ADVERTISEMENT

ಪರಿಮಳ ಹರಡುವವರ ಬದುಕಲ್ಲಿ ಘಮಲಿಲ್ಲ

ಪ್ರತಿ ದಿನ ಹೂವು ಕಟ್ಟಿ ಮಾರಿ ಜೀವನ ನಡೆಸುವ ಮಹಿಳೆಯರ ಕಥೆ–ವ್ಯಥೆ

ನಾ.ಮಂಜುನಾಥ ಸ್ವಾಮಿ
Published 8 ಮಾರ್ಚ್ 2019, 9:38 IST
Last Updated 8 ಮಾರ್ಚ್ 2019, 9:38 IST
ಯಳಂದೂರು ತಾಲ್ಲೂಕಿನ ಅಗರ ಗ್ರಾಮದಲ್ಲಿ ಹೂ ಮಾರಾಟದ ವೃತ್ತಿಯಲ್ಲಿ ಅರ್ಧ ಶತಮಾನ ಕಂಡ ಮಹಿಳೆಯರು
ಯಳಂದೂರು ತಾಲ್ಲೂಕಿನ ಅಗರ ಗ್ರಾಮದಲ್ಲಿ ಹೂ ಮಾರಾಟದ ವೃತ್ತಿಯಲ್ಲಿ ಅರ್ಧ ಶತಮಾನ ಕಂಡ ಮಹಿಳೆಯರು   

ಯಳಂದೂರು: ‘ಬುಟ್ಟಿ ತುಂಬ ಹತ್ತಾರು ಮೀಟರ್ ಹೂ ತುಂಬಿಕೊಂಡು ಬಸ್ ನಿಲ್ದಾಣದಆಸುಪಾಸಿನಲ್ಲಿ ಮಾರಾಟ ಮಾಡುತ್ತೇವೆ. ಹನ್ನೊಂದು ಗಂಟೆ ವೇಳೆಗೆ ಹಣ ಎಣಿಸಿಕೊಂಡು ಮನೆ ವಾರ್ತೆಗೆ ಬೇಕಾದ ಕಾಳುಕಡ್ಡಿಕೊಳ್ಳಲು ಹೊರಡುತ್ತೇವೆ...’

50 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಹೂವುಗಳನ್ನು ಕಟ್ಟುತ್ತಲೇ, ಹಾರ–ತುರಾಯಿ ಮಾರಾಟ ಮಾಡಿ ಬದುಕು ಕಟ್ಟಿಕೊಂಡಿರುವ ಇಳಿವಯಸ್ಸಿನ ಮಹಿಳೆಯರ ಮಾತುಗಳಿವು.ಆದರೆ, ಪುಷ್ಪ ಮಾರಾಟ ಮಾಡಿ ಇನ್ನೊಬ್ಬರ ಮುಡಿ ಮತ್ತು ಮನಕ್ಕೆ ಸುಗಂಧ ತುಂಬುವ ಇವರ ಬದುಕನ್ನು ಹೂ ಪರಿಮಳದ ಕಾಯಕ ಹಸನುಗೊಳಿಸಿಲ್ಲ.

‘ಮನೆಯವರ ಜೊತೆಗೂಡಿ ನಾಳೆಯ ಮಾರಾಟಕ್ಕೆ ಹೂ ಕಟ್ಟುವ ಸಿದ್ಧತೆಗೆ ತೊಡಗುತ್ತೇವೆ. ಹೀಗೆ ಐವತ್ತು ವರ್ಷಗಳಿಂದ ಹೂ ಕಟ್ಟುತ್ತಾ ಹಾರ-ತುರಾಯಿ ಮಾರಾಟ ಮಾಡಿ ಬದುಕು ಕಟ್ಟಿಕೊಂಡಿದ್ದೇನೆ. ಆದರೆ, ನಮ್ಮ ಬದುಕು ಬಂಗಾರವಾಗಿಲ್ಲ. ಈಗಲೂ ಅದೇ ಕೆಲಸ ಮಾಡುತ್ತಿದ್ದೇವೆ’ ಎಂದು ಬೇಸರದಿಂದಲೇ ಹೇಳಿಕೊಳ್ಳುತ್ತವೆ ಇಳಿವಯಸ್ಸಿನ ಜೀವಗಳು.

ADVERTISEMENT

ತಾಲ್ಲೂಕಿನ ಅಗರ, ಹೊನ್ನೂರು ಮತ್ತು ಯಳಂದೂರು ಮೊದಲಾದ ಕಡೆ ಬಹಳಷ್ಟು ಮಂದಿ ಹೂ ಮಾರಾಟ ಮಾಡಿ ಜೀವನ ನಡೆಸುತ್ತಾರೆ. ಇವರ ಆರ್ಥಿಕ ಮಟ್ಟ ಸುಧಾರಿಸಿಲ್ಲ. ಇವರಿಗೆ ಇತರೆ ವೃತ್ತಿಗಳಂತೆ ಸಾಲ ಇಲ್ಲವೇ ಸಹಾಯಧನ ಸವಲತ್ತು ಸಿಗುತ್ತಿಲ್ಲ.

‘ಹೂ ವ್ಯಾಪಾರ ನಂಬಿ ಅರ್ಧ ಶತಮಾನ ಜೀವನ ಸವೆಸಿದರೂ, ಎಣ್ಣೆ ಬತ್ತಿಗೆ ನೇರ ಎನ್ನುವಂತೆ ಆಗಿದೆ. ನಮ್ಮ ಸ್ಥಿತಿಗತಿ ತಿಳಿದು ಸರ್ಕಾರದ ಸವಲತ್ತು ಒದಗಿಸಲಿ’ ಎನ್ನುತ್ತಾರೆ ಇವರು.

