ADVERTISEMENT

ಒತ್ತಡರಹಿತ ಜೀವನದಿಂದ ಆರೋಗ್ಯಕರ ಬದುಕು: ನ್ಯಾಯಾಧೀಶೆ ವಿಶಾಲಾಕ್ಷಿ

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2018, 14:20 IST
Last Updated 12 ಅಕ್ಟೋಬರ್ 2018, 14:20 IST
ಕಾರ್ಯಕ್ರಮವನ್ನು ಸಿ.ಜಿ.ವಿಶಾಲಾಕ್ಷಿ ಉದ್ಘಾಟಿಸಿದರು
ಕಾರ್ಯಕ್ರಮವನ್ನು ಸಿ.ಜಿ.ವಿಶಾಲಾಕ್ಷಿ ಉದ್ಘಾಟಿಸಿದರು   

ಚಾಮರಾಜನಗರ: ಜೀವನದಲ್ಲಿನ ಒತ್ತಡಗಳನ್ನು ಸಮರ್ಪಕವಾಗಿ ನಿವಾರಿಸಿಕೊಂಡರೆಆರೋಗ್ಯಕರಬದುಕು ಕಂಡುಕೊಳ್ಳಲು ಸಾಧ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜಿ.ವಿಶಾಲಾಕ್ಷಿ ಶುಕ್ರವಾರ ಅಭಿಪ್ರಾಯಪಟ್ಟರು.

ಪಟ್ಟಣದ ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಜಿಲ್ಲಾ ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ‘ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.

‘ಬದಲಾಗುತ್ತಿರುವ ಜಗತ್ತಿನಲ್ಲಿ ಯುವಜನರು ಮತ್ತು ಮಾನಸಿಕ ಆರೋಗ್ಯ’ ಎಂಬ ವಿಷಯದ ಕುರಿತು ಮಾತನಾಡಿದ ಅವರು, ‘ಎಲ್ಲರೂ ಒತ್ತಡಗಳನ್ನು ನಿಗ್ರಹಿಸಬೇಕು. ಮಾನಸಿಕ ದೌರ್ಬಲ್ಯ, ಒತ್ತಡದ ಜೀವನ ಹಲವು ಸಮಸ್ಯೆ ಹಾಗೂ ರೋಗಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಎಲ್ಲರೂ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಪ್ರತಿಷ್ಠೆ ಬೇಡ: ಕೆಲವು ಪೋಷಕರು ತಮ್ಮ ಪ್ರತಿಷ್ಠೆ–ಗೌರವಕ್ಕಾಗಿಹೆಚ್ಚು ಅಂಕ ಗಳಿಸು ಎಂದು ಮಕ್ಕಳ ಮೇಲೆ ಒತ್ತಡ ಹೇರುತ್ತಾರೆ. ಇದರಿಂದ ಮಕ್ಕಳು ತೀವ್ರತರವಾದ ಒತ್ತಡಕ್ಕೆ ಸಿಲುಕುತ್ತಾರೆ. ಅಲ್ಲದೆ, ಶಾಲೆಯಲ್ಲಿ ಹೆಚ್ಚು ಸಮಯ ಕಳೆಯುವ ಮಕ್ಕಳಿಗೆ ಶಿಕ್ಷಕರು ಅತಿಯಾದ ಒತ್ತಡವನ್ನು ಹೇರಬಾರದು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಕೆ.ಹರೀಶ್ ಕುಮಾರ್ ಮಾತನಾಡಿ, ‘ಶೇ 80ರಷ್ಟು ಮನುಷ್ಯರಿಗೆ ಆಲೋಚನೆಯಿಂದಲೇ ರೋಗ ಬರುತ್ತದೆ. ಜ್ಞಾನಕ್ಕೆ ಸಂಬಂಧಿಸಿದ ಎಲ್ಲವೂ ಮನಸ್ಸಿಗೆ ಸಂಬಂಧಿಸಿರುತ್ತದೆ. ಸತತ ಓದಿನಿಂದ ಜ್ಞಾನ, ಉತ್ತಮ ಆಲೋಚನೆಯ ಪರಿ ವೃದ್ಧಿಯಾಗುತ್ತದೆ. ಸರಿ–ತಪ್ಪು ಗ್ರಹಿಸಬಹುದು. ಮನಸ್ಸು ಕಲುಷಿತಗೊಂಡರೆ ದೇಹದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ, ಓದುವಿಕೆಯನ್ನು ಮೈಗೂಡಿಸಿಕೊಳ್ಳಬೇಕು. ಯೋಚನಾ ಲಹರಿ ಸದೃಢಗೊಳಿಸಿಕೊಳ್ಳಬೇಕು’ ಎಂದರು.

