಯಿತು.
ವಿಳಂಬ: ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಚ ಚಳಿಗಾಲ ಆರಂಭ ಸ್ವಲ್ಪ ನಿಧಾನವಾಗಿದೆ. ಕಳೆದ ವರ್ಷ ಅಕ್ಟೋಬರ್ ತಿಂಗಳ ಕೊನೆಯ ವಾರವೇ ಚಳಿ ಆರಂಭವಾಗಿತ್ತು. ನಾಲ್ಕೈದು ದಿನಗಳ ಕಾಲ ಕೊರೆಯುವ ಚಳಿ ಇದ್ದು, ನಂತರ ಕಡಿಮೆಯಾಗಿ, ನವೆಂಬರ್ ಎರಡನೇ ವಾರದಿಂದ ಮತ್ತೆ ಥರಗುಟ್ಟುವ ಚಳಿ ಶುರುವಾಗಿತ್ತು.
ಈ ಬಾರಿ ನವೆಂಬರ್ ಆರಂಭದವರೆಗೂ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದುದರಿಂದ ಚಳಿ ಆರಂಭ ಕೊಂಚ ನಿಧಾನವಾಗಿದೆ ಎಂದು ಹೇಳಲಾಗುತ್ತಿದೆ.
ದೂರವಾದ ಮಳೆ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾದ ಕಾರಣ ಜಿಲ್ಲೆಯಲ್ಲೂ ಕಳೆದ ವಾರದ ಮಧ್ಯದಲ್ಲಿ ಎರಡು ದಿನ ಮಳೆಯಾಗಿತ್ತು. ಆ ಬಳಿಕ ಎಲ್ಲೂ ಮಳೆ ಬಿದ್ದಿಲ್ಲ. ಇಬ್ಬನಿ ಹಾಗೂ ಮಂಜಿನ ಅಬ್ಬರ ಹೆಚ್ಚಾಗಿದೆ.
ಕೆರೆ ಕಟ್ಟೆಗಳು, ಅರಣ್ಯದ ಅಂಚು, ಕೃಷಿ ಜಮೀನಿನಲ್ಲಿ ಆವರಿಸುವ ಇಬ್ಬನಿ, ಮನಮೋಹಕ ದೃಶ್ಯವನ್ನು ಸೃಷ್ಟಿಸುತ್ತಿವೆ.
ಎರಡು ದಿನಗಳಿಂದ ಸಂಜೆ 5.30ರ ನಂತರ ಶೀತಗಾಳಿ ಬೀಸಲು ಆರಂಭಿಸುತ್ತಿದೆ. ಬೆಳಗಿನ ಜಾವ ಶೀತ ಹೆಚ್ಚಾಗಿದ್ದು, ಮಂಜಿನ ವಾತಾವರಣ ಕಂಡು ಬರುತ್ತಿದೆ.
ಜನಜೀವನದ ಮೇಲೆ ಪರಿಣಾಮ: ಚಳಿ ಹೆಚ್ಚಾಗುತ್ತಿದ್ದಂತೆಯೇ ಜನರ ದಿನನಿತ್ಯದ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ. ಬೆಳಿಗ್ಗೆ ಬೇಗ ವಾಯುವಿಹಾರಕ್ಕೆ ತೆರಳುತ್ತಿದ್ದವರು ಸ್ವಲ್ಪ ತಡವಾಗಿ ಹೋಗುತ್ತಿದ್ದಾರೆ.
ಸ್ವೆಟರ್, ಜಾಕೆಟ್, ಟೊಪ್ಪಿ, ಮಫ್ಲರ್‌ಗಳನ್ನು ಸಾರ್ವಜನಿಕರು, ಮಕ್ಕಳು, ವಿದ್ಯಾರ್ಥಿಗಳು ಧರಿಸುತ್ತಿದ್ದಾರೆ. ಸೋಲಾರ್ ಹೀಟರ್‌ಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸದೆ ಇರುವುದರಿಂದ ಜನರು ಬಿಸಿನೀರು ಕಾಯಿಸುವುದಕ್ಕಾಗಿ ಒಲೆಯ ಮೊರೆ ಹೋಗಿದ್ದಾರೆ. ಹಾಗಾಗಿ, ತೆಂಗಿನ ಕಾಯಿ ಸಿಪ್ಪೆಗಳಿಗೆ (ಮಟ್ಟೆ) ಬೇಡಿಕೆ ಹೆಚ್ಚಾಗಿದೆ.
ಗ್ರಾಮೀಣ ಭಾಗದಲ್ಲೂ ಚಳಿ ಹೆಚ್ಚಾಗಿದ್ದು, ಜನರು ಚಳಿಗಾಲಕ್ಕೆ ಹೊಂದಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಕೃಷಿಗೆ ತೊಂದರೆ ಇಲ್ಲ
ಚಳಿಯಿಂದಾಗಿ ಕೃಷಿಗೆ ಯಾವುದೇ ತೊಂದರೆ ಇಲ್ಲ. ಕೆಲವು ಬೆಳೆಗಳಿಗೆ ಶೀತ ವಾತಾವರಣ ಅಗತ್ಯ ಇದೆ. ಕಡಲೆ, ಕೊತ್ತಂಬರಿ, ಜೋಳ, ರಾಗಿ ಸೇರಿದಂತೆ ಹಲವು ಬೆಳೆಗಳು ಚಳಿಗಾಲದಲ್ಲಿ ಕಾಳು ಕಟ್ಟುವುದು ಹೆಚ್ಚು ಎಂದು ಹೇಳುತ್ತಾರೆ ರೈತರು.
ಸಾಮಾನ್ಯವಾಗಿ ಮಂಜು ಕವಿಯಲು ಆರಂಭವಾದರೆ ಮಳೆ ದೂರ ಹೋಯಿತು ಎಂಬ ನಂಬಿಕೆ ಜನರಲ್ಲಿದೆ. ಆದರೆ, ನಮ್ಮ ಜಿಲ್ಲೆಯಲ್ಲಿ ಮುಂಗಾರಿಗಿಂತ ಹಿಂಗಾರು ಮಳೆಯೇ ಹೆಚ್ಚು ಬೀಳುವುದರಿಂದ ಚಳಿಗಾಲದ ಮಧ್ಯೆಯೂ ಮಳೆಯಾಗುವ ಸಾಧ್ಯತೆ ಇರುತ್ತದೆ ಎಂದು ಹೇಳುತ್ತಾರೆ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.