ADVERTISEMENT

ಚಾಮರಾಜನಗರ| ಕುಟಂಬದಲ್ಲಿ ಮಹಿಳೆಗೆ ಗೌರವ ಸಿಗಬೇಕಿದೆ: ವೀಣಾ

ಅಖಿಲ ಕರ್ನಾಟಕ ಕನ್ನಡ ಮಹಾಸಭಾದಿಂದ ಮಹಿಳಾ ದಿನಾಚರಣೆ, ವಿವಿಧ ಕ್ಷೇತ್ರದ ಸಾಧಕಿಯರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2023, 5:23 IST
Last Updated 17 ಮಾರ್ಚ್ 2023, 5:23 IST
ಚಾಮರಾಜನಗರದಲ್ಲಿ ಗುರುವಾರ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆಯ ಹಿರಿಯ ನಿರೀಕ್ಷಕಿ ಜಿ.ಬಿ.ವೀಣಾ ಅವರನ್ನು ಗಣ್ಯರು ಸನ್ಮಾನಿಸಿದರು
ಚಾಮರಾಜನಗರದಲ್ಲಿ ಗುರುವಾರ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆಯ ಹಿರಿಯ ನಿರೀಕ್ಷಕಿ ಜಿ.ಬಿ.ವೀಣಾ ಅವರನ್ನು ಗಣ್ಯರು ಸನ್ಮಾನಿಸಿದರು   

ಚಾಮರಾಜನಗರ: ‘ಮನೆಯಲ್ಲಿ ಮಹಿಳೆಯರಿಗೂ ಗೌರವ ಸಿಗಬೇಕು. ಇಂತಹ ಬದಲಾವಣೆ ಆದಾಗ ಮಾತ್ರ ಮಹಿಳೆಗೆ ಸಮಾನತೆ ಸಿಗುತ್ತದೆ’ ಎಂದು ಚಾಮರಾಜನಗರದ ಕಾರ್ಮಿಕ ಇಲಾಖೆಯ ಹಿರಿಯ ನಿರೀಕ್ಷಕಿ ಜಿ.ಬಿ.ವೀಣಾ ಗುರುವಾರ ತಿಳಿಸಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಎಲ್ಲಿ ಮಹಿಳೆಯರನ್ನು ಪೂಜಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಅನ್ನುವ ನಾಣ್ಣುಡಿಯಂತೆ ಮಹಿಳೆಗೆ ಎಲ್ಲ ಕಡೆಗಳಲ್ಲೂ ಗೌರವ ಸಿಗುವಂತಹ ವಾತಾವರಣ ಸೃಷ್ಟಿಯಾಗಬೇಕು. ಮಹಿಳೆಯರು ಎಲ್ಲ ರಂಗಗಳಲ್ಲೂ ಮುಂದುವರಿಯಬೇಕು. ಅವರಿಗೆ ಇರುವಂತಹ ಹಕ್ಕುಗಳು ಸಿಗುವಂತಾಗಬೇಕು’ ಎಂದರು.

ADVERTISEMENT

‘ಪ್ರತಿಯೊಬ್ಬರು ಕೂಡ ಹೆಣ್ಣು ಮಕ್ಕಳಿಗೆ ಗೌರವ ಕೊಡುವುದನ್ನು ಅಭ್ಯಾಸಮಾಡಬೇಕು. ಈ ಬದಲಾವಣೆ ಮನೆಯಿಂದಲೇ ಪ್ರಾರಂಭ ಆಗಬೇಕು’ ಎಂದರು.

ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ರಾಜ್ಯ ಅಧ್ಯಕ್ಷ ಚಾ.ರಂ.ಶ್ರೀನಿವಾಸ ಗೌಡ ಮಾತನಾಡಿ, ‘ದೇಶದಲ್ಲಿ ಎಲ್ಲದಕ್ಕೂ ಮಹಿಳೆಯರ ಹೆಸರು ಇಟ್ಟಿದ್ದಾರೆ. ನಮ್ಮ ಪೂರ್ವಿಕರು ಮಹಿಳೆಯರಿಗೆ ಸಾಕಷ್ಟು ಪ್ರಾತಿನಿಧ್ಯವನ್ನೂ ಕೊಟ್ಟಿದ್ದಾರೆ. ದೇಶದ ಮಹಿಳೆಯರು ಎಲ್ಲ ರಂಗಗಳಲ್ಲೂ ತಮ್ಮನ್ನು ತೊಡಗಿಸಿಕೊಂಡು ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆದಿದ್ದಾರೆ’ ಎಂದರು.

ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ಗೌರವಾಧ್ಯಕ್ಷ ಶಾ.ಮುರಳಿ ಮಾತಮಾಡಿ, ‘ಸಮಾಜದಲ್ಲಿ ಮಹಿಳೆಯರಿಗೆ ಗೌರವ ಕೊಡುವಂತಹ ಕೆಲಸ ಆಗಬೇಕು’ ಎಂದರು.

ಇದೇ ಸಂದರ್ಭದಲ್ಲಿ ಹಿರಿಯ ಕಾರ್ಮಿಕ ನಿರೀಕ್ಷಕಿ ಜಿ.ಬಿ.ವೀಣಾ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ನಾಗಲಕ್ಷಿ, ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ನಿಲಯ ಮೇಲ್ವಿಚಾರಕಿ ಎಸ್.ಶಾಲಿನಿ, ಸಂತ ತೆರೆಸಾ ವಿದ್ಯಾಮಂದಿರದ ಶಿಕ್ಷಕಿ ಜಿ.ಎಂ.ಕಮಲ, ಹೋರಾಟಗಾರ್ತಿ ನಾಗುರಮೇಶ್ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಶೈಲ ಕುಮಾರ್, ನಿಜಧ್ವನಿ ಗೋವಿಂದರಾಜು, ಚಾ.ವೆಂ.ರಾಜಗೋಪಾಲ್, ಪಣ್ಯದಹುಂಡಿ ರಾಜು, ರವಿಚಂದ್ರ ಪ್ರಸಾದ ಕಹಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.