ADVERTISEMENT

ಬೆಂಗಳೂರು 102.9ರಲ್ಲಿ ಹಳ್ಳಿ ಹುಡುಗಿಯ ಮಿಂಚು

ರೇಡಿಯೊ ಆಲಿಸುತ್ತ ಉದ್ಘೋಷಕಿಯಾದ ಮಲಾರಪಾಳ್ಯದ ಮಧುಮಾಲತಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2023, 6:37 IST
Last Updated 8 ಮಾರ್ಚ್ 2023, 6:37 IST
ಆರ್‌ಜೆ ಮಧುಮಾಲತಿ
ಆರ್‌ಜೆ ಮಧುಮಾಲತಿ   

ಯಳಂದೂರು: ಆಕಾಶವಾಣಿ 100.6 ಮತ್ತು 102.9 ಸುಮಧುರ ಸ್ವರ ಮಾಧುರ್ಯಕ್ಕೆ ಹೆಸರುವಾಸಿ. ಇಲ್ಲಿ ಪ್ರಸಾರವಾಗುವ ಹಾಡು, ಹರಟೆ, ಮಾತುಕತೆಗೆ ಕಿವಿಯಾನಿಸಿದರೆ ಮನಸ್ಸು ಮತ್ತೊಂದು ಲೋಕಕ್ಕೆ ಜಾರುತ್ತದೆ.

ರೇಡಿಯೊ ಕೇಳುತ್ತ ಸಮಯ ಹೊಂದಿಸಿಕೊಳ್ಳುವ ಜನ ಸಮುದಾಯ ಇನ್ನೂ ಇದೆ. ಆದರೆ, ಅವಿಭಕ್ತ ಕುಟುಂಬದ ಸದಸ್ಯರು ಬಾನುಲಿ ಆಲಿಸುತ್ತ, ಹಾಡುತ್ತ ಬದುಕು ಕಟ್ಟಿಕೊಳ್ಳುವುದು ನಿಜಕ್ಕೂ ಸೋಜಿಗ. ತಾಲ್ಲೂಕಿನ ಹಳ್ಳಿಯ ಹುಡುಗಿ ಎಂ.ಎನ್.ಮಧು ಮಾಲತಿ ದೂರದ ಬೆಂಗಳೂರಿನಲ್ಲಿ ಬಾನುಲಿಯಿಂದಲೇ ಬದುಕು ಕಟ್ಟಿಕೊಂಡಿದ್ದಾರೆ.

ತಾಲ್ಲೂಕಿನ ಮಲಾರಪಾಳ್ಯದ ನಂಜಯ್ಯ ಮತ್ತು ಮಹದೇವಮ್ಮ ಅವರ ಮೂರನೇ ಪುತ್ರಿ ಮಧುಮಾಲತಿ ಎಂ.ಎನ್. ಓದಿದ್ದು ಕನ್ನಡ ಮತ್ತು ಶಿಕ್ಷಣ ವಿಭಾಗದ ಸ್ನಾತಕೋತ್ತರ ಪದವಿ. ಬೋಧಕಿಯಾಗಿ ಕಂಡ ಕನಸ್ಸಿಗೆ ಜೀವ ತುಂಬಿದ್ದು ಮಾತ್ರ ಬೆಂಗಳೂರು ಆಕಾಶವಾಣಿ.

ADVERTISEMENT

ಉದ್ಘೋಷಕಿಯಾಗಿ ಬಿಡುವಿಲ್ಲದ ಕೆಲಸ. ಬಿಡುವಿನ ಸಮಯದಲ್ಲಿ ಊರಿನ ನೆನಪು. ಸಾಮಾಜಿಕ ಸೇವೆಯಲ್ಲಿ ಬದುಕು ಅರಳಿಸಿಕೊಳ್ಳುವ ತವಕ ಇವರದು.