‘ಇಂದಿನ ದೃಶ್ಯ ಮಾಧ್ಯಮಗಳಲ್ಲಿ ಬಿತ್ತರವಾಗುವ ಸುದ್ದಿಗಳೆಲ್ಲವೂ ಸರಿ ಎನ್ನಲು ಸಾಧ್ಯವಿಲ್ಲ. ಸರಿ ತಪ್ಪುಗಳ ಗ್ರಹಿಕೆ ನಮ್ಮಲ್ಲಿರುತ್ತದೆ. ನಮ್ಮ ವಿವೇಚನೆಯಿಂದ ನಮಗೆ ಅರಿವಾಗುತ್ತದೆ. ಇಂದು ಮೊಬೈಲ್‌ ಮೂಲಕ ಅಂಗೈಯಲ್ಲೇ ಎಲ್ಲವೂ ಸಿಗುತ್ತದೆ. ಇದರ ಬಳಸುವಿಕೆಯಲ್ಲಿ ನಮ್ಮ ಅರಿವು ಇರಬೇಕು’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜೆಎಸ್‌ಎಸ್‌ ನರ್ಸಿಂಗ್‌ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಡಿವೈಎಸ್‌ಪಿ ಜಯಕುಮಾರ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿಡಾ.ಸಿ.ರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಕೆ. ಪ್ರಸಾದ್,ಮನೋವೈದ್ಯ ಡಾ.ಆರ್.ರಾಜೇಶ್, ಲಸಿಕಾ ಕಾರ್ಯಕ್ರಮ ಅಧಿಕಾರಿ ಡಾ.ವಿಶ್ವೇಶ್ವರಯ್ಯ, ಸರ್ಕಾರಿ ನರ್ಸಿಂಗ್‌ ಕಾಲೇಜಿನ ಪ್ರಾಂಶುಪಾಲ ಮಹಮ್ಮದ್‌ ಕದುರುತುಲ್ಲಾ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್, ಪ್ರಧಾನ ಕಾರ್ಯದರ್ಶಿ ಆರ್.ಅರುಣ್‌ ಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಕಾಂತರಾಜು, ವಕೀಲ ವೆಂಕಟಾಚಲ ಇದ್ದರು.

‘ವೈದ್ಯರು–ಓದುಒಂದಾದರೆ ಆರೋಗ್ಯ ಸದೃಢ’

‘ದೇಹದ ಆರೋಗ್ಯ ಸರಿಪಡಿಸಲು ವೈದ್ಯರು ಬೇಕು. ಅದರಂತೆ ಮಾನಸಿಕ ನೆಮ್ಮದಿ ಬೇಕಾದರೆ ಸತತ ಅಧ್ಯಯನ ಬೇಕು. ಜೀವನದಲ್ಲಿ ವೈದ್ಯರು–ಓದು ಒಂದಾದರೆ ಸದೃಢ ಆರೋಗ್ಯ ನಮ್ಮದಾಗುತ್ತದೆ’ ಎಂದು ಹರೀಶ್‌ ಕುಮಾರ್‌ ಹೇಳಿದರು.

ಗೇಲಿ ಮಾಡಬೇಡಿ: ಮಾನಸಿಕ ರೋಗಿಗಳನ್ನು ನೋಡಿ ಗೇಲಿ ಮಾಡಬಾರದು.ಅವರನ್ನು ಗುರುತಿಸಿ ಸೂಕ್ತ ಚಿಕಿತ್ಸೆ ಕೊಡಿಸಲು ಮುಂದಾಗಬೇಕು. ಅವರ ಬಗ್ಗೆ ಸಮಾಜ ನಿರ್ಲಕ್ಷ್ಯ ವಹಿಸದೇ ಸಮಾಜದ ಮುಖ್ಯ ವಾಹಿನಿಗೆ ತರಬೇಕು. ಕಾನೂನಿನ ಅನ್ವಯ ಅವರಿಗೆ ರಕ್ಷಣೆ ಒದಗಿಸಲು ಮುಂದಾಗಬೇಕು ಎಂದು ಸಿ.ಜಿ ವಿಶಾಲಾಕ್ಷಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.