‘ಪ್ರತಿ ದಿನ ಕೊಳ್ಳೇಗಾಲ ಮಾರುಕಟ್ಟೆಯಿಂದ ಐದರಿಂದ 10 ಕೆಜಿಯಷ್ಟು ಹೂ ಖರೀದಿಸುತ್ತೇವೆ. ದಿನ ಧಾರಣೆಯಲ್ಲಿ ವ್ಯತ್ಯಾಸ ಆಗುತ್ತದೆ. ₹200-₹500ರ ತನಕ ಹಣ ಹೊಂದಿಸಿಕೊಳ್ಳಬೇಕು. 1 ಕೆಜಿ ಕಾಕಡ ಹೂನಿಂದ 15 ಮಾರು (ಮೀಟರ್) ಕಟ್ಟಬಹುದು. ಕನಕಾಂಬರ 10 ಮಾರು ಆಗುವಲ್ಲಿ ಮುಗಿಯುತ್ತದೆ. ಮಲ್ಲಿಗೆ, ಜಾಜಿ, ಮರಲೆ ಪೋಣಿಸಿದರೆ ಹೆಚ್ಚು ಲಂಬಿಸುವುದಿಲ್ಲ. ಹೂ ಗಾತ್ರದ ಆಧಾರದ ಮೇಲೆ ಹೂ ಉದ್ದ ನಿರ್ಧಾರವಾಗುತ್ತದೆ’ ಎಂದು ಹೇಳುತ್ತಾರೆ ಅಗರದ ಮಾದಮ್ಮ.

‘ಹಬ್ಬ ಮತ್ತು ವಿಶೇಷ ದಿನಗಳಲ್ಲಿ ಹೂ ಮತ್ತು ಹಾರಕ್ಕ ಬೇಡಿಕೆ ಇರುತ್ತದೆ. ಇಂತಹ ಸಮಯ ಬಿಡಿ ಹೂಗಳನ್ನು ಕಟ್ಟಲು ಇತತರಿಗೆ 1 ಮಾರು ಹೂವಿಗೆ ₹5 ಕೂಲಿ ಕೊಡಬೇಕು. ಹೂ ಕಟ್ಟುವ ಕುಶಲತೆ ಇದ್ದರೆ ಹೆಚ್ಚು ಮೀಟರ್ ಹೂ ಸಿಗುವಂತೆ ಕಟ್ಟಿಕೊಡುತ್ತಾರೆ. ಹೊಸಬರು ಪೋಣಿಸಿದರೆ ಉದ್ದ ಕಡಿಮೆ ಆಗುತ್ತದೆ. ಉತ್ತಮ ಧಾರಣೆ ಇದ್ದರೆ ಮಾತ್ರ ಲಾಭ. ಇಲ್ಲವಾದರೆ ದೈನಂದಿನ ಖರ್ಷಿಗೆ ಸಾಕಾಗುವಷ್ಟು ಮಾತ್ರ ಹಣ ಲಭಿಸುತ್ತದೆ’ ಎಂದು ತಮ್ಮ ವ್ಯಾಪಾರದ ಕಷ್ಟವನ್ನು ಅವರು ವಿವರಿಸಿದರು.

ಕಷ್ಟದ ನಡುವೆಯೇ ಸಾಗಿದ ಬದುಕು
ಹಲವರು ವ್ಯಾಪಾರಕ್ಕಾಗಿ ಬಸ್ ನಿಲ್ದಾಣವನ್ನುಅವಲಂಬಿಸಿದ್ದಾರೆ. ಮಾರಾಟವಾಗದೆ ಉಳಿದ ಹೂವನ್ನು ಮನೆ ಮನೆಗಳಿಗೆ ಕಡಿಮೆ ಬೆಲೆಗೆ ನೀಡುತ್ತಾರೆ. ಒಟ್ಟಾರೆ ಬುಟ್ಟಿ ಕಾಲಿಯಾದ ನಂತರವೇ ಮನೆಗೆ ತೆರಳಬೇಕು. ಆಯಾ ದಿನವೇ ನಾಳಿನ ಸಿದ್ಧತೆಗೆ ಮೊಗ್ಗು ಹೊಂದಿಸಬೇಕು. ಇಷ್ಟೆಲ್ಲ ಕಷ್ಟದ ನಡುವೆಯೇ ಅನ್ಯ ಮಾರ್ಗವಿಲ್ಲದೆ ಹೊಟ್ಟೆ ಹೊರೆದುಕೊಳ್ಳಲು ಹಿರಿಯ ಜೀವಗಳು ಈ ಕಸುಬವನ್ನೇ ಅವಲಂಬಿಸಿವೆ.

‘ನಮ್ಮ ಗ್ರಾಮದಲ್ಲಿ ಹತ್ತಾರು ವರ್ಷಗಳಿಂದ ಹೂ ನಂಬಿಕೊಂಡು ಬದುಕುತ್ತಿದ್ದೇವೆ. ಹಲವರು ನಮಗೆ ಮನೆ ಮತ್ತು ನೆರವು ಒದಗಿಸುವ ಭರವಸೆ ಮಾತ್ರ ನೀಡುತ್ತಿದ್ದಾರೆ. ಪ್ರತಿ ಚುನಾವಣೆ ಸಮಯ ನಮಗೆ ಆಶ್ವಾಸನೆ ಸಿಗುತ್ತದೆ. ಮತ್ತೊಂದು ವೃತ್ತಿ ನಮಗೆ ಗೊತ್ತಿಲ್ಲ. ಇಳಿವಯಸ್ಸಿನಲ್ಲಿ ಇದನ್ನೇ ನಂಬಿರುವ ನಮ್ಮನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಬೇಕು’ ಎಂಬುದು ಬಹುತೇಕ ಸ್ತ್ರೀಯರ ಆಗ್ರಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.