ADVERTISEMENT

‘ಬಾಲ್ಯವಿವಾಹ ತಡೆಗೆ ಜಾಗೃತಿಯೇ ಮದ್ದು’

ಬಾಲ್ಯವಿವಾಹ ನಿಷೇಧ ಕಾಯ್ದೆ ಭಾಗಿದಾರರಿಗೆ ತರಬೇತಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 16:08 IST
Last Updated 23 ಜನವರಿ 2023, 16:08 IST
ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌ ಮಾತನಾಡಿದರು. ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಎಂ. ಶ್ರೀಧರ ಇದ್ದರು
ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌ ಮಾತನಾಡಿದರು. ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಎಂ. ಶ್ರೀಧರ ಇದ್ದರು   

ಚಾಮರಾಜನಗರ: ‘ಬಾಲ್ಯ ವಿವಾಹ ನಿಷೇಧವನ್ನು ಸಂಪೂರ್ಣವಾಗಿ ಜಾರಿಗೆ ತರಲು ಜನರಿಗೆ ಕಾಯ್ದೆಯ ಬಗ್ಗೆ ಮನವವರಿಕೆ ಮಾಡಿಕೊಡುವ ಕೆಲಸ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಸೋಮವಾರ ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದ ಹಳೆ ಕೆಡಿಪಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳ ಸಹಯೋಗದೊಂದಿಗೆ ನಡೆದ ಬಾಲ್ಯ ವಿವಾಹ ನಿಷೇಧ ಕುರಿತು ಭಾಗಿದಾರರಿಗೆ ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಬಾಲ್ಯ ವಿವಾಹ ನಿಷೇಧ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ಕೆಲವೊಂದು ಕಾನೂನುಗಳನ್ನು ಸುಲಭವಾಗಿ ಅನುಷ್ಠಾನಗೊಳಿಸಬಹುದು. ಆದರೆ ಕೆಲವನ್ನು ಅನುಷ್ಠಾನಗೊಳಿಸಲು ಕ್ಲಿಷ್ಟವಾಗಬಹುದು. ಬಹಳ ವರ್ಷಗಳಿಂದ ನಡೆದುಕೊಂಡು ಬಂದಿರುವುದನ್ನು ಇದು ಸರಿಯಲ್ಲ ಅಂತ ಹೇಳಿ ತಪ್ಪಿಸಲು ಸ್ಪಲ್ಪ ಕಷ್ಟವಾಗಬಹುದು’ ಎಂದರು.

ADVERTISEMENT

‘ಬಾಲ್ಯವಿವಾಹ ನಡೆಯುತ್ತಿರುವ ಸಂದರ್ಭದಲ್ಲಿ ಹೋಗಿ ಮದುವೆ ನಿಲ್ಲಿಸುವುದು ಕಷ್ಟಕರ. ಮದುವೆಯ ಹಂತಕ್ಕೆ ಹೋಗುವ ಮೊದಲೇ ಮನೆಯವರಿಗೆ, ಹೆಣ್ಣುಮಕ್ಕಳಿಗೆ ಬಾಲ್ಯ ವಿವಾಹ ಹಾಗೂ ಅದರಿಂದಾಗುವ ಸಮಸ್ಯೆಗಳ ಬಗ್ಗೆ ಮೊದಲೇ ಅರಿವು ಮೂಡಿಸುವಂತಹ ಕೆಲಸ ಮಾಡಬೇಕು. ತಮ್ಮ ವ್ಯಾಪ್ತಿಯಲ್ಲಿ ಇಂತಹ ಪ್ರಕರಣಗಳನ್ನು ಬಂದರೆ ವರ್ಷಕ್ಕೆ ಒಂದಾದರೂ ತಡೆಯುತ್ತೇವೆ ಎನ್ನುವ ಪ್ರತಿಜ್ಞೆಯನ್ನು ಅಧಿಕಾರಿಗಳು ಮಾಡಬೇಕು’ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾದ ಸದಸ್ಯ ಕಾರ್ಯದರ್ಶಿ ಶ್ರೀಧರ ಎಂ. ಮಾತನಾಡಿ, ‘ಚಾಮರಾಜನಗರದಲ್ಲಿ ಒಂದು ವರ್ಷದಿಂದ ನಿರಂತರವಾಗಿ ಅನೇಕ ಕಾರ್ಯಾಗಾರವನ್ನು ಮಾಡಿದ್ದೇವೆ. ರಾಜ್ಯದಲ್ಲೇ ಬಾಲ್ಯ ವಿವಾಹದಲ್ಲಿ ಜಿಲ್ಲೆ 6ನೇ ಸ್ಥಾದಲ್ಲಿ ಇದ್ದು, ಅಧಿಕಾರಿಗಳು ಹಾಗೂ ಕೆಳಹಂತದ ಅಧಿಕಾರಿಗಳ ಮೂಲಕ ಬಾಲ್ಯ ವಿವಾಹದ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದರು.

‘ಚಾಮರಾಜನಗರದಲ್ಲಿ 723 ಗ್ರಾಮಗಳಿದ್ದು, ಎಲ್ಲ ಕಡೆಗಳಲ್ಲೂ ಜಾಗೃತಿ ಮೂಡಿಸಬೇಕು. ಆಗ ಮಾತ್ರ ಜಿಲ್ಲೆಗೆ ಅಂಟಿರುವ ಕಳಂಕ ಹೋಗಲಾಡಿಸಲು ಸಾಧ್ಯ’ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಕೆ ಉಪ ನಿರ್ದೇಶಕಿ ಗೀತಾಲಕ್ಷ್ಮಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಸರಸ್ವತಿ, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣಿಕೊಪ್ಪ, ಜಿಲ್ಲಾ ಪಂಚಾಯಿತಿ ಲೆಕ್ಕಾಧಿಕಾರಿ ಎಚ್.ಎಸ್.ಗಂಗಾಧರ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಧರಣೇಶ್, ಮೈಸೂರು ಒ.ಡಿ.ಪಿ. ಸಂಸ್ಥೆ ಧನರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.