ಕೊಳ್ಳೇಗಾಲ: ಮಹಿಳೆಯರು ಆರ್ಥಿಕವಾಗಿ ಸದೃಢರಾಗಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ನಗರದ ನಗರಸಭೆಯಲ್ಲಿ ನಗರೋತ್ಥಾನ ನಾಲ್ಕನೇ ಹಂತದ ಯೋಜನೆಯಡಿ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಣೆ ಮಾಡಿ ನಂತರ ಮಾತನಾಡಿದರು.
‘ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯೂ ಸಹ ಮುಂದೆ ಬಂದಿದ್ದಾರೆ. ಹಾಗಾಗಿ ಮಹಿಳೆಯರು ಮನಸ್ಸು ಮಾಡಿದರೆ ಈ ದೇಶವನ್ನೇ ಬದಲಿಸಬಹುದು. ಸಮಾಜದ ಕಟ್ಟಕಡೆಯ ವ್ಯಕ್ತಿಯ ಮಕ್ಕಳ ಬದುಕು ಸಹ ಹಸನಾಗಬೇಕು. ಸರ್ಕಾರ ಅನೇಕ ಯೋಜನೆ ರೂಪಿಸಿದೆ. ಬಡಜನರ ಬದುಕು ಹಸನಾಗಿ ಉತ್ತಮ ಜೀವನ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಇಂದು ಹೊಲಿಗೆ ಯಂತ್ರ ನೀಡಲಾಗಿದೆ. ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಂಡು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಿ’ ಎಂದರು.
‘ಪ್ರತಿ ಹೊಲಿಗೆ ಯಂತ್ರಕ್ಕೆ ₹8ಸಾವಿರದಂತೆ 235 ಫಲಾನುಭವಿಗಳಿಗೆ ₹20.60 ಲಕ್ಷ ವೆಚ್ಚದಲ್ಲಿ ಹೊಲಿಗೆ ಯಂತ್ರಗಳನ್ನು ವಿತರಿಸಲಾಗಿದೆ. ಅದರಲ್ಲಿ ಮೀಸಲಾತಿವಾರು ಸೌಲಭ್ಯ ನೀಡಿದ್ದು ಪರಿಶಿಷ್ಟ ಜಾತಿಯರಿಗೆ ಶೇ 15ರಷ್ಟು, ಪರಿಶಿಷ್ಟ ಪಂಗಡದವರಿಗೆ ಶೇ 6.95 ಇತರರಿಗೆ ಶೇ 7.25 ಅನುಪಾತದಲ್ಲಿ ಹಂಚಿಕೆ ಮಾಡಲಾಗಿದೆ. ಈ ಹಿಂದೆ ಅಧಿಕಾರಿಗಳು ಜನಪ್ರತಿನಿಧಿಗಳಿಂದ ಸಾಂಕೇತಿಕವಾಗಿ ಸೌಲಭ್ಯಗಳನ್ನು ವಿತರಿಸಿ ನಂತರ ತಮಗೆ ಬೇಕಾದವರಿಗೆ ಕೊಡುತ್ತಿದ್ದರು. ಇದರಿಂದಾಗಿ ಅರ್ಹರಿಗೆ ಸಿಗದೆ ಮತ್ಯಾರಿಗೋ ಸಿಗುತ್ತಿತ್ತು. ಸೌಲಭ್ಯ ಪಡೆದ ಕೆಲವರು ಮಾರಾಟ ಮಾಡಿಕೊಳ್ಳುತ್ತಿದ್ದರು. ಈಗ ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ನೀಡಲಾಗಿದೆ’ ಎಂದರು.
ನಗರಸಭೆ ಅಧ್ಯಕ್ಷೆ ರೇಖಾ, ಉಪಾಧ್ಯಕ್ಷ ಎ.ಪಿ.ಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಜಿಲ್ಲಾಧಿಕಾರಿ ಶಿಲ್ಪಾನಾಗ್, ತಹಶೀಲ್ದಾರ್ ಬಸವರಾಜು, ಜಿಲ್ಲಾ ನಗರಾಭಿವೃದ್ಧಿ ಕೋಶ ಇಇ ಅಲ್ತಾಫ್, ನಗರ ಸಭೆ ಸದಸ್ಯ ಮಂಜುನಾಥ್, ರಾಘವೇಂದ್ರ, ಕವಿತ ಭಾಗ್ಯ, ನಾಗಸುಂದ್ರಮ್ಮ, ಪೌರಾಯುಕ್ತ ರಮೇಶ್, ಆರೋಗ್ಯಾಧಿಕಾರಿ ಚೇತನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.