ತಂದೆಯೇ ಸ್ಪೂರ್ತಿ: ‘ನಮ್ಮದು ಗ್ರಾಮೀಣ ಪರಿಸರ. ಆರು ಹೆಣ್ಣು ಮಕ್ಕಳ ತುಂಬು ಕುಟುಂಬ. ಶಾಲೆ-ಕಾಲೇಜು ಕಲಿಯುವಾಗ ರೇಡಿಯೊ ಮಾತ್ರ ಅಕ್ಕ-ತಂಗಿಯರ ಕನಸಿಗೆ ಜೀವ ತುಂಬುವ ಸಾಧನ. ದೂರದ ಪಟ್ಟಣಕ್ಕೆ ಹೋಗಿ ಶಿಕ್ಷಣ ಪಡೆಯುವುದು ಹಳ್ಳಿಗಳಲ್ಲಿ ಕಷ್ಟ. ಇಂತಹ ಸಮಯದಲ್ಲಿ ಅಪ್ಪ ಮತ್ತು ಅಮ್ಮ ಎಲ್ಲ ಮಕ್ಕಳ ಓದಿಗೆ ಪ್ರೇರಕರಾದರು. ಸೈಕಲ್ ಮೂಲಕ ಪಟ್ಟಣಕ್ಕೆ ಕಳುಹಿಸಿ ಕಲಿಸಿದರು. ಸಹೋದರಿಯರಾದ ಮಂಗಳಗೌರಿ, ಗಂಗಾಮಣಿ, ನೇತ್ರಾವತಿ, ಸೌಮ್ಯ ಮತ್ತು ಸುಜಾತ ಎಲ್ಲರಿಗೂ ತಂದೆಯೇ ಆದರ್ಶ, ಮಾರ್ಗದರ್ಶಿ. ಓದಿಗೆ ಸ್ಫೂರ್ತಿಯಾದರು. ಆರು ಹೆಣ್ಣು ಮಕ್ಕಳು ವಕೀಲೆ, ಶುಶ್ರೂಷಕಿ, ಗ್ರಾಮ ಸೇವೆ, ಮಳಿಗೆ ನಿರ್ವಹಣೆ ಮತ್ತಿತರ ಉದ್ಯೋಗ ಅಲಂಕರಿಸಿದ್ದಾರೆ. ನಾನು ರೇಡಿಯೊ ಮೇಲಿನ ಅಪಾರ ಪ್ರೇಮದಿಂದ ಆರ್.ಜೆ ಹುದ್ದೆ ಒಲಿಸಿಕೊಂಡೆ’ ಎಂದು ಹೇಳುತ್ತಾರೆ ಮಾಲತಿ.

'ಗ್ರಾಮದಲ್ಲಿ ಸಾಮಾಜಿಕ ಕಾರ್ಯಗಳಿಗೆ ಧ್ವನಿಯಾಗಿದ್ದೇನೆ. ಟಿ.ವಿ ಮತ್ತು ರೇಡಿಯೊದಲ್ಲಿ ಸೇರಬೇಕು ಎಂಬುವವರಿಗೆ ಮಾತೃ ಭಾಷೆ ಮುಖ್ಯ. ವ್ಯಾಕರಣ ಬದ್ಧ ಮಾತುಕತೆ, ಸೌಜನ್ಯದ ನುಡಿ, ಸೊಗಸಾದ ಧ್ವನಿ ಸಿದ್ಧಿಸಿಕೊಳ್ಳಬೇಕು’ ಎಂದು ರೇಡಿಯೊ ಟಿವಿಗಳಲ್ಲಿ ಕೆಲಸ ಮಾಡಲು ಬಯಸುವವರಿಗೆ ಸಲಹೆ ನೀಡುತ್ತಾರೆ ಮಧುಮಾಲತಿ.

ರೇಡಿಯೊ ಕಲಿಸಿದ ಪಾಠ

‘ಎಲ್ಲ ಮಕ್ಕಳೂ ಆಕಾಶವಾಣಿ ಕೇಳುತ್ತ ಬೆಳೆದರು. ಓದುತ್ತಿದ್ದ ಸಮಯದಲ್ಲಿ ರೇಡಿಯೊ ಆಕರ್ಷಿಸಿತು. ಇಲ್ಲಿ ಪ್ರಸಾರ ಆಗುತ್ತಿದ್ದ ಚಿತ್ರಗೀತೆ, ಸಾಧಕರ ಚರ್ಚೆ, ಜಾನಪದ ಹಾಗೂ ಗ್ರಾಮೀಣ ಕೃಷಿ ಕಾರ್ಯಕ್ರಮಗಳಿಂದ ಬಾನ್ಧನಿಗೆ ಆಕರ್ಷಿತಳಾದೆ. ಕೆಲಸ ಹುಡುಕಿ ಬೆಂಗಳೂರಿಗೆ ತೆರಳಿದ್ದೆ. ಈ ಸಮಯದಲ್ಲಿ ಉದ್ಘೋಷಕಿ ಹುದ್ದೆ ಸಂದರ್ಶನದಲ್ಲಿ ಭಾಗಿಯಾದೆ. ಗ್ರಾಮೀಣ ಮಕ್ಕಳಿಗೆ ಭಾಷಾ ದೋಷ ಮತ್ತು ಉಚ್ಚಾರಣೆ ಎಷ್ಟು ಕಷ್ಟ ಎಂಬುದು ಆಗ ಅರಿವಾಯಿತು. ಹಟ ಬಿಡದೆ ಮತ್ತೆ ಪ್ರಯತ್ನಿಸಿದೆ. ಆಯ್ಕೆಯಾದೆ. 8 ವರ್ಷಗಳಿಂದ ಬೆಂಗಳೂರು ಆಕಾಶವಾಣಿ 102.9ರಲ್ಲಿ ಆರ್‌ಜೆಯಾಗಿ ಕೇಳುಗರ ಸುಶ್ರಾವ್ಯ ಗೀತೆಗಳನ್ನು ಪ್ರಸ್ತುತಪಡಿಸುತ್ತಿದ್ದೇನೆ’ ಎಂದು ವೃತ್ತಿ ಹಿಡಿದ ಹಾದಿಯನ್ನು ಎಂ.ಎನ್.ಮಧು ಮಾಲತಿ ವಿವರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.